ಕಾಂಗ್ರೆಸ್‌ನಿಂದ ‘1200 ಪ್ರಶ್ನೆ ಬ್ಯಾಂಕ್‌’ ಆಸ್ತ್ರ : ಹೊಸ ತಂತ್ರ

Kannadaprabha News   | Asianet News
Published : Sep 17, 2020, 09:31 AM IST
ಕಾಂಗ್ರೆಸ್‌ನಿಂದ ‘1200 ಪ್ರಶ್ನೆ ಬ್ಯಾಂಕ್‌’ ಆಸ್ತ್ರ : ಹೊಸ ತಂತ್ರ

ಸಾರಾಂಶ

ಸರ್ಕಾರದ ವೈಫಲ್ಯ ತೋರಿಸಲು ಮೊದಲ ಬಾರಿಗೆ ಕಾಂಗ್ರೆಸ್ ಹೊಸ ಅಸ್ತ್ರವೊಂದನ್ನು ಸಿದ್ಧಪಡಿಸಿದೆ. ಸಾವಿರ ಪ್ರಶ್ನೆಗಳನ್ನು ತಯಾರಿ ಮಾಡಲಾಗಿದೆ.

 ಬೆಂಗಳೂರು (ಸೆ.17):  ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳಿಗೆ ಕನ್ನಡಿ ಹಿಡಿಯುವ ದೃಷ್ಟಿಯಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 1,200ಕ್ಕೂ ಹೆಚ್ಚು ಪ್ರಶ್ನೆಗಳುಳ್ಳ ‘ಪ್ರಶ್ನೆ ಬ್ಯಾಂಕ್‌’ ಅನ್ನು ಕಾಂಗ್ರೆಸ್‌ ಪಕ್ಷ ಸಿದ್ಧಪಡಿಸಿ ಶಾಸಕರಿಗೆ ನೀಡಿದೆ.

ಜೊತೆಗೆ ಲಭ್ಯವಿರುವ 8 ದಿನಗಳ ಸೀಮಿತ ಅವಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರದ ವೈಫಲ್ಯಗಳನ್ನು ಎತ್ತಿತೋರಿಸಲು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಎಲ್ಲ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.

ಅಲ್ಲದೆ, ನೆರೆ ನಿರ್ವಹಣೆ ವೈಫಲ್ಯ, ಕೇಂದ್ರದಿಂದ ಜಿಎಸ್‌ಟಿ ಹಾಗೂ ನೆರೆ ಪರಿಹಾರ ಕೇಳದ ಸರ್ಕಾರದ ಹಿಂಜರಿಕೆ, ಕೊರೋನಾ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ವೈಫಲ್ಯ, ಡ್ರಗ್ಸ್‌ ತನಿಖೆಯ ಹಾದಿ ತಪ್ಪಿಸುತ್ತಿರುವ ರೀತಿ, ಬಿ-ಖರಾಬು ಜಮೀನು ಮಾರಾಟಕ್ಕೆ ಮುಂದಾಗಿರುವುದು ಸೇರಿದಂತೆ ಬಿಜೆಪಿ ಸರ್ಕಾರದ ಜನ ವಿರೋಧಿ ಧೋರಣೆ ಹಾಗೂ ವೈಫಲ್ಯಗಳನ್ನು ಎತ್ತಿ ತೋರಿಸುವ ವೇದಿಕೆಯನ್ನಾಗಿ ಸದನವನ್ನು ಮಾಡಿಕೊಳ್ಳಬೇಕು. ತನ್ಮೂಲಕ ಸರ್ಕಾರದ ಆರ್ಥಿಕ ಹಾಗೂ ನೈತಿಕ ದಿವಾಳಿತನವನ್ನು ಬಯಲು ಮಾಡಬೇಕು.

ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್...! ..

ಸುಗ್ರೀವಾಜ್ಞೆ ಮೂಲಕ ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯಿದೆಯಂತಹ ವಿವಿಧ ಕಾಯಿದೆಗಳನ್ನು ಜನ ವಿರೋಧಿಯಾಗಿ ತಿದ್ದುಪಡಿ ಮಾಡಿ ಮಂಡಿಸುತ್ತಿರುವುದಕ್ಕೆ ವಿರುದ್ಧವಾಗಿ ತೀವ್ರ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪ್ರಶ್ನೆಗಳ ಬ್ಯಾಂಕ್‌- ಡಿಕೇಶಿ:  ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷ ಪ್ರಶ್ನೆಗಳ ಬ್ಯಾಂಕ್‌ ಸಿದ್ಧಪಡಿಸಿದೆ. ನಿಮ್ಮ ಕ್ಷೇತ್ರಗಳು ಹಾಗೂ ಆದ್ಯತೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎಲ್ಲ ಶಾಸಕರು ಬಳಸಿಕೊಳ್ಳಬೇಕು. ಜತೆಗೆ ಕೊರೊನಾ ಅವ್ಯವಹಾರ ನಮಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ. ಅದನ್ನು ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಪ್ರಯೋಗಿಸಬೇಕು. ಸಾಮಾಜಿಕ ಜಾಲ ತಾಣವನ್ನು ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಬಿ-ಖರಾಬು ಮಾರಾಟದ ವಿರುದ್ಧ ಹೋರಾಟ:

ಇದಕ್ಕೂ ಮೊದಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರಿನಲ್ಲಿ ಬಿ-ಖರಾಬು ಆಸ್ತಿಗಳು ಮಾರಾಟಕ್ಕೆ ಮುಂದಾದ ಸರ್ಕಾರದ ಆರ್ಥಿಕ ಹಾಗೂ ನೈತಿಕ ದಿವಾಳಿತನವನ್ನು ಎತ್ತಿ ತೋರಿಸಬೇಕು. ಬಿ-ಖರಾಬು ಜಮೀನು ಮಾರಾಟದಿಂದ ಕೆರೆ, ಕಾಲುವೆಗಳ ಬಳಿಯ ಜಮೀನು ಖಾಸಗಿಯವರ ಪಾಲಾಗಿ ಕೆರೆ, ಕಾಲುವೆ ಮುಚ್ಚಿ ಹೋಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸಬೇಕು.

'ಡ್ರಗ್ಸ್​ ದಂಧೆಯಲ್ಲಿ ರಾಜಕಾರಣಿಗಳು, ಸಾಕ್ಷಿ ಸಮೇತ 32 ಜನರ ಲಿಸ್ಟ್ ಗೃಹ ಸಚಿವರ ಕೈ ಸೇರಲಿದೆ ' ..

ಜತೆಗೆ ಡ್ರಗ್ಸ್‌ ಹಾಗೂ ಡಿ.ಜೆ. ಹಳ್ಳಿ ಗಲಭೆ ತನಿಖೆ ಹಾಗೂ ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ ಪ್ರಶ್ನಿಸಬೇಕು. ಡ್ರಗ್ಸ್‌ ಹಗರಣದ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದು ಬೇರೆ ವಿಚಾರಗಳನ್ನು ಬದಿಗೆ ತರಿಸುವ ಪ್ರಯತ್ನ ಮಾಡಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ನಾವೇ ಮೊದಲು ಪ್ರಸ್ತಾಪಿಸಿ ತನಿಖೆಯಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸಬೇಕು ಎಂದು ಕರೆ ನೀಡಿದರು.

ನೆರೆ ನಿರ್ವಹಣೆ ವೈಫಲ್ಯ, ಆರ್ಥಿಕ ದಿವಾಳಿತನ:

ಕಳೆದ ವರ್ಷವೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆಗ ಸಂತ್ರಸ್ಥರಾದವರಿಗೇ ಇನ್ನೂ ಪರಿಹಾರ ಸಿಕಿಲ್ಲ. ಈ ವರ್ಷ ಪ್ರವಾಹದಿಂದ ಹಾನಗೊಳಗಾದವರಿಗೂ ಪರಿಹಾರ ಸಿಗುವುದಾಗಿ ಕನಸಿನ ಮಾತಾಗಿಯೇ ಉಳಿದಿದೆ. ಇನ್ನು ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು ಸರ್ಕಾರ ದಿವಾಳಿಯಾಗಿದೆ. ಪಿಂಚಣಿ ನೀಡಲೂ ಪರದಾಡುವ ಸ್ಥಿತಿಗೆ ಸರ್ಕಾರ ತಲುಪಿದೆ.

53 ಸಾವಿರ ಕೋಟಿ ರು. ಸಾಲ ಪಡೆಯುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ ಮತ್ತೆ 33 ಸಾವಿರ ಕೋಟಿ ರು. ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಲಾಕ್‌ಡೌನ್‌ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ ಘೋಷಿಸಿದ್ದ ಪರಿಹಾರವನ್ನೂ ನೀಡಿಲ್ಲ ಎಂಬುದನ್ನು ಚರ್ಚಿಸಬೇಕು. ಜತೆಗೆ ಸದನದಲ್ಲಿ ಮಂಡಿಸಬೇಕಾದ ನಿಲುವಳಿ ಸೂಚನೆ, ಗಮನ ಸೆಳೆಯುವ ಸೂಚನೆಗಳ ಬಗ್ಗೆಯೂ ಸಿದ್ದರಾಮಯ್ಯ ವಿವರಿಸಿದರು ಎಂದು ತಿಳಿದುಬಂದಿದೆ.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾದ ಎಸ್‌.ಆರ್‌. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್‌, ಸತೀಶ್‌ ಜಾರಕಿಹೊಳಿ, ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ್‌, ನಸೀರ್‌ ಅಹಮದ್‌ ಮತ್ತಿತರರು ಭಾಗವಹಿಸಿದ್ದರು.

ಹಿಂದಿ ಹೇರಿಕೆ ವಿರುದ್ಧ ಕಾಂಗ್ರೆಸ್‌ ಹೋರಾಟ :  ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲೂ ಹಿಂದಿ ಹೇರಿಕೆ ಮಾಡಲು ಕೇಂದ್ರ ಯತ್ನಿಸುತ್ತಿದ್ದರೂ ರಾಜ್ಯ ಸರ್ಕಾರ ಬಾಯಿ ಬಿಡುತ್ತಿಲ್ಲ. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಏಕೆ? ಎಂಬುದನ್ನು ಪ್ರಬಲವಾಗಿ ಪ್ರಶ್ನಿಸಬೇಕು. ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ಅನಾವರಣಗೊಳಿಸಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಸಭೆ ನಿರ್ಧರಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ