
ನವದೆಹಲಿ (ಮೇ.26): ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಎಲ್ಲಾ ಸುದ್ದಿಗಳು ಕೇವಲ ಊಹಾಪೋಹಗಳಾಗಿದ್ದು, ಇದರಲ್ಲಿ ಯಾವುದೇ ವಾಸ್ತವ ಸತ್ಯವಿಲ್ಲ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂದು ನಾವು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಹಾಗೂ ವಿವರವಾದ ಸಭೆಯನ್ನು ನಡೆಸಿದ್ದೇವೆ. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹಾಗೂ ನಾನು ಭಾಗಿಯಾಗಿದ್ದೆವು" ಎಂದು ತಿಳಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಸಂಪೂರ್ಣ ವಿವರ ನೀಡಿದ ಕೆ.ಸಿ. ವೇಣುಗೋಪಾಲ್, "ನಮ್ಮ ಇಡೀ ಸಭೆಯ ಚರ್ಚೆ ಪ್ರಮುಖವಾಗಿ ಕರ್ನಾಟಕದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ಇದನ್ನು ಬಿಟ್ಟು ನೀವು ಮಾಡುತ್ತಿರುವ ಎಲ್ಲಾ ಚರ್ಚೆಗಳು ಕೇವಲ ನಿಮ್ಮ ಊಹೆಗಳಷ್ಟೇ; ಅದಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು.
"ಕರ್ನಾಟಕದ ರಾಜ್ಯಸಭಾ ಮತ್ತು ವಿಧಾನ ಪರಿಷತ್ ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಇತರ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯೊಂದಿಗೇ ಅಧಿಕೃತವಾಗಿ ಪ್ರಕಟಿಸಲಾಗುವುದು. ಇಂದಿನ ಸಭೆಯಲ್ಲಿ ನಾವು ಈ ವಿಷಯವನ್ನು ಮಾತ್ರ ತೀರ್ಮಾನಿಸಿದ್ದೇವೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಹೇಳುವ ಮೂಲಕ ಸಿಎಂ ಕುರ್ಚಿ ಬದಲಾವಣೆಯ ಊಹಾಪೋಹಗಳಿಗೆ ಅವರು ಸಂಪೂರ್ಣ ತೆರೆ ಎಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ