ಬೆಂಗಳೂರು (ಆ.10): ಅರ್ಹ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಮಾನ್ಯತೆ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸುವ ಕೇಂದ್ರ ಸರ್ಕಾರದ ನಿರ್ಧಾರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗ್ನಿ ಪರೀಕ್ಷೆಯಾಗಿ ಕಾಡಲಿದೆ.
ಕೇಂದ್ರ ಸರ್ಕಾರವು ಒಬಿಸಿ ಮಾನ್ಯತೆಗೆ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಒಬಿಸಿ ಕಾಯ್ದೆ ತಿದ್ದುಪಡಿ ಮೂಲಕ ರಾಜ್ಯಗಳಿಗೆ ನೀಡಲು ಈಗಾಗಲೇ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಿದೆ. ಈಗಾಗಲೇ ಹಿಂದುಳಿದ ವರ್ಗಗಳ 2-ಎ ಮೀಸಲಾತಿಗಾಗಿ ಪಂಚಮ ಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು ಒತ್ತಾಯ ಮಾಡಿವೆ. ಅಲ್ಲದೆ, ಮುಂದಿನ ಒಂದು ತಿಂಗಳಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಪಂಚಮಸಾಲಿ ಸಮುದಾಯ ಎಚ್ಚರಿಕೆ ನೀಡಿದೆ.
undefined
ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳಿಗೆ 10% ಮೀಸಲು ಏಕೆ, ಹೇಗೆ ಜಾರಿಯಾಗಬೇಕು?
ಎರಡೂ ಸಮುದಾಯಗಳನ್ನು 2-ಎ ಮೀಸಲಾತಿಗೆ ಸೇರಿಸಿದರೆ 2-ಎ ಮೀಸಲಾತಿಯಲ್ಲಿರುವ 102 ಜಾತಿಗಳ ಜೇನು ಗೂಡಿನ ಮೇಲೆ ಕಲ್ಲೆಸದಂತಾಗಲಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಇಕ್ಕಟ್ಟಿಗೆ ಸಿಲುಕಲಿದ್ದು, ಮುಖ್ಯಮಂತ್ರಿ ಆಗಿ ಅಧಿಕಾರ ಪಡೆದ ತಕ್ಷಣ ಸವಾಲಿನ ಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಏನಿದು ಮೀಸಲಾತಿ ಸಮಸ್ಯೆ?: ಪಂಚಮಸಾಲಿ ಸಮುದಾಯವು ಪ್ರಸ್ತುತ ಪ್ರವರ್ಗ 3 - ಬಿ ಯಲ್ಲಿದ್ದು ಶೇ.5ರಷ್ಟುಮೀಸಲಾತಿ ಪಡೆಯುತ್ತಿದೆ. ಇದೀಗ ಸಮುದಾಯದ ಗಾತ್ರ ಆಧರಿಸಿ ಶೇ.15 ರಷ್ಟುಮೀಸಲಾತಿ ಇರುವ 2-ಎ ಮೀಸಲಾತಿಗೆ ಸೇರಿಸುವಂತೆ ಬೇಡಿಕೆ ಇಟ್ಟಿದೆ. ರಾಜ್ಯಮಟ್ಟದ ಹೋರಾಟ ರೂಪಿಸಿ ಈಗಾÜಗಲೇ ಹಲವು ಹಂತದಲ್ಲಿ ಎಚ್ಚರಿಕೆ ರವಾನಿಸಿದ್ದು, ಸರ್ಕಾರಕ್ಕೆ ಆರು ತಿಂಗಳು ಗಡುವು ನೀಡಿದೆ. ಆ ಗಡುವು ಮುಂದಿನ ತಿಂಗಳಿನ ವೇಳೆಗೆ ಮುಗಿಯಲಿದೆ.
ಇದರ ನಡುವೆಯೇ ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸುವುದಾಗಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇನ್ನು 3-ಎ ಕೆಟಗರಿಯಲ್ಲಿ ಶೇ.4 ರಷ್ಟುಮೀಸಲಾತಿ ಪಡೆಯುತ್ತಿರುವ ಒಕ್ಕಲಿಗರು ಸಹ 2-ಎ ಮೀಸಲಾತಿಗಾಗಿ ಒತ್ತಾಯ ಮಾಡಿದ್ದಾರೆ. ಜತೆಗೆ ಬಲಿಜ ಹಾಗೂ ಮರಾಠ ಸಮುದಾಯವೂ 2-ಎ ಮೀಸಲಾತಿಗಾಗಿ ಬೇಡಿಕೆ ಇಟ್ಟಿದೆ. ಇವರನ್ನು 2-ಎಗೆ ಸೇರಿಸಿದರೆ ಈಗಲೇ 2-ಎ ಮೀಸಲಾತಿ ಪಡೆಯುತ್ತಿರುವ 102 ಜಾತಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಮತ್ತೊಂದೆಡೆ 2-ಎ ಪ್ರಬಲ ಜಾತಿಯಾಗಿರುವ ಕುರುಬ ಸಮುದಾಯದವರು ಎಸ್.ಟಿ. ಮೀಸಲಾತಿಗಾಗಿ ಒತ್ತಾಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿ ಪಂಚಮಸಾಲಿ, ಒಕ್ಕಲಿಗರಿಗೆ 2-ಎ ಪ್ರವರ್ಗದಲ್ಲಿ ಅವಕಾಶ ಮಾಡಿಕೊಟ್ಟರೆ ಎಸ್.ಟಿ. ಸಮುದಾಯಗಳು ಸಿಡಿದೇಳಲಿದೆ. ಹೀಗಾಗಿ ಮೀಸಲಾತಿ ವಿಚಾರಕ್ಕೆ ಕೈ ಹಾಕಿದರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಭವಿಷ್ಯವೇ ಡೋಲಾಯಮಾನವಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ಆಯಾ ರಾಜ್ಯಗಳಲ್ಲಿನ ಸಮುದಾಯಗಳ ಅಧ್ಯಯನ ನಡೆಸಿ ಒಬಿಸಿ ಮಾನ್ಯತೆ ನೀಡುವ ಅಧಿಕಾರ ರಾಜ್ಯಗಳಿಗೇ ಇದ್ದರೆ ಬಹಳ ಒಳ್ಳೆಯದು. ರಾಜ್ಯದಲ್ಲಿ ಸುಮಾರು 1700 ಜಾತಿಗಳಿದ್ದು, ಸಾಕಷ್ಟುಸಮುದಾಯಗಳನ್ನು ಇನ್ನೂ ಗುರುತಿಸಲೂ ಆಗಿಲ್ಲ. ಅಂತಹ ಸಮುದಾಯಗಳನ್ನು ಗುರುತಿಸಲು ರಾಜ್ಯಗಳಿಗೆ ಒಬಿಸಿ ಮಾನ್ಯತೆ ಮಂಜೂರು ಅಧಿಕಾರ ನೀಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ.
- ಸಿ.ಎಸ್. ದ್ವಾರಕನಾಥ್, ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಪಂಚಮಸಾಲಿ, ಒಕ್ಕಲಿಗ ಮೀಸಲು ಹೋರಾಟ
ಹಿಂದುಳಿದ ವರ್ಗಗಳ 2-ಎ ಮೀಸಲಾತಿಗಾಗಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು ರಾಜ್ಯದಲ್ಲಿ ಪಟ್ಟು ಹಿಡಿದಿವೆ. ಮುಂದಿನ ಒಂದು ತಿಂಗಳಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಪಂಚಮಸಾಲಿ ಸಮುದಾಯ ಎಚ್ಚರಿಕೆ ನೀಡಿದೆ. ಈ ಸಮುದಾಯಗಳನ್ನು 2-ಎ ಮೀಸಲಾತಿಗೆ ಸೇರಿಸಿದರೆ 2-ಎ ಮೀಸಲಾತಿಯಲ್ಲಿರುವ 102 ಜಾತಿಗಳ ಜೇನು ಗೂಡಿನ ಮೇಲೆ ಕಲ್ಲೆಸದಂತಾಗಲಿದೆ. ಆಗ ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಲಿದ್ದು, ಮುಖ್ಯಮಂತ್ರಿ ಆದ ತಕ್ಷಣ ಸವಾಲಿನ ಸ್ಥಿತಿ ಎದುರಾಗಿದೆ.