
ಚೆನ್ನೈ (ಆ.27): ತೀವ್ರ ಬರಗಾಲದಿಂದ ತತ್ತರಿಸುತ್ತಿರುವ ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲವೆಂದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿಯಲ್ಲಿ ತಮಗೆ ನೀರು ಬೇಕೇಬೇಕು ಎಂದು ಪಟ್ಟು ಬಿಡದೆ ನೀರು ಬಿಡುಗಡೆ ಮಾಡಿಸಿಕೊಂಡ ತಮಿಳುನಾಡು ಸರ್ಕಾರ, ಇದೀಗ ತನ್ನ ರೈತರಿಗೆ ಡ್ಯಾಂನಿಂದ ಭರಪೂರ ನೀರು ಹರಿಸಲು ಮುಂದಾಗಿದೆ.
ಹೌದು, ಕನ್ನಡಿಗರ ಕುಡಿಯುವ ನೀರನ್ನು ಕಿತ್ತುಕೊಂಡ ತಮಿಳುನಾಡು ಸರ್ಕಾರ, ಮೆಟ್ಟೂರು ಜಲಾಶಯದಿಂದ ಕಾವೇರಿ ನದಿಪಾತ್ರದ ಜಿಲ್ಲೆಗಳ ರೈತರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ನೀರು ಹರಿಸಲು ಮುಂದಾಗಿದೆ. ಇನ್ನು ತಮಿಳುನಾಡು ಕಾವೇರಿ ನದಿಪಾತ್ರದ ಜನರ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟಿರುವ ಮೆಟ್ಟೂರು ಜಲಾಶಯದಿಂದ ಸೆ.1ರಿಂದ ಮುಂದಿನ 45 ದಿನಗಳ ಅವಧಿಗೆ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಬುಧವಾರ ತಿಳಿಸಿದೆ.
ಕಾವೇರಿ ನದಿಯ ಉಗಮ ಸ್ಥಾನವಾಗಿರುವ ಕನ್ನಡಿಗರ ತವರು ಕರ್ನಾಟಕ ಸರ್ಕಾರ ಈ ಬಾರಿ ಮಳೆಯ ಕೊರತೆ ಕಾರಣ ರೈತರಿಗೆ ನೀರು ಬಿಡದಿರಲು ನಿರ್ಧರಿಸಿದೆ. ಜೊತೆಗೆ, ಕರ್ನಾಟಕದ ಕಾವೇರಿ ನದಿ ಪಾತ್ರಗಳ ರೈತರಿಗೆ ಭತ್ತ ಹಾಗೂ ಕಬ್ಬು ಬೆಳೆಗಳನ್ನು ಹೊರತುಪಡಿಸಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವಂತೆ ಸೂಚನೆಯನ್ನು ನೀಡಿದೆ. ಇಂತಹ ಹೊತ್ತಿನಲ್ಲೇ ಕರ್ನಾಟಕದಿಂದ ಕಸಿದ ನೀರನ್ನು ತನ್ನ ರೈತರಿಗೆ ಹರಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.
ಸೇಲಂ ಜಿಲ್ಲೆಯ ಮೆಟ್ಟೂರಿನಲ್ಲಿರುವ ಸ್ಟ್ಯಾನ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಿದ್ದ ಕಾರಣ, ವಾಡಿಕೆಯಂತೆ ಜೂ.12ರಂದು ನೀರು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನೀರು ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಒತ್ತಾಯಿಸುತ್ತಿದ್ದವು. ಅದರ ಬೆನ್ನಲ್ಲೇ, ಸಿಎಂ ವಿಜಯ್ ಸೆ.1ರಂದು ಅಧಿಕೃತವಾಗಿ ಜಲಾಶಯದ ತೂಬುಗಳನ್ನು ತೆರೆದು ನೀರು ಬಿಡಲಿದ್ದಾರೆ’ ಎಂದು ತಮಿಳುನಾಡು ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಎನ್. ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಕರ್ನಾಟಕದ ಜಲಾಶಯಗಳಿಂದ ಅಗತ್ಯ ನೀರು ಹರಿಯದ ಕಾರಣ ಹಾಗೂ ಕನಿಷ್ಠ 10 ಟಿಎಂಸಿ ಡೆಡ್ ಸ್ಟೋರೇಜ್ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದರಿಂದ, ನದೀಪಾತ್ರದ ಪ್ರದೇಶಕ್ಕೆ ಸತತವಾಗಿ ನೀರಾವರಿ ನೀರು ಪೂರೈಸಲು ಸಾಧ್ಯವಾಗಿರಲಿಲ್ಲ. ಆದರೂ ಅಗತ್ಯ ಕುಡಿಯುವ ನೀರಿನ ಪೂರೈಕೆಯನ್ನು ಕಾಯ್ದುಕೊಂಡಿದ್ದೆವು' ಎಂದು ಕರ್ನಾಟಕದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ 13,758 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ ಎರಡು ದಿನಗಳಿಂದ ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ನೀರಿನ ಮಟ್ಟ 109.15 (ಗರಿಷ್ಠ 124.80)ಅಡಿಗೆ ಏರಿಕೆಯಾಗಿದೆ. 30.875 ಟಿಎಂಸಿ ನೀರು ಸದ್ಯ ಸಂಗ್ರಹವಾಗಿದೆ. ಡ್ಯಾನಿಂದ 4,513 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ. ಆದರೆ, ಪುನಃ ತಮಿಳುನಾಡು ಸರ್ಕಾರ ಈ ನೀರನ್ನೂ ಕೂಡ ತಮಗೆ ಬೇಕೆಂದು ಬಿಡಿಸಿಕೊಂಡಲ್ಲಿ ಕರ್ನಾಟಕದ ರೈತರು ಪುನಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ