ಐಸಿಯುನಲ್ಲಿರುವ ಸೋಂಕಿತರ ಸಂಖ್ಯೆ ದುಪ್ಪಟ್ಟು: ಮಾಸಾಂತ್ಯಕ್ಕೆ ನಿತ್ಯ 200+ ಬಲಿ?

By Kannadaprabha NewsFirst Published Apr 17, 2021, 7:17 AM IST
Highlights

ಮಾಸಾಂತ್ಯಕ್ಕೆ ಸಾವು ಉಲ್ಬಣ: ನಿತ್ಯ 200+ ಬಲಿ?| ಒಂದೇ ವಾರದಲ್ಲಿ ಐಸಿಯುನಲ್ಲಿರುವ ಸೋಂಕಿತರ ಸಂಖ್ಯೆ ದುಪ್ಪಟ್ಟು|  ಹೀಗಾಗಿ ಸಾವಿನ ಸಂಖ್ಯೆ ಕೂಡ ಭಾರೀ ಏರಿಕೆ ಭೀತಿ: ತಜ್ಞರು| ಸೋಂಕು, ಸಾವು ಎರಡೂ ಹೆಚ್ಚು!| ರಾಜ್ಯದಲ್ಲಿ ಮೊದಲನೇ ಅಲೆಗಿಂತ 2ನೇ ಅಲೆಯಲ್ಲಿ ಹೆಚ್ಚು ಸೋಂಕು, ಹೆಚ್ಚು ಸಾವು ಸಾಧ್ಯತೆ| ಮೇ 1ರ ವೇಳೆಗೆ ನಿತ್ಯ 25ರಿಂದ 30 ಸಾವಿರ ಸೋಂಕು ಸಾಧ್ಯತೆ: ತಾಂತ್ರಿಕ ಸಮಿತಿ ತಜ್ಞರ ಹೇಳಿಕೆ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಏ.17): ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕಳೆದ ಒಂದು ವಾರದಲ್ಲೇ ಐಸಿಯುನಲ್ಲಿರುವ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಪರಿಣಾಮ ಮುಂದಿನ ವಾರದಿಂದ ಕೊರೋನಾ ಸಾವು ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗಲಿದ್ದು, ಏಪ್ರಿಲ್‌ ಅಂತಿಮ ವಾರ ಹಾಗೂ ಮೇ ಮೊದಲ ವಾರದ ವೇಳೆಗೆ ನಿತ್ಯ 200ರಿಂದ 300 ಮಂದಿ ಕೊರೋನಾಗೆ ಸೋಂಕಿಗೆ ಬಲಿಯಾಗುವ ಸಾಧ್ಯತೆಯಿದೆ.

ಖುದ್ದು ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರೇ ಇಂತಹ ಸಾಧ್ಯತೆಯ ಆಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೊರೋನಾ ಸೋಂಕು ಹಾಗೂ ಸಾವು ಎರಡೂ ಮೊದಲನೇ ಅಲೆಗಿಂತ ಹೆಚ್ಚಿರಲಿದೆ. ಜೂನ್‌ ಎರಡನೇ ವಾರದವರೆಗೆ ಸಾರ್ವಜನಿಕರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಚಿಕಿತ್ಸೆಯೇ ಸಿಗದೆ ಪರದಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.

ಮೊದಲನೇ ಅಲೆಯಲ್ಲಿ 10,513 ಪ್ರಕರಣಗಳೇ ದಿನವೊಂದರ ಗರಿಷ್ಠ ಸೋಂಕು. ಎರಡನೇ ಅಲೆಯಲ್ಲಿ ಈಗಾಗಲೇ ಈ ದಾಖಲೆ ಮುರಿದಿದ್ದು ಶುಕ್ರವಾರ ಬರೋಬ್ಬರಿ 14,859 ಮಂದಿಗೆ ಸೋಂಕು ತಗುಲಿದೆ. ಸಾವಿನ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶುಕ್ರವಾರ 78 ಮಂದಿ ಮೃತಪಟ್ಟಿದ್ದಾರೆ. ಮಾ.1ರಂದು 118 ಮಂದಿ ಮಾತ್ರ ಐಸಿಯುನಲ್ಲಿದ್ದರೆ ಪ್ರಸ್ತುತ ನಾಲ್ಕು ಪಟ್ಟು ಹೆಚ್ಚಾಗಿದ್ದು, 577ಕ್ಕೆ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ.

ನಿತ್ಯ 25ರಿಂದ 30 ಸಾವಿರ ಸೋಂಕು!:

ಪ್ರಸ್ತುತ 15 ಸಾವಿರ ಗಡಿ ಮುಟ್ಟಿರುವ ಸೋಂಕು ತಿಂಗಳಾಂತ್ಯಕ್ಕೆ 25 ಸಾವಿರ ಗಡಿ ದಾಟಲಿದೆ. ಪ್ರಸ್ತುತ 0.52 ಸಾವಿನ ದರದಂತೆ ಸಾವುಗಳು ವರದಿಯಾಗುತ್ತಿದ್ದು, ಇದೇ ಪ್ರಮಾಣದಲ್ಲಿ ಸಾವು ವರದಿಯಾದರೂ 125 ರಿಂದ 150 ಮಂದಿ ನಿತ್ಯ ಸಾವನ್ನಪ್ಪಲಿದ್ದಾರೆ. ಆದರೆ, ಸಾವಿನ ದರ ಇಷ್ಟಕ್ಕೆ ನಿಲ್ಲುವುದಿಲ್ಲ. ಮೊದಲನೇ ಅಲೆಯ ಮಾದರಿಯಲ್ಲಿ ಶೇ.1 ರಿಂದ ಶೇ.1.2 ರವರೆಗೆ ಸಾವಿನ ದರ ತಲುಪುವ ಸಾಧ್ಯತೆ ಇದೆ. ಹೀಗಾದಲ್ಲಿ ನಿತ್ಯದ ಸಾವಿನ ಸಂಖ್ಯೆ 200ರ ಗಡಿ ದಾಟಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

ತಿಂಗಳ ಆರಂಭದಲ್ಲಿ ಶೇ.2.2 ರಷ್ಟಿದ್ದ ಕೊರೋನಾ ಪಾಸಿಟಿವಿಟಿ ದರ ಈಗ ಶೇ.11.2ಗೆ ತಲುಪಿದೆ. ಪ್ರತಿ 100 ಪರೀಕ್ಷೆಯಲ್ಲಿ 11.2 ಮಂದಿಗೆ ಸೋಂಕು ದೃಢವಾಗುತ್ತಿದೆ. ಪಾಸಿಟಿವಿಟಿ ದರ ಗಮನಿಸಿದರೆ ಈಗಾಗಲೇ ಬೆಂಗಳೂರಿನಾದ್ಯಂತ ಸೋಂಕು ಹರಡಿದೆ. ಹೀಗಾಗಿ ಕಟ್ಟೆಚ್ಚರ ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ.

ಮೇ 1ಕ್ಕೆ ನಿತ್ಯ 25 ಸಾವಿರ ಸೋಂಕು: ಡಾ| ಮಂಜುನಾಥ್‌

ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ‘ಈ ಬಾರಿ ಮೊದಲ ಅಲೆಗಿಂತ ಹೆಚ್ಚೆಚ್ಚು ಸೋಂಕು ವರದಿಯಾಗಲಿದೆ. ಮೇ ಮೊದಲ ವಾರದ ವೇಳೆಗೆ ನಿತ್ಯ 25 ಸಾವಿರ ಪ್ರಕರಣಗಳು ವರದಿಯಾಗಲಿವೆ. ಮೊದಲ ಅಲೆಯಲ್ಲಿ ಸಾವಿನ ದರ ಎಷ್ಟುವರದಿಯಾಗಿತ್ತೋ ಅದಕ್ಕಿಂತ ಕಡಿಮೆ ಇಲ್ಲದಂತೆ ಸಾವು ವರದಿಯಾಗಲಿದೆ. ಹೀಗಾಗಿ ಎಲ್ಲರೂ ತೀವ್ರ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ’ ಎಂದು ಹೇಳಿದರು.

ಹಾಸಿಗೆ ಸಿಗದೆ ಅಲೆದಾಟ ಆಗುತ್ತೆ:

ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್‌ಬಾಬು ಅವರ ಪ್ರಕಾರ, ‘ಮೇ ಮೊದಲ ವಾರದ ವೇಳೆಗೆ ನಿತ್ಯದ ಸೋಂಕಿನ ಪ್ರಕರಣ 30 ಸಾವಿರದ ಗಡಿ ದಾಟಲಿದೆ. ಪ್ರಸ್ತುತ ಇರುವ ಆಸ್ಪತ್ರೆಯ ಹಾಸಿಗೆಗಳು ಚಿಕಿತ್ಸೆಗೆ ಸಾಕಾಗುವುದಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಾಗ ಆತಂಕದಲ್ಲೇ ರೋಗಿ ಅರ್ಧ ಆರೋಗ್ಯ ಕಳೆದುಕೊಳ್ಳುತ್ತಾರೆ. ಸೋಂಕು ಹೆಚ್ಚಾದಂತೆ ಸಾವಿನ ಪ್ರಮಾಣವೂ ಹೆಚ್ಚಾಗಲಿದ್ದು, ಅಂತ್ಯಸಂಸ್ಕಾರಕ್ಕೂ ಅಲೆದಾಡುವ ಪರಿಸ್ಥಿತಿ ಎದುರಾಗಬಹುದು. ಉತ್ತರ ಪ್ರದೇಶದಲ್ಲಿನ ಸ್ಥಿತಿ ರಾಜ್ಯದಲ್ಲಿ ಮರುಕಳಿಸಬಾರದು ಎಂದಾದರೆ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅದೊಂದೇ ಪರಿಹಾರ’ ಎಂದು ಎಚ್ಚರಿಕೆ ನೀಡಿದರು.

ತುಂಬಾ ಹುಷಾರಾಗಿರಿ

ಈ ಬಾರಿ ಮೊದಲ ಅಲೆಗಿಂತ ಹೆಚ್ಚೆಚ್ಚು ಸೋಂಕು ವರದಿಯಾಗಲಿದೆ. ಮೇ ಮೊದಲ ವಾರದ ವೇಳೆಗೆ ನಿತ್ಯ 25 ಸಾವಿರ ಕೇಸ್‌ ವರದಿಯಾಗಲಿವೆ. ಸಾವು ಕೂಡ ಮೊದಲ ಅಲೆಗಿಂತ ಕಡಿಮೆಯಿಲ್ಲದೆ ವರದಿಯಾಗಲಿದೆ. ಹೀಗಾಗಿ ತೀವ್ರ ಮುನ್ನೆಚ್ಚರಿಕೆ ಅಗತ್ಯ.

- ಡಾ| ಸಿ.ಎನ್‌.ಮಂಜುನಾಥ್‌ ಕೊರೋನಾ ತಾಂತ್ರಿಕ ಸಮಿತಿ ಸದಸ್ಯ

click me!