
ಬೆಂಗಳೂರು (ಮಾ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿಶೇಷವಾಗಿ ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಾಲಯಗಳ ಅಭಿವೃದ್ಧಿಗೆ ಹೊಸ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. ಈ ದೇವಾಲಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅತಿ ಹೆಚ್ಚು ಆದಾಯ ತರುವ ಹಾಗೂ ಲಕ್ಷಾಂತರ ಭಕ್ತರು ಭೇಟಿ ನೀಡುವ 'ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ' ಮತ್ತು 'ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ'ಗಳ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಎರಡೂ ಕ್ಷೇತ್ರಗಳಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಈ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳು ಹೆಚ್ಚು ವ್ಯವಸ್ಥಿತವಾಗಿ ನಡೆಯಲಿವೆ.
ಕರ್ನಾಟಕದಿಂದ ಜಮ್ಮು-ಕಾಶ್ಮೀರದ ಪವಿತ್ರ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಯಾತ್ರಾರ್ಥಿಗಳಿಗೆ ತಲಾ 5,000 ರೂ.ಗಳ ಸಹಾಯಧನವನ್ನು ಡಿ.ಬಿ.ಟಿ (Direct Benefit Transfer) ಮೂಲಕ ವಿತರಿಸಲು ಐದು ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ಹೊರ ರಾಜ್ಯದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಕನ್ನಡಿಗರಿಗಾಗಿ ಕರ್ನಾಟಕ ರಾಜ್ಯ ಛತ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ವಾರಣಾಸಿಯಲ್ಲಿ ಶಿಥಿಲಗೊಂಡಿರುವ ಹಳೆಯ ಛತ್ರದ ಬದಲಿಗೆ ಹೊಸ ರಾಜ್ಯ ಛತ್ರ ನಿರ್ಮಾಣವಾಗಲಿದೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿರುವ ರಾಜ್ಯ ಛತ್ರದ ನವೀಕರಣ ಮಾಡಲಾಗುತ್ತದೆ. ಶ್ರೀಶೈಲಂನಲ್ಲಿ ಹೊಸದಾಗಿ ಸುಸಜ್ಜಿತ ಯಾತ್ರಿನಿವಾಸ ನಿರ್ಮಾಣ ಆಗಲಿದೆ. ತುಳಜಾಪುರದಲ್ಲಿ ಪ್ರಸ್ತುತ ಇರುವ ಛತ್ರದ ಪುನರ್ ನಿರ್ಮಾಣ ಮಾಡಲಾಗುತ್ತದೆ.
ಜಲ ನಿಧಿ ಕಲ್ಯಾಣಿಗಳ ಪುನಃಶ್ಚೇತನ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 259 ಕಲ್ಯಾಣಿಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪುನರುಜ್ಜೀವನಗೊಳಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕೆ ಮೊದಲ ಹಂತದಲ್ಲಿ 5 ಕೋಟಿ ರೂ. ಒದಗಿಸಲಾಗಿದೆ.
ಬೆಂಗಳೂರಿನಲ್ಲಿ ವಿದ್ಯಾರ್ಥಿ ನಿಲಯ: ಕೆಂಪೇಗೌಡ ವೃತ್ತದ ಬಳಿ ಇರುವ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುವುದು.
ಪಾರದರ್ಶಕ ವರ್ಗಾವಣೆ: ಇಲಾಖೆಯ ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ 'ಕೌನ್ಸೆಲಿಂಗ್ ವ್ಯವಸ್ಥೆ' ಜಾರಿಗೆ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ