
ಬೆಂಗಳೂರು(ಮಾ.6): "ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ" ಎಂಬ ಬಿ.ಆರ್. ಲಕ್ಷ್ಮಣರಾವ್ ಅವರ ಸಾಲುಗಳನ್ನು ಉಲ್ಲೇಖಿಸಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಮುನ್ನುಡಿ ಬರೆದಿದೆ.
ಈ ಬಾರಿಯ ಬಜೆಟ್‌ನ ಪ್ರಮುಖ ಹೈಲೈಟ್ ಎಂದರೆ ಉರ್ದು ಶಾಲೆಗಳ ಅಭಿವೃದ್ಧಿ. ಕಳೆದ ವರ್ಷ 117 ಮೌಲಾನಾ ಆಜಾದ್ ಮತ್ತು ಉರ್ದು ಶಾಲೆಗಳನ್ನು ಕೆ.ಪಿ.ಎಸ್ (KPS) ಮಾದರಿಯಲ್ಲಿ ಉನ್ನತೀಕರಿಸಲಾಗುತ್ತಿತ್ತು. ಅದರ ಮುಂದುವರಿದ ಭಾಗವಾಗಿ, ಪ್ರಸಕ್ತ ಸಾಲಿನಲ್ಲಿ ಇನ್ನೂ 100 ಉರ್ದು ಶಾಲೆಗಳನ್ನು 400 ಕೋಟಿ ರೂ. ವೆಚ್ಚದಲ್ಲಿ ಕೆ.ಪಿ.ಎಸ್ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ.
ಶಿಶುನಾಳ ಶರೀಫ ವಸತಿ ಶಾಲೆ: ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 10 ಹೊಸ CBSE ಪಠ್ಯಕ್ರಮದ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. 2026-27ನೇ ಸಾಲಿನಲ್ಲಿ ಒಟ್ಟು 25 ಅಂತಹ ಶಾಲೆಗಳನ್ನು ತೆರೆಯುವ ಗುರಿ ಇದೆ.
ಲ್ಯಾಪ್ಟಾಪ್ ವಿತರಣೆ: ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡಲು 5,000 ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್ಟಾಪ್ ನೀಡಲಾಗುವುದು.
ತರಬೇತಿ ಕೇಂದ್ರಗಳು: NEET/JEE/K-CET ಪರೀಕ್ಷೆಗಳಿಗೆ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು 'Center of Excellence' ಗಳನ್ನಾಗಿ ಪರಿವರ್ತಿಸಲಾಗುವುದು.
ವಿದ್ಯಾರ್ಥಿನಿಲಯಗಳು: 25 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ, ಹಳೆಯ ನಿಲಯಗಳ ಸಂಖ್ಯಾಬಲ ಹೆಚ್ಚಿಸಲಾಗುವುದು.
ಜೈನ, ಬೌದ್ಧ, ಸಿಖ್ ಅಭಿವೃದ್ಧಿ: ಈ ಮೂರು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿಡಲಾಗಿದೆ.
ಧಮ್ಮಾಚಾರಿಗಳಿಗೆ ಗೌರವಧನ: ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ಮಾಸಿಕ 6,000 ರೂ. ಗೌರವಧನ ಘೋಷಿಸಲಾಗಿದೆ.
ಅಂಬೇಡ್ಕರ್ ಸಾಹಿತ್ಯ ಅನುವಾದ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರೆ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದಿಸಲಾಗುವುದು.
ಮೊಬೈಲ್ ಕಿಚನ್ ನೆರವು: ನಿರುದ್ಯೋಗಿ ಯುವಕರಿಗೆ ಫಾಸ್ಟ್ ಫುಡ್ ಟ್ರಕ್ ಅಥವಾ ಮೊಬೈಲ್ ಕಿಚನ್ ಆರಂಭಿಸಲು ಘಟಕ ವೆಚ್ಚದ ಶೇ.75 ರಷ್ಟು ಅಂದರೆ ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಮಹಿಳಾ ವಸತಿ ನಿಲಯ: ಬೆಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ನಾಲ್ಕು ಹೊಸ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು.
ವೃದ್ಧಾಶ್ರಮಗಳಿಗೆ ನೆರವು: ಕ್ರೈಸ್ತ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಸಮಗ್ರ ಆರೈಕೆ ಘಟಕಗಳನ್ನು ಸ್ಥಾಪಿಸಲು 5 ಕೋಟಿ ರೂ. ಒದಗಿಸಲಾಗಿದೆ.
ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಯಾತ್ರಿಕರಿಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಅಲ್ಪಸಂಖ್ಯಾತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಈ ಬಜೆಟ್ ಪೂರಕವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ