ರೈತರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ಸಿಎಂ

By Kannadaprabha NewsFirst Published Nov 13, 2019, 9:53 AM IST
Highlights

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಬೆಲೆ ಏರಿಕೆ ಸೇರಿದಂತೆ ವಿವಿಧ ರೀತಿಯ ಭರವಸೆಗಳನ್ನು ರೈತರಿಗೆ ಸಿಎಂ ನೀಡಿದ್ದಾರೆ. 

ಬೆಂಗಳೂರು [ನ.13]:  ಚೆಕ್ ಬೌನ್ಸ್ ಆರೋಪದ ಮೇಲೆ ಯಾವುದೇ ರೈತರನ್ನು ಬಂಧಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಿಯೋಗವು ಸಲ್ಲಿಸಿದ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ವೀಕರಿಸಿದರು. ಈ ವೇಳೆ ರೈತರ ಬೇಡಿಕೆಗಳನ್ನು ಸರ್ಕಾರ ಇತಿಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಈಡೇರಿಸಲಾಗುವುದು. ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ರೈತರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಮಾಹಿತಿ ಇದ್ದು, ರೈತರನ್ನು ಬಂಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೇಡಿಕೆಗಳ ಮನವಿ: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ರು.ಗೆ ಕಡಿಮೆಯಾಗದ ರೀತಿಯಲ್ಲಿ ಗುಣಮಟ್ಟದ ಮನೆ ನಿರ್ಮಿಸಿಕೊಡಬೇಕು. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರು. ನೀಡಬೇಕು. ಪ್ರವಾಹದಿಂದ ನಷ್ಟವಾದ ಬೆಳೆಗಳಿಗೆ ಅನುಗುಣವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ನಷ್ಟ ತುಂಬಿಕೊಡಬೇಕು. ಪ್ರತಿವರ್ಷ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು. ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು ಎಂದು ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್ಲಾ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾಮಾಡಬೇಕು 60 ವರ್ಷ ತುಂಬಿದ ಪ್ರತಿ ರೈತರಿಗೆ ತಿಂಗಳು 10 ಸಾವಿರ ರು. ಮಾಸಾಶನ ನೀಡಬೇಕು. ಬೆಳೆ ವಿಮೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ಒಂದು ಲೀಟರ್ ಹಾಲಿಗೆ 50 ರು. ನಿಗದಿ ಮಾಡಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ರೈತರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಬೇಕು. 
ಪ್ರತಿಟನ್ ಕಬ್ಬಿಗೆ 3,500 ರು. ನಿಗದಿ ಮಾಡಬೇಕು. ಎತ್ತಿನಹೊಳೆ ಮತ್ತು ಮಹದಾಯಿ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು. ಒಂದು ಕೆ.ಜಿ. ರೇಷ್ಮೆಗೂಡಿಗೆ 500 ರು. ಬೆಲೆ ನಿಗದಿ ಮಾಡಬೇಕು. ಕುರಿ, ಕೋಳಿ, ಹಂದಿ, ಮೀನು, ಹೈನುಗಾರಿಕೆ, ಹೂವು, ತರಕಾರಿ ಮತ್ತು ಇತರೆ ಗೃಹ ಕೈಗಾರಿಕೆಗಳಿಗೆ ಶೇ.75 ರಷ್ಟು ಸಹಾಯಧನ ನೀಡಬೇಕು ಎಂದು ರೈತರು ಕೋರಿದರು. 

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇಡಿಕೆಗಳನ್ನು ಅವಲೋಕನ ಮಾಡಿ ಅದಷ್ಟು ಬೇಗ ಈಡೇರಿಕೆಗೆ ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.

click me!