ರಾಜ್ಯಕ್ಕೆ ಪ್ರತಿನಿತ್ಯ 1471 ಟನ್‌ ಆಕ್ಸಿಜನ್‌ ನೀಡಿ: ಸಿಎಂ ಮನವಿ!

Published : Apr 24, 2021, 07:26 AM ISTUpdated : Apr 24, 2021, 07:47 AM IST
ರಾಜ್ಯಕ್ಕೆ ಪ್ರತಿನಿತ್ಯ 1471 ಟನ್‌ ಆಕ್ಸಿಜನ್‌ ನೀಡಿ: ಸಿಎಂ ಮನವಿ!

ಸಾರಾಂಶ

ರಾಜ್ಯಕ್ಕೆ ಪ್ರತಿನಿತ್ಯ 1471 ಟನ್‌ ಆಕ್ಸಿಜನ್‌ ನೀಡಿ: ಸಿಎಂ ಮನವಿ| 10 ದಿನಕ್ಕಾಗಿ 2 ಲಕ್ಷ ಡೋಸ್‌ ರೆಮ್‌ಡೆಸಿವಿರ್‌ ಒದಗಿಸಿ|  ಪ್ರಧಾನಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕೋರಿಕೆ

ಬೆಂಗಳೂರು(ಏ.24): ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಕ್ಕೆ ಪ್ರತಿನಿತ್ಯ 1471 ಟನ್‌ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ರೆಮ್‌ಡೆಸಿವಿರ್‌ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು, ಮುಂದಿನ 10 ದಿನಗಳಿಗೆ ಎರಡು ಲಕ್ಷ ಡೋಸ್‌ಗಳಷ್ಟುರೆಮ್‌ಡೆಸಿವಿರ್‌ ಒದಗಿಸಬೇಕು ಎಂದೂ ಕೋರಿದ್ದಾರೆ.

ಗುರುವಾರ ಒಂದೇ ದಿನ ರಾಜ್ಯದಲ್ಲಿ 500 ಟನ್‌ ಆಮ್ಲಜನಕ ಬಳಕೆಯಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 300 ಟನ್‌ ಆಮ್ಲಜನಕ ಹಂಚಿಕೆ ಮಾಡಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಹಲವು ಆರೋಗ್ಯ ಸೇವಾ ಕೇಂದ್ರಗಳು ಮುಚ್ಚುವ ಪರಿಸ್ಥಿತಿ ಎದುರಾಗುವುದು ಎಂದೂ ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಶುಕ್ರವಾರ ಪ್ರಧಾನಿ ನಡೆಸಿದ ವಿಡಿಯೋ ಸಂವಾದದಲ್ಲಿ ಯಡಿಯೂರಪ್ಪ ಅವರು ಮೋದಿ ಅವರಿಗೆ ರಾಜ್ಯದ ವಸ್ತುಸ್ಥಿತಿ ಮತ್ತು ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯಕ್ಕೆ ಏ.25ರಿಂದ 1142 ಟನ್‌ ಆಮ್ಲಜನಕ ಅಗತ್ಯವಿದೆ ಮತ್ತು ಏ.30ರ ನಂತರ 1471 ಟನ್‌ ಆಮ್ಲಜನಕದ ಅಗತ್ಯ ಇದೆ. ಹೀಗಾಗಿ ಆಮ್ಲಜನಕದ ಕೊರತೆ ನೀಗಿಸಿ, ತಕ್ಷಣ 1471 ಟನ್‌ ಆಮ್ಲಜನಕ ಹಂಚಿಕೆ ಮಾಡಿ ಎಂದು ಕೋರಿದರು.

ಆರ್ಥಿಕತೆಗೆ ಸಮಸ್ಯೆಯಾಗದ ರೀತಿ ನಿರ್ಬಂಧ:

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ದರ ಶೇ.16ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಪೀಡಿತವಾಗಿದ್ದು, ತುಮಕೂರು, ಬಳ್ಳಾರಿ, ಮೈಸೂರು, ಹಾಸನ ಮತ್ತು ಕಲಬುರಗಿ ಜಿಲ್ಲೆಯಲ್ಲಿಯೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ತಡೆಯಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಜತೆಗೆ ಇತರ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಕನಿಷ್ಠ ಪರಿಣಾಮವಾಗುವ ರೀತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಕಳೆದ ಆರು ತಿಂಗಳಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದ್ದು, ಇದೀಗ ಅನುಕೂಲವಾಗಿದೆ. ಬೆಂಗಳೂರಿನಲ್ಲಿ 8 ವಲಯಗಳ ಕೋವಿಡ್‌ ನಿರ್ವಹಣೆ ಉಸ್ತುವಾರಿಗೆ ಸಚಿವರನ್ನು ನೇಮಕ ಮಾಡಲಾಗಿದೆ. ಲಸಿಕೆ ಕಾರ್ಯಕ್ರಮದ ಪ್ರಗತಿಯೂ ಉತ್ತಮವಾಗಿದ್ದು, ಈವರೆಗೆ 82 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಾಲ್ಕೈದು ದಿನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಇದೇ ವೇಳೆ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!