ಐದು ವರ್ಷದಲ್ಲಿ ದುಪ್ಪಟ್ಟಾದ ಕಾಡಾನೆಗಳ ಸಂತತಿ: ಮಾನವರ ಮೇಲಿನ ದಾಳಿಯೂ ಹೆಚ್ಚಳ

By Sathish Kumar KH  |  First Published Jun 7, 2023, 7:55 PM IST

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2017ರಲ್ಲಿ 700 ರಷ್ಟಿದ್ದ ಕಾಡಾನೆಗಳ ಸಂಖ್ಯೆ ಇದೀಗ ಬರೋಬ್ಬರಿ 1,226ಕ್ಕೆ ಏರಿಕೆಯಾಗಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.07): ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಹಿಂದೆಂದಿಗಿಂತ ಇಂದು ವಿಪರೀತವಾಗುತ್ತಿದೆ. ಅದಕ್ಕೆ ಎರಡು ಕಾರಣಗಳಿವೆ. ಒಂದು ದಿನದಿಂದ ದಿನಕ್ಕೆ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿರುವುದು. ಎರಡನೆಯದ್ದು ಕಾಡಾನೆಗಳ ಸಂತತಿ ಗಣನೀಯವಾಗಿ ಎರಡು ಪಟ್ಟು ವೃದ್ಧಿಯಾಗಿರುವುದು. 

Latest Videos

undefined

ಹೌದು ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. ಅಂದರೆ 2017 ರವರೆಗೆ 700 ರಷ್ಟಿದ್ದ ಕಾಡಾನೆಗಳ ಸಂಖ್ಯೆ ಇದೀಗ ಜಿಲ್ಲೆಯಲ್ಲಿ ಬರೋಬ್ಬರಿ 1226 ರಕ್ಕೆ ಏರಿಕೆಯಾಗಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಅವುಗಳ ಆವಾಸಸ್ಥಾನದ ಜಾಗವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದು ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರುವುದಕ್ಕೆ ಕಾರಣವಾಗಿದೆ. ಇದು ಇಷ್ಟೇ ಅಲ್ಲ, ಇದರ ಜೊತೆಗೆ ಇರುವ ಅರಣ್ಯದ ಒಳಗೂ ಆನೆಗಳಿಗೆ ಬೇಕಾಗಿರುವ ಹುಲ್ಲುಗಾವಲು, ಬಿದಿರಿನಂತ ಗಿಡಗಳು ತೀರಾ ಕಡಿಮೆಯಾಗುತ್ತಿವೆ. ಇವುಗಳ ಬದಲಿಗೆ ಕೇವಲ ಆದಾಯದ ದೃಷ್ಟಿಯನ್ನಿಟ್ಟುಕೊಂಡು ಅರಣ್ಯ ಇಲಾಖೆ ಬೀಟೆ, ತೇಗದಂತಹ ಮರಗಳನ್ನು ಬೆಳೆಯಲು ಒತ್ತು ನೀಡುತ್ತಿದೆ. ಇಂತಹ ಮರಗಳನ್ನು ಬೆಳೆಯುತ್ತಿರುವುದರಿಂದ ಅವುಗಳ ಕೆಳಗೆ ಹುಲ್ಲು ಬೆಳೆಯದೆ ಆನೆಗಳು ಮೇವಿಗಾಗಿ ರೈತರ ತೋಟ, ಗದ್ದೆಗಳಿಗೆ ದಾಳಿ ಇಡುವುದು ಜಾಸ್ತಿಯಾಗಿದೆ. 

ಸ್ವಾತಂತ್ರ್ಯ ಬಂದು 75 ವರ್ಷವಾದರೂ ರಸ್ತೆ ಕಾಣದ ಗ್ರಾಮಗಳು: ದೋಣಿಯೇ ದೇವರು- ಕಾಲುಸಂಕವೇ ದೈವ

ಆನೆಗಳ ದಾಳಿ ತಡೆಗಟ್ಟುವ ಎಲ್ಲ ತಂತ್ರಗಳೂ ವಿಫಲ: ಆನೆಗಳು ಅರಣ್ಯ ಬಿಟ್ಟು, ತೋಟ ಗದ್ದೆಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಒಂದೆಡೆ ಅರಣ್ಯದ ಸುತ್ತ ಹ್ಯಾಂಗಿಂಗ್ ಸೋಲಾರ್ ಬೇಲಿ, ಆನೆ ಕಂದಕ ಮತ್ತು ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ ಮಡಿಕೇರಿ ಡಿಎಫ್ಓ ಪೂವಯ್ಯ. ಆದರೂ ಇವುಗಳು ಯಾವುವೂ ಸರಿಯಾಗಿ ಫಲನೀಡದೆ, ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ರೈಲ್ವೆ ಬ್ಯಾರಿಕೇಡ್ಗಳನ್ನು ನುಸುಳಲು ಪ್ರಯತ್ನಿಸುವ ಎಷ್ಟೋ ಆನೆಗಳು ಬ್ಯಾರಿಕೇಡ್ಗಳಿಗೆ ಸಿಲುಕಿ ಪರದಾಡುತ್ತವೆ. ಇನ್ನು ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿಗಳನ್ನು ದಾಟಿ ತೋಟಗಳಿಗೆ ನುಗ್ಗುವ ಆನೆಗಳು ಮಾನವನ ಗುಂಡೇಟಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿವೆ. 

ಆನೆಗಳ ಸಾವಿನ ಪ್ರಮಾಣವೂ ಅಧಿಕ:  ಆಹಾರ ಅರಸಿ ತೋಟ, ಗದ್ದೆಗಳಿಗೆ ಬರುವ ಇನ್ನೆಷ್ಟೋ ಆನೆಗಳು ಅಲ್ಲಿರುವ ಕೃಷಿ ಹೊಂಡಗಳಿಗೆ ಬಿದ್ದು ನರಳಾಡುತ್ತವೆ. ಹೊಂಡದಿಂದ ಮೇಲೆ ಬರಲಾಗದೆ ಆನೆಮರಿಗಳು ಕೃಷಿ ಹೊಂಡಗಳಲ್ಲಿ ಸಾವನ್ನಪ್ಪಿದ ಪ್ರಕರಣಗಳೂ ಇವೆ. ಒಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಕಾಡಾನೆಗಳ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ಎರಡುಪಟ್ಟು ಹೆಚ್ಚಳವಾಗಿದ್ದರೆ, ಅರಣ್ಯದ ಪ್ರಮಾಣವೂ ಕಡಿಮೆಯಾಗಿ ಕಾಡಾನೆಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಕಾಡಾನೆಗಳ ದಾಳಿಯಿಂದ ಮಾನವ ಜೀವ ಹಾನಿಗಳು ಸಂಭವಿಸುತ್ತಿವೆ. ಜೊತೆಗೆ ರೈತರು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಕಾಫಿ, ಅಡಿಕೆಯಂತ ಬೆಳೆಗಳು ನಾಶವಾಗಿ, ಕೈಯಿಗೆ ಬಂದ ತುತ್ತು ಬಾಯಿಗೆ ಬರದೆ ತೀವ್ರ ನಷ್ಟಕ್ಕೆ ಸಿಲುಕುತ್ತಿದ್ದಾರೆ. 

ರೈತರಿಗೆ ಗುಡ್‌ ನ್ಯೂಸ್‌: ಬಿಜೆಪಿ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ಮರುಪರಿಶೀಲನೆಗೆ ಮುಂದಾದ ಸರ್ಕಾರ

ಆನೆ ದಾಳಿ ಭಯಕ್ಕೆ ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ:  ಆನೆಗಳು ತೋಟ ಗದ್ದೆಗಳಲ್ಲೇ ಬೀಡು ಬಿಡುತ್ತಿರುವುದರಿಂದ ತೋಟದ ಕೆಲಸಗಳಿಗೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ಕೂಡ ಕೃಷಿಕರು ಮತ್ತಷ್ಟು ನಷ್ಟ ಅನುಭವಿಸುವಂತೆ ಮಾಡಿದೆ. ಆನೆಗಳ ಸಂಖ್ಯೆ ಮಿತಿಮೀರುತ್ತಿರುವುದರಿಂದ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಇದರ ಬಗ್ಗೆ ಸೂಕ್ತ ಗಮನ ಹರಿಸಿ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಇಲ್ಲದಿದ್ದರೆ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ಮತ್ತಷ್ಟು ಏರ್ಪಟ್ಟು ಮಾನವ ಮತ್ತು ಕಾಡು ಪ್ರಾಣಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರಾದ ಮಧು, ಭರತ್ ಮುಂತಾದವರು ಒತ್ತಾಯಿಸುತ್ತಿದ್ದಾರೆ. 

click me!