
ಬೆಂಗಳೂರು(ಆ.21): ‘ದೇವರಾಜ ಅರಸು ಅವರು ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಸಬೇಕು ಎಂದು ತಂದಿದ್ದ ಕಾಯ್ದೆಗೆ ತಿದ್ದುಪಡಿ ತಂದ ಬಿಜೆಪಿಯವರು ನೇಗಿಲು ಹಿಡಿಯಲು ಬಾರದವರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ವಿಧಾನಪರಿಷತ್‌ನಲ್ಲಿ ಬಹುಮತ ಬಂದ ಕೂಡಲೇ ಈ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಹಾಗೂ ಹಿಂದಿನಂತೆಯೇ ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಸುವಂತೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ದೇವರಾಜ ಅರಸು ಜನ್ಮ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಯಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು. ಅದರಂತೆ ಕೃಷಿಕರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಲಾಯಿತು. ಆದರೆ, ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಭೂಮಿ ಖರೀದಿಗೆ ಇದ್ದಂತಹ ಷರತ್ತುಗಳನ್ನು ತೆಗೆದುಹಾಕಿತು. ಕಾಯ್ದೆಯಲ್ಲಿನ 79ಎ ಮತ್ತು ಬಿ ಅಂಶಗಳನ್ನು ತೆಗೆದು, ಕೃಷಿಕರಲ್ಲದವರೂ, ನೇಗಿಲು ಹಿಡಿಯಲು ಬಾರದವರೂ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ’ ಎಂದರು.
ನಾನು ನಾನೇ, ದೇವರಾಜ ಅರಸು ಆಗಲು ಅಸಾಧ್ಯ: ಸಿಎಂ ಸಿದ್ದರಾಮಯ್ಯ
‘ಹಿಂದಿನ ಸರ್ಕಾರದಿಂದ ಕಾಯ್ದೆಗಾಗಿರುವ ತಿದ್ದುಪಡಿಯಿಂದ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಗಂಭೀರ ಚರ್ಚೆಗಳಾಗಬೇಕಿದೆ. ಸದ್ಯ ವಿಧಾನಪರಿಷತ್‌ನಲ್ಲಿ ನಮಗೆ ಬಹುಮತವಿಲ್ಲ. ಹೀಗಾಗಿ ಕಾಯ್ದೆಯಲ್ಲಾಗಿರುವ ತಿದ್ದುಪಡಿಯನ್ನು ಸರಿಪಡಿಸಲು ಸಮಯ ಬೇಕಾಗಲಿದೆ. ಮೇಲ್ಮನೆಯಲ್ಲಿ ಬಹುಮತ ಬಂದ ಕೂಡಲೆ ಭೂಸುಧಾರಣಾ ಕಾಯ್ದೆಯಲ್ಲಿ ತೆಗೆದು ಹಾಕಲಾಗಿರುವ 79ಎ ಮತ್ತು ಬಿ ಕಲಂಗಳನ್ನು ಮರುಸ್ಥಾಪಿಸುತ್ತೇವೆ’ ಎಂದು ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ