ಸಹನೆ, ಛಲ, ಹೋರಾಟದಿಂದ ಕನಸಿನ ಪಟ್ಟಕ್ಕೇರಿದ ನಾಯಕ ಡಿ.ಕೆ. ಶಿವಕುಮಾರ್ ಸರ್ಕಾರಕ್ಕಿಂದು 100 ದಿನ; ಸಿಎಂ ಹಾದಿ ಭಿನ್ನ!

Sathish Kumar KH   | Kannada Prabha
Published : Sep 10, 2026, 05:40 AM IST
DK Shivakumar Siddaramaih

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 100 ದಿನಗಳ ಆಡಳಿತದಲ್ಲಿ, ಅವರು ಸಹಕಾರ ತತ್ವ, ಯುವಜನತೆಗೆ ಆದ್ಯತೆ ಮತ್ತು ತಂತ್ರಜ್ಞಾನದ ಮೇಲೆ ಗಮನಹರಿಸಿದ್ದಾರೆ. ಪ್ರಜಾಸೇವೆ, ಉದ್ಯೋಗ ಸೃಷ್ಟಿ, ಮತ್ತು ಬ್ರ್ಯಾಂಡ್ ಬೆಂಗಳೂರಿನಂತಹ ಯೋಜನೆಗಳ ಮೂಲಕ ತಮ್ಮ ಆಡಳಿತದ ದಿಕ್ಕನ್ನು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಸೆ.10): ಸಹನೆ, ಛಲ ಹಾಗೂ ಹೋರಾಟದ ಮೂಲಕ ತಮ್ಮ ಕನಸಿನ ಹುದ್ದೆಗೇರಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇವಲ 100 ದಿನಗಳಲ್ಲೇ ತಮ್ಮ ಪರಿಶ್ರಮದ ಉದ್ದೇಶ ಹಾಗೂ ಗುರಿಯೇನಾಗಿತ್ತು ಎಂಬುದನ್ನು ಸಾಬೀತುಪಡಿಸುವೆಡೆಗೆ ದಾಪುಗಾಲು ಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಳಸುವ ಹಿಂದು ಮಂತ್ರಕ್ಕೆ ಮೃದು ಹಿಂದುತ್ವದ ತಿರುಮಂತ್ರ, ಅಹಿಂದ ವರ್ಗವನ್ನು ಜತೆಗೆ ಒಯ್ಯುವ ಜೊತೆಗೆ ಮೇಲ್ವರ್ಗವನ್ನು ಸಂತೃಪ್ತಿಗೊಳಿಸುವ ಪ್ರಯತ್ನ, ಜೆನ್‌-ಝೀಗೆ ಅತಿ ಹೆಚ್ಚಿನ ಆದ್ಯತೆ ಹಾಗೂ ಕೇಂದ್ರ ಹಾಗೂ ನೆರೆಯ ರಾಜ್ಯ ಸರ್ಕಾರಗಳ ಜತೆಗೆ ಸಂಘರ್ಷಕ್ಕಿಂತ ಸಹಕಾರ ತಮ್ಮ ಆಡಳಿತದ ಮೂಲ ತತ್ವ ಎಂಬುದನ್ನು ನಿರೂಪಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನು ತಾವು ಆಡಳಿತದಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ನಿರೂಪಿಸಲು ಪ್ರತಿಯೊಂದು ವಿಚಾರದಲ್ಲೂ ವೇಗ ಹಾಗೂ ದೃಢ ನಿರ್ಧಾರಗಳ ಮೂಲಕ ಭರವಸೆ ಮೂಡಿಸಿದ್ದಾರೆ.

ಸಂಘರ್ಷದ ಬದಲು ಸಹಕಾರ ತತ್ವ:

ಕೇಂದ್ರದ ಜತೆ ಸಂಘರ್ಷದ ಬದಲಿಗೆ ಸಹಕಾರ ತತ್ವದಡಿ ಮುಂದುವರೆದಿರುವ ಅವರು, ಮುಖ್ಯಮಂತ್ರಿ ಆದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಲ್ಲ ಕೇಂದ್ರ ಸಚಿವರನ್ನೂ ಭೇಟಿ ಮಾಡಿ ರಾಜ್ಯದ ಪರ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಮುಂದಿಟ್ಟರು.

ಬೆಂಗಳೂರಿನ ಸುರಂಗ ರಸ್ತೆ (ಟನಲ್ ರೋಡ್) ಜಾಲ, ಮೆಟ್ರೋ ಹಂತ 3 ಮತ್ತು 3ಎ, ಉಪನಗರ ರೈಲ್ವೆ ವಿಸ್ತರಣೆ, ಮೇಕೆದಾಟು ಯೋಜನೆಗಳ ಅನುಮೋದನೆಗಾಗಿ ಕೇಂದ್ರದ ನೆರವು ಕೋರಿದ್ದು, 30,000 ಕೋಟಿ ರು.ಗೂ ಅಧಿಕ ಅನುದಾನ ತರಲು ಯತ್ನ ನಡೆಸಿದ್ದಾರೆ.

ನೆರೆ ರಾಜ್ಯಗಳೊಂದಿಗೆ ಸ್ನೇಹ:

ನೆರೆ ರಾಜ್ಯಗಳೊಂದಿಗೂ ಸ್ನೇಹ ಸಂಬಂಧದೊಂದಿಗೆ ಮುಂದಡಿ ಇಟ್ಟಿರುವ ಅವರು ದಕ್ಷಿಣ ರಾಜ್ಯಗಳು ಮೊದಲು ಎಂಬ ಕರೆ ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದದಂತಹ ಸೂಕ್ಷ್ಮ ವಿಚಾರದಲ್ಲೂ ‘ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು’ ಎಂದು ಹೇಳುತ್ತಾ ತಮಿಳುನಾಡು ಮುಖ್ಯಮಂತ್ರಿಗೆ ಚರ್ಚೆಗೆ ಆಹ್ವಾನ ನೀಡಿದ್ದರು.

ತುಂಗಭದ್ರಾ ಜಲಾಶಯದ 33 ಗೇಟುಗಳ ಲೋಕಾರ್ಪಣೆಗೆ ಆಂಧ್ರ, ತೆಲಂಗಾಣ ಮುಖ್ಯಮಂತ್ರಿಗಳನ್ನು ಒಂದೆಡೆ ಸೇರಿಸಿ ಒಗ್ಗಟ್ಟು ಪ್ರದರ್ಶಿಸಿದರು. ಇದೇ ವೇಳೆ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೆ ಪ್ರಸ್ತಾಪಿಸಿ ಪ್ರಾಥಮಿಕ ಅಂಗೀಕಾರ ಪಡೆದರು.

ಭಿನ್ನ ಮುಖ್ಯಮಂತ್ರಿ:

ಕಾಂಗ್ರೆಸ್‌ ಪಕ್ಷದ ಹಿಂದಿನ ಮುಖ್ಯಮಂತ್ರಿಗಳಂತೆ ಪ್ರಬಲ ಜಾತ್ಯತೀತತೆಯ ಮೊರೆ ಹೋಗದೆ ತಮ್ಮ ಜೀವನ ಶೈಲಿ, ಧಾರ್ಮಿಕ ಆಚರಣೆಗಳ ಮೂಲಕ ಬಿಜೆಪಿಯ ಮೃದು ಹಿಂದುತ್ವಕ್ಕೆ ತಿರುಮಂತ್ರ ಹಾಕಿದ್ದಾರೆ.

ಶಿವಕುಮಾರ್‌ ದೈವಭಕ್ತಿ, ಕಟ್ಟುನಿಟ್ಟಿನ ಆಚರಣೆಗಳನ್ನು ಆರ್.ಅಶೋಕ್‌ರಂಥ ಬಿಜೆಪಿ ನಾಯಕರೇ ಟೀಕಿಸುವಂತಾಗಿದೆ. ಆ ಮೂಲಕ ಹಿಂದುತ್ವದ ನೆರಳಲ್ಲಿ ಮತದ ಕೊಯ್ಲು ಮಾಡಿಕೊಳ್ಳುತ್ತಿದ್ದ ಬಿಜೆಪಿಗೆ ಟಕ್ಕರ್‌ ನೀಡತೊಡಗಿದ್ದಾರೆ.

ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಬೆಂಬಲಿಗರಾದ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳನ್ನು ಓಲೈಸುತ್ತಲೇ ಮೇಲ್ವರ್ಗಗಳನ್ನೂ ಒಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳಿಗಿಂತ ಡಿ.ಕೆ.ಶಿವಕುಮಾರ್‌ ಭಿನ್ನ ನಡೆ ಅನುಸರಿಸಿದ್ದಾರೆ.

ಮೊದಲ ಸಂಪುಟದಲ್ಲೇ ಸೂಪರ್ ಸಿಕ್ಸ್:

ತಮ್ಮ ಮೊದಲ ಸಂಪುಟ ಸಭೆಯಲ್ಲೇ ಯುವಕರು ಹಾಗೂ ದೇಶಕ್ಕೆ ಹೊಸ ರಾಜಕೀಯ ದಿಕ್ಕು ತೋರುತ್ತಿರುವ ಜೆನ್‌-ಝೀ ವರ್ಗವನ್ನು ಆಕರ್ಷಿಸಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಬಸ್ಸಲ್ಲಿ ಉಚಿತ ಪ್ರಯಾಣ ಕಲ್ಪಿಸುವುದಾಗಿ ಘೋಷಿಸಿದರು.

10,000 ಭಾರತ್ ಜೋಡೋ ಯುವ ಸಂಘಟನೆ ರಚನೆ, ಉದ್ಯೋಗಕ್ಕಾಗಿ ಬೀದಿಗಿಳಿದ ಯುವಕರ ಸಿಟ್ಟು ತಣಿಸಲು 56,432 ಹುದ್ದೆ ನೇಮಕಾತಿ ಪ್ರಕಟ, ಸರ್ಕಾರದಿಂದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಯಂಥ ಹತ್ತು ಹಲವು ಘೋಷಣೆ ಮಾಡಿದರು.

ಜನರ ಬದುಕು ಹಸನಿಗೆ ಕ್ರಮ:

ಮೊದಲ ನೂರು ದಿನದಲ್ಲೇ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ‘ಪ್ರಜಾಸೇವೆ’ ಇಲಾಖೆ ಕಾರ್ಯರೂಪಕ್ಕೆ ತಂದರು. ಹಲವು ತಿಂಗಳುಗಳಿಂದ ಓಸಿ-ಸಿಸಿ ಸಮಸ್ಯೆಯಿಂದ ನರಳುತ್ತಿದ್ದವರಿಗೆ ಪರಿಹಾರ ಕಲ್ಪಿಸಿದರು, ಇ-ಖಾತಾ ಸಮಸ್ಯೆ, ಭೂ-ಗ್ಯಾರಂಟಿ, ಬಡವರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ಲಕ್ಷಾಂತರ ಜನಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಆ ಮೂಲಕ ಬದುಕು ಹಸನು ಮಾಡಲು ಯತ್ನಿಸಿದರು.

ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆ ಘೋಷಿಸಿದ ಶಿವಕುಮಾರ್‌ ಅವರು, ಸರ್ಕಾರಿ ಕಚೇರಿಗಳಲ್ಲಿ ಜಿಪಿಎಸ್‌ ಆಧಾರಿತ ಹಾಜರಾತಿ, ಭ್ರಷ್ಟಾಚಾರ ವಿರುದ್ಧ ದೂರು ವ್ಯವಸ್ಥೆ, ತೆರಿಗೆ ವಂಚನೆ ತಡೆ ಸೇರಿ ಹಲವು ಸುಧಾರಣಾ ಕ್ರಮಗಳಿಗೆ ನಾಂದಿ ಹಾಡಿದರು.

ತಂತ್ರಜ್ಞಾನ, ಜನಕಲ್ಯಾಣ, ಉದ್ಯೋಗ ಸೃಷ್ಟಿ, ಯುವ ಜನತೆಯ ಆಶೋತ್ತರ, ಮೂಲಸೌಕರ್ಯ ಅಭಿವೃದ್ಧಿ, ಧಾರ್ಮಿಕ ಹಕ್ಕುಗಳ ರಕ್ಷಣೆಗೆ ವಿಶೇಷ ಗಮನ ನೀಡಿ ಜನಸ್ನೇಹಿ, ಅಭಿವೃದ್ಧಿಶೀಲ, ಭವಿಷ್ಯಮುಖಿ ಕರ್ನಾಟಕ ನಿರ್ಮಾಣದ ವಿಶ್ವಾಸ ಮೂಡಿಸಿದರು.

ತ್ವರಿತ ನಿರ್ಧಾರಗಳ ಪ್ರಯೋಗ ಶಾಲೆ:

ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕಿಂತ ಸಹಕಾರ ತತ್ವದಡಿ ಸಾಗುವ ಪ್ರಯತ್ನ ನಡೆಸಿದ್ದಾರೆ. ಮೊದಲ 100 ದಿನಗಳಲ್ಲೇ ನೂರಾರು ಯೋಜನೆ, ಕಾರ್ಯಕ್ರಮ, ಸುಧಾರಣೆ ಘೋಷಿಸಿದ ಅವರು, ವಿಮರ್ಶೆ, ಟೀಕೆಗಳಿಗೆ ಮಾತಿನ ಬದಲು ಕೆಲಸದ ಮೂಲಕ ಉತ್ತರ ನೀಡುವ ಯತ್ನ ನಡೆಸಿದ್ದಾರೆ. ಅದಕ್ಕಾಗಿ ತಮ್ಮ ಸರ್ಕಾರವನ್ನೇ ವೇಗ ಮತ್ತು ತ್ವರಿತ ನಿರ್ಧಾರಗಳ ಪ್ರಯೋಗ ಶಾಲೆ ಮಾಡಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರೈತರಿಗೆ ತಕ್ಷಣದ ಸ್ಪಂದನೆ:

ಬರದಿಂದ ತತ್ತರಿಸಿರುವ ರೈತರ ಸಮಸ್ಯೆಗಳಿಗೂ ತಕ್ಷಣ ಸ್ಪಂದಿಸುತ್ತಿರುವ ಅವರು ದೀರ್ಘಕಾಲದ ಪರಿಹಾರಕ್ಕೆ ಒತ್ತು ನೀಡಿದ್ದಾರೆ. ಈಗಾಗಲೇ 101 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದು, ಇನ್ನೂ ಹಲವು ತಾಲೂಕುಗಳಲ್ಲಿ ಬರ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ.

ಅಲ್ಲದೆ ಬಿತ್ತನೆ ಬೀಜ ಮತ್ತು ಗೊಬ್ಬರದ ಸಕಾಲಿಕ ಪೂರೈಕೆ, ಬೆಳೆ ವಿಮೆ ಬಾಕಿ ಬಿಡುಗಡೆ, ಬರ ನಿರ್ವಹಣೆ, ನೀರಾವರಿ ಯೋಜನೆಗಳ ಮೇಲಿನ ಒತ್ತು, ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಸೇರಿ ಹಲವು ಕ್ರಮಗಳು ಕೃಷಿಯನ್ನು ತಂತ್ರಜ್ಞಾನ ಮತ್ತು ಉತ್ಪಾದನೆ ಜತೆ ಜೋಡಿಸುವ ಪ್ರಯತ್ನ ನಡೆಸಿದ್ದಾರೆ.

ತಂತ್ರಜ್ಞಾನಕ್ಕೆ ಆದ್ಯತೆ, ಎಐಗೆ ಅಗ್ರಸ್ಥಾನ:

‘ಕೋಡಿಂಗ್ ಗುರುಕುಲ’, ಎಐ ಹಬ್‌ ಹಾಗೂ ಬೆಂಗಳೂರಿನಲ್ಲಿ ಎಐ ವಿವಿ ಸ್ಥಾಪನೆ ಘೋಷಿಸುವ ಮೂಲಕ ತಂತ್ರಜ್ಞಾನ ಹಾಗೂ ಎಐಗೆ ವಿಶೇಷ ಆದ್ಯತೆ ನೀಡಿದ್ದಾರೆ. ಬೆಂಗಳೂರನ್ನು ಡೀಪ್-ಟೆಕ್ ಹಬ್ ಹಾಗೂ ಜವಾಬ್ದಾರಿಯುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಶೇ.7.5ರಷ್ಟು ಮೀಸಲಾತಿ ಸೇರಿ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ.

ನೇಮಕಾತಿ ಸುಧಾರಣೆಗೆ ಯತ್ನ:

ನೇಮಕಾತಿ ಅಕ್ರಮಗಳಿಗೆ ಬ್ರೇಕ್‌ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಅಲ್ಲದೆ ನೇಮಕಾತಿ ಸುಧಾರಣೆಗೆ ಆಗ್ರಹಿಸಿ ಹೋರಾಟ ನಿರತರಾಗಿದ್ದ ಯುವಕರಿಗೆ ಪೂರಕವಾಗಿ ಸ್ಪಂದಿಸಿದರು. ಆ ಮೂಲಕ ಕಾಂಗ್ರೆಸ್‌ನಿಂದ ದೂರ ಉಳಿದಿದ್ದ ಯುವಕರನ್ನು ಆಕರ್ಷಿಸಲು ಯಶಸ್ವಿಯಾಗಿದ್ದಾರೆ.

ಪ್ರಜಾಸೇವೆಗೆ ಆದ್ಯತೆ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದ ಬೆನ್ನಲ್ಲೇ ಪ್ರಜಾಸೇವಾ ಅಭಿಯಾನ ಶುರು ಮಾಡಿದರು. ಇದಕ್ಕಾಗಿ ಪ್ರಜಾಸೇವಾ ಇಲಾಖೆಯನ್ನೇ ಸ್ಥಾಪಿಸಿ ಸಾರ್ವಜನಿಕರ ಬಳಿ ಇಡೀ ಆಡಳಿತ ಯಂತ್ರ ಕೊಂಡೊಯ್ದರು. ಸಾರ್ವಜನಿಕರ ಅಹವಾಲು ನೇರವಾಗಿ ಆಲಿಸುವ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ, ಸ್ಥಳದಲ್ಲೇ ಸೇವೆ ನೀಡುವ ಭರವಸೆ ಮೂಡಿಸಿದರು.

ಬ್ರ್ಯಾಂಡ್‌ ಬೆಂಗಳೂರು ಅಭಿವೃದ್ಧಿಗೆ ಒತ್ತು:

ಬೆಂಗಳೂರು ಅಭಿವೃದ್ಧಿಗೂ ಈ ಅವಧಿಯಲ್ಲಿ ಹೊಸ ಆಯಾಮ ದೊರೆತಿದೆ. ರಸ್ತೆ ಗುಂಡಿ ಮುಕ್ತಗೊಳಿಸುವ ಘೋಷಣೆ, ಬೆಂಗಳೂರು ಬಿಸಿನೆಸ್ ಕಾರಿಡಾರ್, ರಿಂಗ್ ರಸ್ತೆ ಮತ್ತು ಮೊಬಿಲಿಟಿ ಗ್ರಿಡ್, ಸುರಂಗ ರಸ್ತೆ, ಕೆರೆಗಳ ಅಭಿವೃದ್ಧಿ ಹಾಗೂ ಟ್ರೀ ಪಾರ್ಕ್‌ಗಳಂಥ ಯೋಜನೆಗಳು ವೇಗವಾಗಿ ಬೆಳೆಯುತ್ತಿರುವ ನಗರದ ಭವಿಷ್ಯದ ಅಗತ್ಯ ಪೂರೈಸಲು ಗಮನಾರ್ಹ ಕೊಡುಗೆ ನೀಡತೊಡಗಿದ್ದಾರೆ.

ಇನ್ನು ಬೆಂಗಳೂರಿಂದ ಆಚೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕರಾವಳಿ ಭಾಗದ ಪ್ರವಾಸೋದ್ಯಮ ನೀತಿ, ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಆಕರ್ಷಣೆಗೆ ಒತ್ತು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಸಹನೆ, ಛಲ, ಹೋರಾಟದಿಂದ ಕನಸಿನ ಪಟ್ಟಕ್ಕೇರಿದ ನಾಯಕ ಡಿ.ಕೆ. ಶಿವಕುಮಾರ್ ಸರ್ಕಾರಕ್ಕಿಂದು 100 ದಿನ; ಸಿಎಂ ಹಾದಿ ಭಿನ್ನ!
ಜೈಲಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್‌ಗೆ ಬಂತು ಮತ್ತೊಂದು ಕೋರ್ಟ್‌ ಸಮನ್ಸ್‌, ನಿಂತಲ್ಲೇ ನಡುಗಿದ ದಾಸ