
ಬೆಂಗಳೂರು (ಮಾ.12): ಕೇಂದ್ರದ ಆರ್ಥಿಕ ಅಸಹಕಾರ, ಮಲತಾಯಿ ಧೋರಣೆ ನಡುವೆಯಿಂದ ಆದಾಯ ಕೊರತೆಯಾಗಿದೆ. ಇದರ ನಡುವೆಯೂ ಉತ್ತಮ ಬಜೆಟ್ ನೀಡಿದ್ದೇವೆ. ಬಜೆಟ್‌ನ ಉತ್ತಮ ಅಂಶಗಳನ್ನು ಮುಂದಿಟ್ಟುಕೊಂಡು ಉಭಯ ಸದನಗಳಲ್ಲಿ ಸಮರ್ಥಿಸಿಕೊಳ್ಳಿ ಎಂದು ಶಾಸಕರು, ಪರಿಷತ್ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಕೇಂದ್ರದ ಅನುದಾನ, ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡಿದೆ. ಜಿಎಸ್ಟಿ ಪರಿಷ್ಕರಣೆಯಿಂದ ರಾಜ್ಯದ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಸಮಜಾಯಿಷಿ ನೀಡಿದರು.
ಇನ್ನು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೂಕ್ತವಾಗಿ ಹಣ ನೀಡುತ್ತಿಲ್ಲ. ಉದಾ: ಜಲಜೀವನ್ ಮಿಷನ್ ಯೋಜನೆಗೆ 15,000 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಕೊರತೆ ಬಜೆಟ್ ಮಂಡನೆ ಮಾಡಬೇಕಾಯಿತು. ಇದರ ನಡುವೆಯೂ ಬಜೆಟ್‌ನಲ್ಲಿ ಅತ್ಯುತ್ತಮ ಕಾರ್ಯಕ್ರಮ ನೀಡಿದ್ದೇವೆ. ಬಜೆಟ್ ಅನ್ನು ತಜ್ಞರು, ಉದ್ಯಮಿಗಳು, ಐಟಿ ದಿಗ್ಗಜರು ಶ್ಲಾಘಿಸಿದ್ದಾರೆ. ಈ ಎಲ್ಲಾ ಅಂಶ ಇಟ್ಟುಕೊಂಡು ವಿರೋಧಪಕ್ಷಗಳಿಗೆ ತಿರುಗೇಟು ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿ 2-3 ಸಭೆ ನಡೆಸಿದರೂ ಈವರೆಗೂ ಅನುದಾನ ನೀಡಿಲ್ಲ ಎಂದು ಪರಿಷತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಇನ್ನು ಶಾಸಕರಿಗೆ 10-15 ಕೋಟಿ ರು. ಅನುದಾನ ಘೋಷಿಸಿದ್ದರೂ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದು, ಅಭಿವೃದ್ಧಿ ಕಾರ್ಯ ಮಾಡದಿದ್ದರೆ ಪಕ್ಷಕ್ಕೆ ಕಷ್ಟವಾಗಲಿದೆ. ಹೀಗಾಗಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಲೈಸನಿಂಗ್ ಅಧಿಕಾರಿಯನ್ನು ನೇಮಿಸಬೇಕು ಎಂದು ಕೋರಿದರು ಎನ್ನಲಾಗಿದೆ.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕಂದಾಯ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೇಂದ್ರ ಸಿಂಗ್ ಕಟಾರಿಯಾ ಅವರನ್ನು ಕಂದಾಯ ಇಲಾಖೆಯಿಂದ ತೆಗೆಯುವಂತೆ ಹಲವು ಶಾಸಕರು ಮನವಿ ಸಲ್ಲಿಸಿದ್ದೇವೆ. ಈವರೆಗೂ ಅವರನ್ನು ತೆಗೆದಿಲ್ಲ. ಅವರಿಂದ ಶಾಸಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಈ ವೇಳೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕಟಾರಿಯಾ ಹಾಗೂ ಕೃಷ್ಣಬೈರೇಗೌಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಬಲಿಸಿದರು. ಇದಕ್ಕೆ ಆಕ್ರೋಶಗೊಂಡ ನಾರಾಯಣಸ್ವಾಮಿ ಅವರು ಏರುಧ್ವನಿಯಲ್ಲಿ ಮಾತನಾಡಿದ್ದರಿಂದ ಮಾತಿನ ಚಕಮಕಿ ನಡೆಯಿತು. ಈ ವೇಳೆ ನಾರಾಯಣಸ್ವಾಮಿ ಸಭೆಯಿಂದ ಹೊರನಡೆದರು ಎಂದು ತಿಳಿದುಬಂದಿದೆ.
ಸಚಿವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ವಿಧಾನಸಭೆಗೂ ಬರುತ್ತಿಲ್ಲ, ಈಗ ಶಾಸಕಾಂಗ ಪಕ್ಷದ ಸಭೆಗೂ ಹಲವರು ಗೈರಾಗಿದ್ದಾರೆ. ಇನ್ನು ಐಎಎಸ್ ಅಧಿಕಾರಿಗಳ ಮೇಲೆಯೂ ಹಿಡಿತ ಇಲ್ಲದಂತಾಗಿದೆ. ಹೀಗಾಗಿ ಐಎಎಸ್ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಎಸ್‌ಐಆರ್ ಬಗ್ಗೆ ಹದ್ದಿನ ಕಣ್ಣಿಡಿ:
ಮತದಾರರ ಪಟ್ಟಿಯ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಬಗ್ಗೆ ನಿಗಾವಹಿಸಬೇಕು. ಅನ್ಯ ರಾಜ್ಯಗಳಲ್ಲಿ ಬಿಜೆಪಿಯು ಎಸ್‌ಐಆರ್‌ನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು ಚುನಾವಣೆ ಗೆದ್ದಿದೆ. ರಾಜ್ಯದಲ್ಲೂ 30-40 ಸಾವಿರ ಮತಗಳನ್ನು ಕಿತ್ತು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ನಿಗಾವಹಿಸಿ ಅನಗತ್ಯವಾಗಿ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಗ್ಯಾರಂಟಿ ಮರುಪರಿಶೀಲಿಸಿ:
ಗ್ಯಾರಂಟಿಗಳು ಅತ್ಯುತ್ತಮ ಯೋಜನೆ ಆದರೂ ಉಳ್ಳವರ ಪಾಲಾಗುತ್ತಿವೆ. ಇದು ಸರ್ಕಾರಕ್ಕೂ ಆರ್ಥಿಕವಾಗಿ ಹೊರೆ ಆಗುತ್ತಿದೆ. ಹೀಗಾಗಿ ಗ್ಯಾರಂಟಿಗಳನ್ನು ಮರುಪರಿಶೀಲಿಸಬೇಕು ಎಂದು ಇಬ್ಬರು ಶಾಸಕರು ಸಲಹೆ ನೀಡಿದರು.
ಸಿಎಂ, ಡಿಕೆಶಿಗೆ ಅಭಿನಂದನೆ ಸಲ್ಲಿಕೆ
ದಾಖಲೆಯ 17ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ