ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೀರೋ ಟ್ರಾಫಿಕ್ ನಿಯಮವನ್ನು ಹಿಂಪಡೆದಿದ್ದು, ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿಸದ್ದಾರೆ.
ಬೆಂಗಳೂರು (ಮೇ 21): ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಸಿದ್ದರಾಮಯ್ಯ ಅವರು ನನಗೆ ಜೀರೋ ಟ್ರಾಫಿಕ್ ಬೇಡವೆಂದು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಿಎಂ ಹೋಗುವ ಮಾರ್ಗದಲ್ಲಿ ಸುಮಾರು 20 ನಿಮಿಷ ಕಾಯುತ್ತಾ ನಿಲ್ಲಬೇಕಿದ್ದ ವಾಹನ ಸವಾರರಿಗೆ ಸಂತಸವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರನ್ನು ಟ್ರಾಫಿಕ್ ಸಿಟಿ ಎಂದೂ ಕರೆಯಬಹುದು. ಆದರೆ, ಮಳೆಬಂದ ಹಿನ್ನೆಲೆಯಲ್ಲಿ ತುರ್ತು ಕಾರ್ಯ ನಿಮಿತ್ತ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಂಚಾರ ಮಾಡುವಾಗ ಭಾರಿ ಪ್ರಮಾಣದ ಟ್ರಾಫಿಕ್ ನಿರ್ಮಾಣವಾಗಿತ್ತು. ಇದನ್ನು ನೋಡಿ ತಾವೂ ಕೂಡ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ ಘಟನೆ ನಡೆಯಿತು. ಒಬ್ಬ ಮುಖ್ಯಮಂತ್ರಿಯಾಗಿ ಜೀರೋ ಟ್ರಾಫಿಕ್ ಇರುವ ನನಗೇ ಇಷ್ಟೊಂದು ಸಮಸ್ಯೆ ಆಗುತ್ತಿರುವಾಗ, ಜನಸಾಮಾನ್ಯರಿಗೆ ಎಷ್ಟು ತೊಂದರೆ ಆಗಬೇಡ ಎಂದು ಆಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದ ದಿನವೇ ಶುಭಸೂಚನೆ: ರಾಜ್ಯ ವಿವಿಧೆಡೆ ಭರ್ಜರಿ ಮಳೆ
ಸ್ವತಃ ಟ್ರಾಫಿಕ್ ಜಾಮ್ ಸಮಸ್ಯೆ ಅನುಭವಿಸಿದ ಸಿದ್ದರಾಮಯ್ಯ: ರಾಜ್ಯ ರಾಜಧಾನಿ ಬೆಂಗಳೂರು ಮಳೆ ಅವಾಂತರ ಸೃಷ್ಟಿಯಾಗಿದ್ದು ಕೇವಲ ಒಂದು ಗಂಟೆ ಸುರಿದ ಮಳೆಗೆ 70ಕ್ಕೂ ಅಧಿಕ ಮರಗಳು ಬಿದ್ದಿರುವ ವರದಿಯಾಗಿದೆ. ಜೊತೆಗೆ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಚರಂಡಿಯ ಸ್ಲ್ಯಾಬ್ ಕುಸಿತವಾಗಿದ್ದು, ಮೋರಿಯ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ತಕ್ಕು ಪ್ರದೇಶದ 11ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ, ಬೆಂಗಳೂರಿನ ಕೆ.ಆರ್. ಸರ್ಕಲ್‌ನ ಬಳಿಯಿರುವ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಅದರೊಳಗೆ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಮೃತಳನ್ನು ನೋಡಲು ಹೋಗುವಾಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ರಾಫಿಕ್ ಜಾಮ್ ಅರಿವಾಗಿದೆ.
ಪ್ರವಾಹ ಪೀಡಿತ ಸ್ಥಳ ಭೇಟಿ ರದ್ದು: ಇದಾದ ನಂತರ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ಹೋಗುವುದಕ್ಕೆ ಆಲೋಚನೆ ಮಾಡಿದ್ದರು. ಆದರೆ, ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿರುವ ಮಾಹಿತಿ ಲಭ್ಯವಾದ್ದರಿಂದ ತಾವು ಜೀರೋ ಟ್ರಾಫಿಕ್‌ನಲ್ಲಿ ಮಹಾಲಕ್ಷ್ಮೀ ಲೇಔಟ್‌ಗೆ ಹೋಗುವುದರಿಂದ ಮತ್ತಷ್ಟು ಟ್ರಾಫಿಕ್ ಉಂಟಾಬಹುದು ಎಂದು ನಿರೀಕ್ಷಿಸಿ ಸಿಎಂ ಸಿದ್ದರಾಮಯ್ಯ ಸ್ಥಳ ಭೇಟಿ ರದ್ದುಗೊಳಿಸಿದರು. ನಂತರ, ತಮಗಿದ್ದ ಜೀರೋ ಟ್ರಾಫಿಕ್ ಅವಕಾಶವನ್ನೇ ಹಿಂಪಡೆದು ಸರಳತೆ ಮೆರೆದಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜ್ಯಾದ್ಯಂತ ಅಬ್ಬರಿಸಿದ ಮಳೆ: ಸಾವು-ನೋವು ಹೆಚ್ಚಳ
ಸ್ವತಃ ಟ್ವೀಟ್ ಮೂಲಕ ಮಾಹಿತಿ ರವಾನೆ: ಈ ಕುರಿತು ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.
ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ. pic.twitter.com/8ySLySnLzz