
ಬೆಂಗಳೂರು(ಡಿ.21): ಅತ್ತ ಮಿತ್ರ ಪಕ್ಷ ಹೇಳಿದೊಡನೆ ಸಂಪುಟ ವಿಸ್ತರಣೆಗೆ ಬದ್ಧ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇತ್ತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಇದೇ ಡಿ.22ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದ್ದರೂ, ಹೊಸ ಸಚಿವರ ಪಟ್ಟಿ ಸಿದ್ಧಪಡಿಸುವುದೇ ಅದಕ್ಕೆ ದೊಡ್ಡ ತಲೆನೋವಾಗಿದೆ.
ಅದರಂತೆ ಇಂದು ರಾಜ್ಯ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನವದೆಹಲಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಚರ್ಚಿಸಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಅವರೊಂದಿಗೂ ಈ ನಾಯಕರು ಚರ್ಚೆ ಮಾಡಲಿದ್ದಾರೆ.
ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೊಸದೊಂದು ಪ್ಲ್ಯಾನ್ ಮಾಡಿದೆ ಎನ್ನಲಾಗಿದ್ದು, ಸಚಿವರಾದ ಶಂಕರ್ ಜಯಮಾಲಾ, ರಮೇಶ್ ಜಾರಕಿಹೊಳಿ ಅವರನ್ನು ಕೈಬಿಟ್ಟು ಒಟ್ಟು 9 ಹೊಸ ಸಚಿವರನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂದರೆ 6 ಜನ ಹೊಸ ಸಚಿವರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಅದರಂತೆ ಕೈ ಬಿಟ್ಟ ಸಚಿವರ ಜಾತಿಯ ಶಾಸಕರನ್ನೇ ಸಚಿವರನ್ನಾಗಿ ಮಾಡುವ ಪ್ರಸ್ತಾವನೆಯೂ ಇದೆ ಎನ್ನಲಾಗಿದೆ.
ದಲಿತ ಎಡಗೈ, ಕುರುಬ, ಲಿಂಗಾಯತ, ಮುಸ್ಲಿಂ, ನಾಯಕ ಮತ್ತು ಲಮಾಣಿ ಸಮುದಾಯಕ್ಕೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಪ್ರಾಮುಖ್ಯತೆ ನೀಡುವ ಸಾಧ್ಯತೆಯೂ ದಟ್ಟವಾಗಿದೆ.
ಅದರಂತೆ ಜಾತಿವಾರು ಲೆಕ್ಕಾಚಾರದ ಪ್ರಕಾರ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬುದನ್ನು ನೋಡುವುದಾದರೆ..
ದಲಿತ ಎಡಗೈ-ಆರ್.ಬಿ. ತಿಮ್ಮಾಪೂರ ಅಥವಾ ಧರ್ಮಸೇನ
ನಾಯಕ ಸಮುದಾಯ-ತುಕಾರಾಂ
ಲಮಾಣಿ ಸಮುದಾಯ-ಉಮೇಶ್ ಜಾಧವ್ ಅಥವಾ ಭೀಮಾ ನಾಯಕ
ಕುರುಬ ಸಮುದಾಯ-ಸಿ.ಎಸ್ ಶಿವಳ್ಳಿ ಅಥವಾ ಎಂಟಿಬಿ ನಾಗರಾಜ್
ಮುಸ್ಲಿಂ ಸಮುದಾಯ-ರಹೀಮ್ ಖಾನ್ ಮತ್ತು ಎನ್.ಎ. ಹ್ಯಾರಿಸ್
ಲಿಂಗಾಯತ ಸಮುದಾಯ-ಎಂ.ಬಿ. ಪಾಟೀಲ್, ಅಮರೇಗೌಡ ಬಯ್ಯಾಪುರ, ಶರಣಬಸಪ್ಪಾ ದರ್ಶನಾಪುರ
ಇನ್ನು ಸಚಿವ ಸಂಪುಟದ ಜೊತೆಗೆ 20 ನಿಗಮ ಮಂಡಳಿಗಳನ್ನು ಕೂಡ ಭರ್ತಿ ಮಾಡುವ ಸಾಧ್ಯತೆ ಇದ್ದು, ಇವುಗಳಲ್ಲಿ 10 ನಿಗಮ ಮಂಡಳಿಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಶಿಡ್ಲಘಟ್ಟದ ವಿ. ಮುನಿಯಪ್ಪ ಸೇರಿ ಅನೇಕರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ