Karnataka Budget 2026–27 ಸಿದ್ದು ದಾಖಲೆಯ 17ನೇ ಬಜೆಟ್‌: ಇಂದು ಬೆಳಗ್ಗೆ 10.15ಕ್ಕೆ ಮಂಡನೆಗೆ ಕ್ಷಣಗಣನೆ

Kannadaprabha News, Ravi Janekal |   | Kannada Prabha
Published : Mar 06, 2026, 04:56 AM IST
CM Siddaramaiah Karnataka Budget 2026 27

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್ ಮಂಡಿಸುತ್ತಿದ್ದು, ಆರ್ಥಿಕ ಶಿಸ್ತು ಮತ್ತು ಜನಪರ ಯೋಜನೆಗಳ ನಡುವೆ ಸಮತೋಲನ ಸಾಧಿಸುವ ಸವಾಲು ಎದುರಿಸುತ್ತಿದ್ದಾರೆ. ಗ್ಯಾರಂಟಿಗಳ ನಡುವೆಯೂ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಿಂದುಳಿದ ತಾಲೂಕುಗಳಿಗೆ ಅನುದಾನ ನೀಡುವ ನಿರೀಕ್ಷೆಯಿದೆ.

ಬೆಂಗಳೂರು (ಮಾ.6): ಹಣದ ಬರ, ಗ್ಯಾರಂಟಿಗಳ ಭಾರ, ನಿರೀಕ್ಷೆಗಳ ಹೊರೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಅಣಿಯಾಗಿದ್ದು, ಆರ್ಥಿಕ ಶಿಸ್ತು ಸರಿದಾರಿಗೆ ತರುವ ಜತೆಗೆ ಜನರ ನಿರೀಕ್ಷೆ ಈಡೇರಿಸುವುದಕ್ಕೂ ಆದ್ಯತೆ ನೀಡುವ ಸಾಧ್ಯತೆಯಿದೆ.

ರಾಜ್ಯದ ಮಟ್ಟಿಗೆ ಅತಿ ಹೆಚ್ಚು ಹಾಗೂ ದೇಶದಲ್ಲಿ ಎರಡನೇ ಅತಿ ಹೆಚ್ಚು ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ 10.15 ಗಂಟೆಗೆ ತಮ್ಮ ಆಯ-ವ್ಯಯ ಲೆಕ್ಕ ಬಿಚ್ಚಿಡಲಿದ್ದಾರೆ.

ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಗೆ ಸಿದ್ದರಾಮಯ್ಯ ಬಜೆಟ್‌ ತೀವ್ರ ಮಹತ್ವ ಪಡೆದುಕೊಂಡಿದ್ದು, ಕೇವಲ ಆದಾಯ-ಖರ್ಚಿನ ಲೆಕ್ಕಪತ್ರ ಮಾತ್ರವಲ್ಲದೆ ರಾಜಕೀಯ ಪ್ರಣಾಳಿಕೆಯಂತಹ ದೂರದರ್ಶಿ ಬಜೆಟ್‌ ಮಂಡಿಸುವ ನಿರೀಕ್ಷೆಯಿದೆ.

ವಿಬಿ ಜಿ ರಾಮ್‌ ಜಿ ಬಗ್ಗೆ ಬಜೆಟ್‌ ಅಭಿಪ್ರಾಯ, ಜಿಎಸ್‌ಟಿ ಲಾಭ ಕಡಿತ, ಕೇಂದ್ರದ ಆರ್ಥಿಕ ಅನ್ಯಾಯದ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆ ಹಿನ್ನೆಲೆ ಎಲ್ಲರ ಚಿತ್ತ ಬಜೆಟ್‌ನತ್ತ ನೆಟ್ಟಿದೆ.

ಸಾಲದ ಹೊರೆ, ಗ್ಯಾರಂಟಿಗಳ ಭಾರದ ನಡುವೆಯೂ ಈ ವರ್ಷವೂ ರಾಜ್ಯದ ಜನರಿಗೆ ಹಲವು ಕೊಡುಗೆ ನೀಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ‘ಇಂದಿರಾ ಆಹಾರ ಕಿಟ್‌’, ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಸಹಾಯಧನದ ಜತೆಗೆ ಸೀರೆ ವಿತರಣೆ, ವಸತಿ ಹಂಚಿಕೆ ಗೊಂದಲ ನಿವಾರಿಸಿ ಸೂರು ಒದಗಿಸುವ ಭರವಸೆ ಇದೆ.

ಜತೆಗೆ ಮೂಲಸೌಕರ್ಯ ಯೋಜನೆ, ಹದಗೆಟ್ಟ ರಸ್ತೆಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಪ್ಪಿಸಲು ವಿಶೇಷ ಪ್ಯಾಕೇಜ್, ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ಅನುದಾನ ತೆಗೆದಿರುವ ಸಾಧ್ಯತೆ ಇದೆ. ಡಾ.ನಂಜುಂಡಪ್ಪ ವರದಿಯಲ್ಲಿದ್ದ ಹಿಂದುಳಿದ ತಾಲೂಕುಗಳ ಸಂಖ್ಯೆ ಗೋವಿಂದರಾವ್ ವರದಿಯಲ್ಲಿ ಮತ್ತಷ್ಟು ಹೆಚ್ಚಾಗಿದೆ. ಈ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 15,000 ಕೋಟಿ ರು.ಗೆ ಬೇಡಿಕೆಯಿದ್ದು, ಈ ವರ್ಷ ಕನಿಷ್ಠ 5,000 ಕೋಟಿ ರು. ಮೀಸಲಿಡುವ ನಿರೀಕ್ಷೆಯಿದೆ.

ತೆರಿಗೆ ಹೊರೆಯೂ ಕಾದಿದೆ?:

ಬಜೆಟ್ ಗಾತ್ರ ಆದಾಯಕ್ಕೂ ಮೀರಿ 4.5 ಲಕ್ಷ ಕೋಟಿಗೂ ಹೆಚ್ಚಾಗಲಿದೆ. ಇದನ್ನು ಸರಿದೂಗಿಸಲು ಜನರಿಗೆ ಹೆಚ್ಚುವರಿ ತೆರಿಗೆ ಹೊರೆಯೂ ಕಾದಿದೆ. ಪ್ರಮುಖವಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ 1 ರು. ಹೆಚ್ಚಳ, ಅಬಕಾರಿ ಸುಂಕ, ನೋಂದಣಿ ಮತ್ತು ಮುಂದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಸೇರಿ ಮತ್ತಿತರ ತೆರಿಗೆ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅಬಕಾರಿ ತೆರಿಗೆ ಗುರಿಯನ್ನು 40,000 ಕೋಟಿ ರು.ಗಳಿಂದ 45,000 ಕೋಟಿ ರು.ಗಳಿಗೆ ಹೆಚ್ಚಿಸುವ ಸಾಧ್ಯತೆಯಿದ್ದು, ಮಾರ್ಗಸೂಚಿ ದರ ಪರಿಷ್ಕರಣೆ ಬಳಿಕ ನೋಂದಣಿ ಮತ್ತು ಮುದ್ರಾಂಕ ಆದಾಯವೂ ವೃದ್ಧಿಯಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ತೆರಿಗೆ ವ್ಯಾಪ್ತಿಯ ವಿಸ್ತರಣೆ, ರಾಜ್ಯದ ತೆರಿಗೆಯೇತರ ಆದಾಯ ಹೆಚ್ಚಳ, ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆಯೂ ಚರ್ಚೆ ನಡೆದಿದೆ.

30 ವರ್ಷಗಳಲ್ಲಿ ಸಿದ್ದು 17ನೇ ಬಜೆಟ್‌:

1995-96ರಲ್ಲಿ ಮೊದಲ ಮುಂಗಡಪತ್ರ ಮಂಡಿಸಿದ್ದ ಸಿದ್ದರಾಮಯ್ಯ ಕಳೆದ 30 ವರ್ಷಗಳಲ್ಲಿ 17 ಬಜೆಟ್‌ ಮಂಡಿಸಿದಂತಾಗಲಿದೆ. ಕಳೆದ 30 ವರ್ಷಗಳಲ್ಲಿ ಮಂಡನೆಯಾಗಿರುವ ಒಟ್ಟು ಬಜೆಟ್‌ಗಳಲ್ಲಿ ಅರ್ಧಕ್ಕೂ ಹೆಚ್ಚು ಬಜೆಟ್‌ ಸಿದ್ದರಾಮಯ್ಯ ಅವರೇ ಮಂಡಿಸಿದ್ದಾರೆ.

ತಮ್ಮ ಹಿಂದಿನ ಬಜೆಟ್‌ಗಳಲ್ಲಿ ಪ್ರಮುಖವಾಗಿ ಗ್ಯಾರಂಟಿಗಳ ಹೊರತಾಗಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ, ಅಲ್ಪಸಂಖ್ಯಾತ ಯುವತಿಯರಿಗೆ ಶಾದಿ ಭಾಗ್ಯ ಯೋಜನೆ, ಕೃಷಿ ಹೊಂಡ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿ ಸೇರಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆ ಮೂಲಕ ಜನ ಕಲ್ಯಾಣ ಯೋಜನೆಗಳು, ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಈ ಬಜೆಟ್‌ನಲ್ಲೂ ಸೀಮಿತ ಹಣಕಾಸು ಬಯಸುವ ಕಲ್ಯಾಣ ಕಾರ್ಯಕ್ರಮಗಳ ಘಮ ತೋರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮತೋಲನ ಸಾಧಿಸುವ ಸವಾಲು:

ಗ್ಯಾರಂಟಿ, ಜನಪ್ರಿಯ ಕಾರ್ಯಕ್ರಮಗಳು, ಹೆಚ್ಚುತ್ತಿರುವ ಸಾಲದ ಹೊರೆ ಹಾಗೂ ಅಭಿವೃದ್ಧಿ ಯೋಜನೆಗಳ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು 2025-26 ಸಾಲಿನಲ್ಲಿ 1,16,000 ಕೋಟಿ ರು. ಸಾಲ ಎತ್ತುವಳಿಯ ಅಂದಾಜು ಮಾಡಿದ್ದರು. ಹೀಗಾಗಿ ಈಗಾಗಲೇ ರಾಜ್ಯದ ಸಾಲದ ಪ್ರಮಾಣ 7.5 ಲಕ್ಷ ಕೋಟಿ ರು. ದಾಟಿದೆ.

ಪ್ರಸಕ್ತ ವರ್ಷದಲ್ಲಿ (2025-26) ವಿತ್ತೀಯ ಕೊರತೆ 2.95ರಷ್ಟಿದ್ದು, ಒಟ್ಟು ಹೊಣೆಗಾರಿಕೆ 24.9 ರಷ್ಟಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ಯಾವುದೇ ಹೆಚ್ಚುವರಿ ಸಾಲಕ್ಕೆ ಅವಕಾಶವಿಲ್ಲ.

ಇನ್ನು ಮಧ್ಯಮಾವಧಿ ವಿತ್ತೀಯ ಮುನ್ನಂದಾಜು ಪ್ರಕಾರ 2026-27 ಸಾಲಿನಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳು 8.41 ಲಕ್ಷ ಕೋಟಿ ರು.‌ ತಲುಪುವ ಸಾಧ್ಯತೆ ಇದೆ.

ಅಂದರೆ, ಪ್ರಸಕ್ತ ವರ್ಷದಲ್ಲಿ ಮಧ್ಯಮಾವಧಿ ವಿತ್ತೀಯ ವರದಿ ಪ್ರಕಾರ 80,000 ಕೋಟಿ ರು. ಮಾತ್ರ ಸಾಲ ಪಡೆಯಲು ಅವಕಾಶವಿದೆ. ಆದರೆ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಸರಿದೂಗಿಸಲು ಕೇಂದ್ರದ ತೆರಿಗೆ ಪಾಲು, ಹಣಕಾಸು ನೆರವು, ರಾಜ್ಯದ ಆದಾಯ ಹೊರತಾಗಿ ಕನಿಷ್ಠ 1.25 ಲಕ್ಷ ಕೋಟಿ ರು. ಹಣ ಬೇಕಿದೆ. ಉಳಿದ ಹಣವನ್ನು ಯಾವ ಮೂಲದಿಂದ ಸೃಜನೆ ಮಾಡಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಆಸ್ತಿ ನಗದೀಕರಣ ಕುತೂಹಲ

ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ.ಕೃಷ್ಣನ್ ನೇತೃತ್ವದ ಸಂಪನ್ಮೂಲ ಕ್ರೋಢೀಕರಣ ಸಮಿತಿ ನಗರದ ಭೂ ಸ್ವತ್ತುಗಳನ್ನು ನಗದೀಕರಿಸುವ ಮೂಲಕ ಆದಾಯ ಸಂಗ್ರಹ ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿದೆ.

ಸರ್ಕಾರಿ ಸ್ವತ್ತುಗಳಿಂದ ಗುತ್ತಿಗೆ ಮತ್ತು ನಗದೀಕರಣದಿಂದ ಹೆಚ್ಚಿನ ರಾಜಸ್ವ ಸೃಜಿಸುವ ಅವಕಾಶಗಳನ್ನು ಬಳಕೆ ಮಾಡಬಹುದು. ಜತೆಗೆ ಖಾಸಗಿ ಸಂಘ-ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಲಾದ ಸರ್ಕಾರಿ ಜಮೀನುಗಳ ಲೀಸ್ ಮೊತ್ತವನ್ನು ಪ್ರಸಕ್ತ ಮಾರುಕಟ್ಟೆ ಬೆಲೆಗೆ ಪರಿಷ್ಕರಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಿದ್ದಾರೆಯೇ? ಹೌದಾದರೆ ಹೇಗೆ ಅಳವಡಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KPSC: ಕೆಎಎಸ್‌ ಪರೀಕ್ಷೆಯಲ್ಲಿ ಅಕ್ರಮ ಆಗಿಲ್ಲ: ಸಾಕ್ಷಿಯೂ ಇಲ್ಲ, ದೂರೂ ಬಂದಿಲ್ಲ, ದೋಷರಹಿತವಾಗಿ ನಡೆದಿದೆ ಪರೀಕ್ಷೆ - ಕೆಪಿಎಸ್ಸಿ
ಬಗೆಹರಿಯದ ಒಳಮೀಸಲು ಗೋಜಲು; ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣ, ವಿಶೇಷ ಸಂಪುಟ ಸಭೆಗೆ ನಿರ್ಧಾರ