ಮುಡಾ ಪ್ರಕರಣದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲನೆ ಆಗಿಲ್ಲ. ರಾಜ್ಯಪಾಲರು ಕಾನೂನು ಬಾಹಿರವಾಗಿ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ತೀರ್ಮಾನ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಆ.18): ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಸರ್ಕಾರವನ್ನ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಸರ್ಕಾರ ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟವೇ ಮುಖ್ಯಮಂತ್ರಿಯವರ ಪರವಾಗಿ ನಿಲ್ಲುತ್ತದೆ. ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಡಾ ಪ್ರಕರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ವಿಧಾನಸೌಧದಲ್ಲಿ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ತನಿಖೆ ನಡೆದು ಈ ಸಂಸ್ಥೆ ಕಳೆದ ವರ್ಷವೇ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ, ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ವರದಿಗಳಿದ್ದರೂ ರಾಜ್ಯಪಾಲರು ತೀರ್ಮಾನ ಮಾಡಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ದೂರು ಬಂದ 24 ತಾಸಿನಲ್ಲೇ ಕಾರ್ಯಾಚರಣೆ ಶುರುಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ವಿರುದ್ದ ನಡೆಸಿರುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಪ್ರಾಸಿಕ್ಯೂಷನ್: ಯಡಿಯೂರಪ್ಪ ಬಳಿಕ ಬಳಿಕ ರಾಜ್ಯದಲ್ಲಿದು 2ನೇ ಕೇಸ್..!
ನಮ್ಮ ರಾಜಕೀಯ ಅನುಭವದಲ್ಲಿ ಯಾವುದಾದರೂ ತನಿಖೆಗೆ ಅನುಮತಿ ನೀಡಬೇಕಾದರೆ, ಯಾವುದಾದರೂ ತನಿಖಾ ಸಂಸ್ಥೆಯಿಂದ ಪ್ರಾಥಮಿಕ ತನಿಖೆ ನಡೆಸಿ ಆ ತನಿಖೆಯ ವರದಿಯಲ್ಲಿ ಸಿಎಂ ಸ್ಥಾನದಲ್ಲಿರುವವರ ವಿಚಾರಣೆ ಅಗತ್ಯವಿದೆ. ಎಂದು ಮನವರಿಕೆ ಮಾಡಿದ್ದರೆ ಆಗ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಬಹುದು. ಆದರೆ ಮುಡಾ ಪ್ರಕರಣದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲನೆ ಆಗಿಲ್ಲ. ರಾಜ್ಯಪಾಲರು ಕಾನೂನು ಬಾಹಿರವಾಗಿ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ತೀರ್ಮಾನ ಎಂದು ಹೇಳಿದರು.