
ಬೆಂಗಳೂರು (ಮಾ.27): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ (NWKRTC) ವಿವಿಧ ವೃಂದದ ದರ್ಜೆ-2 ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಿದೆ. ಏಪ್ರಿಲ್ 9 ರಂದು ನಡೆಯಬೇಕಿದ್ದ ಪರೀಕ್ಷೆಯು ಈಗ ಏಪ್ರಿಲ್ 10 ಕ್ಕೆ ಮುಂದೂಡಲ್ಪಟ್ಟಿದೆ.
ಪ್ರಾಧಿಕಾರದ ಪ್ರಕಟಣೆಯ ಪ್ರಕಾರ, ಏಪ್ರಿಲ್ 9, 2026 ರಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಚುನಾವಣಾ ಪ್ರಕ್ರಿಯೆ ಮತ್ತು ಭದ್ರತೆಯ ದೃಷ್ಟಿಯಿಂದ ಅಂದು ಪರೀಕ್ಷೆ ನಡೆಸುವುದು ಕಷ್ಟಸಾಧ್ಯವಾದ ಕಾರಣ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಪರೀಕ್ಷೆಯನ್ನು ಒಂದು ದಿನ ಮುಂದಕ್ಕೆ ಅಂದರೆ ಏಪ್ರಿಲ್ 10, 2026 ರ ಶುಕ್ರವಾರದಂದು ನಡೆಸಲು ತೀರ್ಮಾನಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 33 ವಿವಿಧ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು 2,500 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಮಾತ್ರ ಈ ಲಿಖಿತ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರಗಳನ್ನು (Hall Tickets) ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಪರಿಷ್ಕೃತ ವೇಳಾಪಟ್ಟಿ (ಏಪ್ರಿಲ್ 10, 2026 - ಶುಕ್ರವಾರ)
ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಗಮನಿಸಬೇಕಾದ ಕಟ್ಟುನಿಟ್ಟಿನ ನಿಯಮಗಳು:
ಋಣಾತ್ಮಕ ಮೌಲ್ಯಮಾಪನ (Negative Marking): ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಅಂಕಗಳನ್ನು (0.75 ಅಂಕ) ಕಳೆಯಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕರಾಗಿ ಉತ್ತರ ನೀಡಬೇಕು.
ಐದನೇ ಆಯ್ಕೆಯ ನಿಯಮ: ಉತ್ತರ ನೀಡದ ಪ್ರಶ್ನೆಗಳಿಗೆ 'ಐದನೇ ಆಯ್ಕೆ/ವೃತ್ತ'ವನ್ನು ಶೇಡ್ ಮಾಡುವುದು ಕಡ್ಡಾಯ. ಯಾವುದೇ ಆಯ್ಕೆಯನ್ನು ಶೇಡ್ ಮಾಡದಿದ್ದಲ್ಲಿ ಆ ಪ್ರಶ್ನೆಗೆ 0.75 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಇದಕ್ಕಾಗಿ ಪರೀಕ್ಷೆಯ ನಂತರ ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ವರದಿ ಮಾಡುವ ಸಮಯ: ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ (Friscking) ಪ್ರಕ್ರಿಯೆ ಇರುವುದರಿಂದ ಪರೀಕ್ಷೆ ಆರಂಭವಾಗುವ ಎರಡು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್ http://kea.kar.nic.in ಅನ್ನು ಗಮನಿಸುತ್ತಿರಲು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ