
ಬೆಂಗಳೂರು (ಸೆ.25): ದೀರ್ಘಾವಧಿಯವರೆಗೆ ಮದ್ಯದಂಗಡಿಗಳನ್ನು ತೆರೆಯದ ಮತ್ತು ಪರವಾನಗಿ ನವೀಕರಿಸದ ಮಾಲೀಕರಿಗೆ ರಾಜ್ಯ ಸರ್ಕಾರವು ಭಾರೀ ಆಘಾತ ನೀಡಲು ಮುಂದಾಗಿದೆ. ಕಳೆದ ಒಂದು ವರ್ಷದಿಂದ ಕಾರ್ಯಾರಂಭ ಮಾಡದ ಸುಮಾರು 579 ಮದ್ಯದಂಗಡಿಗಳ ಲೈಸೆನ್ಸ್‌ಗಳನ್ನು* (ಪರವಾನಗಿಗಳನ್ನು) ಹರಾಜು ಹಾಕಲು ಅಬಕಾರಿ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ನೋಟಿಫಿಕೇಷನ್ ಸಹ ಹೊರಡಿಸಿದೆ.
ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಈ ಕ್ರಮದಿಂದ, ಮದ್ಯದಂಗಡಿ ಲೈಸೆನ್ಸ್ ಪಡೆದು ವರ್ಷಗಳಿಂದ ಅಂಗಡಿ ತೆರೆಯದೆ 'ಬ್ಲಾಕ್' ಮಾಡಿದ್ದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಬಕಾರಿ ಇಲಾಖೆ ಹರಾಜಿಗೆ ಮುಂದಾಗಿರುವ ಒಟ್ಟು 579 ಲೈಸೆನ್ಸ್‌ಗಳು ಈ ಕೆಳಗಿನ ವರ್ಗಗಳಿಗೆ ಸೇರಿವೆ:
ಪರವಾನಗಿದಾರರು ಸಾವನ್ನಪ್ಪಿರುವ ಪ್ರಕರಣಗಳು, ಹಾಗೂ ಒಂದು ವರ್ಷದಿಂದ ನವೀಕರಣ ಮಾಡದೇ ಇರುವ ಕಾರಣದಿಂದ ಬಾಕಿ ಉಳಿದಿರುವ ಲೈಸೆನ್ಸ್‌ಗಳನ್ನು ಹರಾಜು ಹಾಕಲು ಇಲಾಖೆ ನಿರ್ಧರಿಸಿದೆ.
ಈ ಮಹತ್ವದ ನಿರ್ಧಾರದ ಬಗ್ಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಲೈಸೆನ್ಸ್‌ಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಬಕಾರಿ ಇಲಾಖೆ ಚಿಂತನೆ ನಡೆಸಿದೆ. ಸದ್ಯ, ಹೊಸ CL-2 ಲೈಸೆನ್ಸ್ ಹಂಚಿಕೆಯನ್ನು ಸರ್ಕಾರವು 1992ರಿಂದಲೇ ನಿಲ್ಲಿಸಿದೆ. ಹೀಗಾಗಿ, ದೀರ್ಘಾವಧಿಯ ನಂತರ ಇಷ್ಟೊಂದು ಸಂಖ್ಯೆಯ CL-2 ಲೈಸೆನ್ಸ್‌ಗಳು ಹರಾಜಿಗೆ ಲಭ್ಯವಾಗುತ್ತಿರುವುದು ಮಹತ್ವದ ಸಂಗತಿಯಾಗಿದೆ.
ಹೊಸ ನಿಯಮ ಜಾರಿ: ನಿರಂತರವಾಗಿ ಮುಚ್ಚಿದ್ದರೆ ಲೈಸೆನ್ಸ್ ಹರಾಜು:
ಸರ್ಕಾರವು ಭವಿಷ್ಯದ ದೃಷ್ಟಿಯಿಂದಲೂ ಒಂದು ಕಠಿಣ ಕ್ರಮವನ್ನು ಜಾರಿಗೊಳಿಸಲು ತೀರ್ಮಾನಿಸಿದೆ.
1. ಆರು ತಿಂಗಳು ಅಂಗಡಿ ಮುಚ್ಚಿದರೆ ಲೈಸೆನ್ಸ್ ರದ್ದು: ಇನ್ಮುಂದೆ ಪರವಾನಗಿ ಪಡೆದವರು ನಿರಂತರವಾಗಿ '6 ತಿಂಗಳುಗಳ ಕಾಲ ಅಂಗಡಿ' ಬಾಗಿಲು ಹಾಕಿದ್ದರೆ, ಆ ಲೈಸೆನ್ಸ್ ಅನ್ನು ಹರಾಜು ಹಾಕಲು ತೀರ್ಮಾನಿಸಲಾಗಿದೆ.
2. ನವೀಕರಿಸದ ಲೈಸೆನ್ಸ್‌ಗಳು ಐದು ವರ್ಷಕ್ಕೊಮ್ಮೆ ಹರಾಜು: ಹಾಗೆಯೇ, ಒಂದು ವರ್ಷದಿಂದ ನವೀಕರಣ ಮಾಡದ ಲೈಸೆನ್ಸ್‌ಗಳನ್ನು 'ಪ್ರತಿ 5 ವರ್ಷಗಳಿಗೊಮ್ಮೆ ಹರಾಜು' ಹಾಕಲು ಸರ್ಕಾರ ಯೋಜಿಸಿದೆ.
ಸದ್ಯ ಹರಾಜಿನ ಕುರಿತು ಅಬಕಾರಿ ಇಲಾಖೆ ನೋಟಿಫಿಕೇಷನ್ ಹೊರಡಿಸಿದ್ದು, ಆಸಕ್ತರು ಈ ಬಗ್ಗೆ 10 ದಿನಗಳವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ಈ ಕಠಿಣ ಕ್ರಮವು, ಲೈಸೆನ್ಸ್ ಪಡೆದು ಸುಮ್ಮನೆ ಕೂತ ಮಾಲೀಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಹೊಸ ಉದ್ಯಮಿಗಳಿಗೆ ಅವಕಾಶ ತೆರೆದುಕೊಡಲಿದೆ.
2,000 ಕೋಟಿ ಆದಾಯ ನಿರೀಕ್ಷೆಯಿದೆ:
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು, ಈಗಾಗಲೇ ಲೈಸನ್ಸ್ ಪಡೆದು ಮದ್ಯದ ಅಂಗಡಿ ಓಪನ್ ಮಾಡದೆ ಇರುವ ಪ್ರಕರಣಗಳಲ್ಲಿ ರೀ-ಹರಾಜು ಹಾಕಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಡ್ರಾಫ್ಟ್ ರೆಡಿ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಲಾಗಿದೆ. ಹರಾಜು ಪ್ರಕ್ರಿಯೆ ಜನರಲ್ ಆಗಿ ಮಾಡಬೇಕಾ? ಅಥವಾ ಮೀಸಲಾತಿ ನಿಗದಿ ಮಾಡಬೇಕಾ ಅಂತಾ ಚರ್ಚೆ ಆಗುತ್ತಿದೆ. ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ. 2,000 ಕೋಟಿ ಆದಾಯ ನಿರೀಕ್ಷೆ ಇದೆ. ಅದಕ್ಕಾಗಿಯೇ ರೀ ಹರಾಜು ಮಾಡ್ತಾ ಇದ್ದೇವೆ. ಹೊಸ ಲೈಸನ್ಸ್ ಕೊಡ್ತಾ ಇಲ್ಲ. ಬರೀ ಉಳಿಕೆ ಲೈಸನ್ಸ್ ಮಾತ್ರ ಕೊಡುತ್ತಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ