ಕರ್ನಾಟಕ ಬಜೆಟ್: ಎಸ್ಸಿ, ಎಸ್ಟಿ ಕಲ್ಯಾಣಕ್ಕೆ ಭರಪೂರ ಅನುದಾನ: ಕೇವಲ 4% ಬಡ್ಡಿ ದರದಲ್ಲಿ ₹10 ಲಕ್ಷ ಸಾಲ ಯಾರಿಗೆ?

Kannadaprabha News, Ravi Janekal |   | Kannada Prabha
Published : Mar 07, 2026, 05:47 AM IST
Karnataka budget SC ST welfare schemes details

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ₹44,632 ಕೋಟಿ ಮೀಸಲಿಟ್ಟಿದ್ದಾರೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಸತಿ ನಿಲಯಗಳ ಸುಧಾರಣೆ, ಮತ್ತು ಹೊಸ ಆಯೋಗಗಳ ಸ್ಥಾಪನೆಯಂತಹ ಹಲವು ಯೋಜನೆಗಳನ್ನು ಘೋಷಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ.

ಪರಿಶಿಷ್ಟ ಜಾತಿ ಉಪಯೋಜನೆಗೆ 31,804 ಕೋಟಿ ರು. ಹಾಗೂ ಬುಡಕಟ್ಟು ಉಪಯೋಜನೆಗೆ 12,828 ಕೋಟಿ ರು. ಸೇರಿ ಎಸ್ಸಿಪಿ-ಟಿಎಸ್‌ಪಿಗೆ ಬರೋಬ್ಬರಿ 44,632 ಕೋಟಿ ರು. ಮೊತ್ತದ ಅನುದಾನವನ್ನು 2026-27ನೇ ಆಯವ್ಯಯದಲ್ಲಿ ಮೀಸಲಿಟ್ಟಿದ್ದಾರೆ.

ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳನ್ನು ಸಂರಕ್ಷಿಸಲು ಹಾಗೂ ದೂರು, ಅಹವಾಲು ಆಲಿಸಲು ಪರಿಶಿಷ್ಟ ಪಂಗಡಗಳ ಆಯೋಗ ರಚಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಕೌಶಲ್ಯ ಮತ್ತು ಜೀವನೋಪಾಯಕ್ಕೆ ನೆರವಿಗೆ ವಿಶೇಷ ಆದ್ಯತೆ ನೀಡಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡಿದ್ದಾರೆ.

ಹಾಸ್ಟೆಲ್‌ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ:

6,562 ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಪ್ರಸ್ತುತ 8.50 ಲಕ್ಷ ವಿದ್ಯಾರ್ಥಿಗಳಿದ್ದು, ಇವುಗಳ ನಿರ್ವಹಣೆಯಲ್ಲಿ ಸುಧಾರಣೆ ತರಲು ಒಂದು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಜತೆಗೆ ಮೆಸ್ ನಿರ್ವಹಣೆಗೆ ಪ್ರಾಯೋಗಿಕವಾಗಿ 50 ಹಾಸ್ಟೆಲ್‌ಗಳಲ್ಲಿ ಮೆಸ್‌ ಸಮಿತಿ ರಚಿಸಲಾಗುವುದು ಎಂದು ಹೇಳಲಾಗಿದೆ.

ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು 40 ಹೊಸ ವಸತಿ ಶಾಲೆಗಳನ್ನು ಪ್ರಾರಂಭ ಹಾಗೂ 31 ವಸತಿ ಶಾಲೆ ಉನ್ನತೀರಕಣ ಮಾಡಲಾಗುವುದು.

ಪ್ರತಿ ಜಿಲ್ಲೆಗೆ ತಲಾ ಒಂದು ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆಗೆ 62 ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು. ಅಲೆಮಾರಿ, ಅರೆ ಅಲೆಮಾರಿಗಳಿಗೆ ಕಂದಾಯ ವಿಭಾಗಕ್ಕೆ ಒಂದರಂತೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು 25 ಕೋಟಿ ರು, ಕ್ರೈಸ್ ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಲಭ್ಯಕ್ಕೆ 50 ಕೋಟಿ ರು, ವಿವಿಧ ಹಾಸ್ಟೆಲ್‌ಗಳ ಸ್ವಂತ ಕಟ್ಟಕ್ಕೆ 660 ಕೋಟಿ ರು. ಮೀಸಲಿಡಲಾಗಿದೆ.

ನಾಲ್ಕು ಕೈಸ್ ವಸತಿ ಶಾಲೆಗಳನ್ನು ಕೆ-ಸಿಇಟಿ/ಜೆಇಇ/ನೀಟ್‌ ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡಲು ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಆಗಿ ಉನ್ನತೀಕರಿಸಲು 5 ಕೋಟಿ ರು, ಅಲೆಮಾರಿ ನಿಗಮಕ್ಕೆ 100 ಕೋಟಿ ರು. ಮೀಸಲಿಡಲಾಗಿದೆ.

ನಾಲ್ಕು ಸಿಬಿಎಸ್‌ಇ ಶಾಲೆ:

ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ ಸಿಬಿಎಸ್ಇ ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆ ಆರಂಭ. ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತವನ್ನು 75,000 ರು.ಗಳಿಂದ 1,50,000 ರು.ಗಳಿಗೆ ಹೆಚ್ಚಿಸುವುದು. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ 2026-27ನೇ ಸಾಲಿನಲ್ಲಿ 1,500 ಕೋಟಿ ರು. ಒದಗಿಸಲಾಗುವುದು ಎಂದು ಘೋಷಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ:

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಬೇಡಿಕೆಯಿರುವ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸವಿತಾ ಸಮಾಜದವರು ಸಲೂನ್‌ ತೆರೆಯಲು ಶೇ.4ರಷ್ಟು ಬಡ್ಡಿದರದಲ್ಲಿ 10 ಲಕ್ಷ ರು.ವರೆಗೆ ಸಾಲ ಮತ್ತು ಸಹಾಯಧನ ಮಂಜೂರು, ಹಿಂದುಳಿದ ವರ್ಗಗಳ 250 ಇಂಜಿನಿಯರಿಂಗ್ ಪದವೀಧರರಿಗೆ ಅವರ ತಾಂತ್ರಿಕ ಕೌಶಲ್ಯ ಉತ್ಕೃಷ್ಟಗೊಳಿಸಲು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ NIT/IIT/IIM ಗಳಲ್ಲಿ AI ತರಬೇತಿ ಪಡೆಯಲು ತಲಾ ಎರಡು ಲಕ್ಷ ರು. ಗಳಂತೆ ಸಾಲ ನೀಡಲಾಗುವುದು.

ಒಬಿಸಿ ಪ್ರವರ್ಗ-1ರ ಅಡಿ ಬರುವ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ವ್ಯಾಸಂಗ ಉತ್ತೇಜಿಸಲು ಎಸ್ಸಿ,ಎಸ್ಟಿಗೆ ನೀಡುವ ಸೌಲಭ್ಯ ವಿಸ್ತರಿಸಲಾಗುವುದು.

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ

ಹಿಂದುಳಿದ ವರ್ಗಗಳ ಕಾರ್ಯಕ್ರಮಗಳ ಅನುಷ್ಠಾನ, ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಮತ್ತು ಈ ವರ್ಗಗಳ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು.

ಎಸ್ಸಿ,ಎಸ್ಟಿಗೆ ಆರ್‌ಟಿಇ ಮುಂದುವರಿಕೆ

ಶಿಕ್ಷಣ ಹಕ್ಕು ಕಾಯಿದೆ ಅಡಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶ ಪಡೆದ ಶಾಲೆಗಳಲ್ಲಿಯೇ 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮುಂದುವರೆಸಲು ಅವಕಾಶ ಕಲ್ಪಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 19 ಕೋಟಿ ರು. ಅನುದಾನವನ್ನು ಸಿದ್ದರಾಮಯ್ಯ ಒದಗಿಸಿದ್ದಾರೆ.

ಪಾಯಿಂಟರ್ಸ್‌

- ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳಿಗ, ಸೋಲಿಗ, ಜೇನುಕುರುಬ ಸೇರಿ ಇತರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡಗಳಿಗಾಗಿ ʻಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮʼ ಸ್ಥಾಪನೆ

- ಎಸ್ಸಿ, ಎಸ್ಟಿ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಮಂದಿ ಸಾಮರ್ಥ್ಯದ 10 ವಸತಿ ನಿಲಯ ಸ್ಥಾಪನೆ

- ಸಮಾಜ ಕಲ್ಯಾಣ ಇಲಾಖೆಯಡಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ 

  • ಎಸ್ಸಿಪಿ-ಟಿಎಸ್‌ಪಿಗೆ 44,632 ಕೋಟಿ ಹಣ, ಎಸ್ಟಿ ಆಯೋಗ ರಚನೆ
  • ಓಬಿಸಿ ಮೀಸಲು, ಬ್ಯಾಕ್‌ಲಾಗ್‌ ಬಗ್ಗೆ ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ
  • ಸೆಲೂನ್‌ ತೆರೆಯಲು ಶೇ.4ರಷ್ಟು ಬಡ್ಡಿಯಲ್ಲಿ 10 ಲಕ್ಷ ವರೆಗೆ ಸಾಲ
  • ಹಿಂದುಳಿದ ವರ್ಗದ ಎಂಜಿನಿಯರ್‌ಗಳಿಗೆ ಎಐ ತರಬೇತಿಗೆ ಸಾಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗ ಮಾಡುವ ಸ್ಥಳಕ್ಕೆ ನಾಯಿ ಕರೆತಂದು ಮಲ-ಮೂತ್ರ ವಿಸರ್ಜನೆ, ಪ್ರಶ್ನಿಸಿದ ಹಿರಿಯರ ಮೇಲೆ ಹಲ್ಲೆ!
ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿ ನಡೆಯುತ್ತೆ: ಸಿಎಂ