Karnataka Budget 2026-27: ದಾವಣಗೆರೆ ಜನರ ನಿರೀಕ್ಷೆಯ ಇನ್ನೊಂದು ಖಾಲಿ ಜೋಳಿಗೆ?

Kannadaprabha News, Ravi Janekal |   | Kannada Prabha
Published : Mar 06, 2026, 08:22 AM IST
Karnataka Budget 2026 27 Another Empty Promise for Davanagere Key Expectations vs Reality

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಮೇಲೆ ದಾವಣಗೆರೆ ಜಿಲ್ಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕೈಗಾರಿಕೆ, ಕೃಷಿ ಸಂಸ್ಕರಣಾ ಘಟಕ, ನೀರಾವರಿ ಯೋಜನೆಗಳು, ಐಟಿ ಪಾರ್ಕ್ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಂತಹ ದಶಕಗಳ ಬೇಡಿಕೆಗಳು ಈ ಬಾರಿಯಾದರೂ ಈಡೇರುವುದೇ?

ನಾಗರಾಜ ಎಸ್.ಬಡದಾಳ್

 ದಾವಣಗೆರೆ (ಮಾ.6) ದುಡಿಯುವ ಕೈಗಳಿರುವ ದಾವಣಗೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಮೆಕ್ಕೆಜೋಳ ಮತ್ತು ಬತ್ತದ ಕಣಜ ಖ್ಯಾತಿಯ ಇಲ್ಲಿ ಕೃಷಿ ಸಂಸ್ಕರಣಾ ಘಟಕ, ಐಟಿ ಬಿಟಿ ಪಾರ್ಕ್‌ ಸ್ಥಾಪನೆ, ಕೃಷಿ, ತೋಟಗಾರಿಕೆ ವಿವಿ ಸ್ಥಾಪನೆ, ಭೈರನಪಾದ ಸೇರಿದಂತೆ ವಿವಿಧ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ, ಭದ್ರಾ ನಾಲೆಗಳ ಆಧುನೀಕರಣ, ಇಲ್ಲಿಗೊಂದು ವಿಮಾನ ನಿಲ್ದಾಣ..

ಹೀಗೆ ನೂರಾರು ಕನಸು, ನಿರೀಕ್ಷೆಯ ಕಣ್ಣುಗಳಿಂದ ಇಡೀ ದಾವಣಗೆರೆ ಜಿಲ್ಲೆಯು ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ದಾಖಲೆಯ 2026-27ನೇ ಸಾಲಿನ ಬಜೆಟ್ ನತ್ತ ಮುಖ ಮಾಡಿದ್ದರೆ, ಜಿಲ್ಲೆಯ ಜನರ ನಿರೀಕ್ಷೆಯ ಜೋಳಿಗೆಗೆ ಭರಪೂರ ಯೋಜನೆಗಳನ್ನಾಗಲೀ, ವಿಶೇಷ ಕೊಡುಗೆಯನ್ನಾಗಲೀ ಸಿದ್ದರಾಮಯ್ಯ ತಮಗೆ ರಾಜಕೀಯ ಪುನರ್ಜನ್ಮ ಕೊಟ್ಟ, ಸಿದ್ಧರಾಮೋತ್ಸವದ ಮೂಲಕ ಶಕ್ತಿ ತುಂಬಿದ್ದಂತಹ ದಾವಣಗೆರೆಗೆ ಈ ಸಲವಾದರೂ ಸಿದ್ದರಾಮಯ್ಯ ಕೈಬಿಚ್ಚಿ ಯೋಜನೆ, ಕಾರ್ಯಕ್ರಮ ನೀಡಲೆಂಬ ನಿರೀಕ್ಷೆ ಸಹಜವಾಗಿವೆ.

ಆದರೆ, ಬೆಂಗಳೂರು, ಮೈಸೂರು, ತುಮಕೂರು ಹೊರತುಪಡಿಸಿ, ಉಳಿದ 2ನೇ ಸಾಲಿನ ಊರುಗಳನ್ನು ಬೆಳೆಸುವ ಬದ್ಧತೆ ಆಳುವವರಿಗೆ ಇಲ್ಲವಾಗಿದೆ. ಮೆಕ್ಕೆಜೋಳ ಅತೀ ಹೆಚ್ಚು ಬೆಳೆವ ಜಿಲ್ಲೆ ಇದು. ನಂತರ ಬತ್ತ ಬೆಳೆಯಲಾಗುತ್ತದೆ. ಅಡಿಕೆಯೂ ಉತ್ತಮ ಬೆಳೆಯಾಗಿದೆ. ಕೃಷಿ ಪ್ರದಾನವಾದ ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ಹಿಂದಿನಿಂದಲೂ ಒತ್ತಾಯವಿದೆ. ಆದರೆ, ಈವರೆಗೆ ಅಂತಹ ಬಿಚ್ಚುಗೈನಿಂದ ಸಿಎಂ ಸಿದ್ದರಾಮಯ್ಯ ಕೃಪಾದೃಷ್ಟಿ ಹರಿಸಿಲ್ಲ.

ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿ ಹೊಂದಿದ್ದ ದಾವಣಗೆರೆಯಲ್ಲಿ 90ರ ದಶಕದ ಹಿಂದೆ, ಮುಂದೆ ಒಂದೊಂದಾಗಿ ಮಿಲ್‌ಗಳು ಬಂದಾದವರು. ಇಲ್ಲಿ ಹೇಳಿಕೊಳ್ಳುವಂತಹ ಒಂದು ದೊಡ್ಡ ಕೈಗಾರಿಕೆಯೇ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲವೆಂಬುದು ಅಷ್ಟೇ ಸ್ಪಷ್ಟ. ಹರಿಹರದ ಕಿರ್ಲೋಸ್ಕರ್ ಸಹ ಬಂದ್ ಆಗಿದ್ದು, ಈಚೆಗೆ ಬೆಳ್ಳೂಡಿಯ ಕಾರ್ಗಿಲ್‌ ಕಾರ್ಖಾನೆಯೂ ಸಹ ಉತ್ಪಾದನೆ ಮಾಡದಿರುವುದು ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಮಾಡಿದೆ.

ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಗೆ ಮೆಗಾ ಡೈರಿ ಸ್ಥಾಪಿಸಬೇಕೆಂಬುದೂ ಕನ್ನಡಿಯೊಳಗಿನ ಗಂಟಾಗಿದೆ. ಕೃಷಿ ಉತ್ಪನ್ನ ಶೇಖರಿಸಿಡಲು ಶೀಥಲೀಕರಣ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯವೂ ಇದೆ. ಆದರೂ, ಆಳುವ ಸರ್ಕಾರದ ಚಿತ್ತ ಇತ್ತ ಹರಿದಿಲ್ಲ.

ಹರಿಹರದ ಭೈರನಪಾದವೂ ನನೆಗುದಿಗೆ ಬಿದ್ದಿದೆ. ಕೈಗಾರಿಕಾ ಕಾರಿಡಾರ್ ಇಲ್ಲಿಲ್ಲ. ಜವಳಿ ಪಾರ್ಕ್ ಮಾತ್ರ ಹೆಸರಿಗಷ್ಟೇ ಇದ್ದು, ಅಲ್ಲಿ ಜವಳಿ ಕ್ಷೇತ್ರಕ್ಕೆ 2-3 ಘಟಕ ಬಿಟ್ಟರೆ ಉಳಿದಿದ್ದೆಲ್ಲಾ ಗ್ಯಾರೇಜ್, ವರ್ಕ್ ಶಾಪ್, ಬೇರೆ ಬೇರೆ ಕೈಗಾರಿಕೆಗೆ ಸೀಮಿತವಾಗಿವೆ. 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಹಿಂದೆ ಸಿದ್ದರಾಮಯ್ಯ ಮೊದಲ ಅವದಿಗೆ ಸಿಎಂ ಆಗಿದ್ದಾಗ ಅನುದಾನ ಮೀಸಲಿಟ್ಟಿದ್ದರೂ, ಅದು ನನೆಗುದಿಗೆ ಬಿದ್ದಿದೆ.

ಏಷ್ಯಾದಲ್ಲೇ ಅತೀ ದೊಡ್ಡ 2ನೇ ಕೆರೆ ಸೂಳೆಕೆರೆ, ವಿಶಾಲ ತೂಗು ಕಾಲುವೆ, ಸಾಗರಪೇಟೆ, ಆತ್ಯಾಕರ್ಷಕ ಪುಷ್ಕರಣಿ, ಅಮ್ಮನ ಗುಡ್ಡ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೇ ಬೋಸ್ಲೆ ಸಮಾಧಿ ಸ್ಥಳ, ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಉಬ್ರಾಣಿ ಹೋಬಳಿ, ಅರಣ್ಯ ಪ್ರದೇಶ, ಭಾರತದಲ್ಲೇ ಅತೀ ದೊಡ್ಡ ಆಕರ್ಷಕ ಗಾಜಿನ ಮನೆ, ಆನಗೋಡು ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ, ಕೊಂಡಜ್ಜಿ ಅರಣ್ಯ ಪ್ರದೇಶ, ಜಗಳೂರು ತಾ. ರಂಗಯ್ಯನದುರ್ಗ ಅರಣ್ಯ ಪ್ರದೇಶ, ಪ್ರಕೃತಿ ಮಡಿಲಲ್ಲಿರುವ ಕಣ್ವಕುಪ್ಪೆ ಅರಣ್ಯ ಪ್ರದೇಶ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳಿದ್ದರೂ, ಹೊನ್ನಾಳಿ, ನ್ಯಾಮತಿ ತಾಲೂಕಿನ ಪ್ರವಾಸಿ, ಪುಣ್ಯತಾಣಗಳು ಕಡೆಗಣಿಸಲ್ಪಟ್ಟಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC: ಪಾಸ್‌ ವಿತೌಟ್‌ ಹಿಂದಿ ನಿಯಮ ಜಾರಿಗೆ ‘ಹಿಂದಿ ಹೇರಿಕೆ ವಿರೋಧಿ’ ಸಂಘಟನೆ ಒತ್ತಾಯ
ಹೆಣ್ಮಕ್ಕಳ ಉಚಿತ ಬಸ್ ಸೇವೆ ಶಕ್ತಿ ಯೋಜನೆಯ 5313 ಕೋಟಿ ಬಿಡುಗಡೆಗೆ KSRTC ಎಂಡಿಯಿಂದ ಸರ್ಕಾರಕ್ಕೆ ಪತ್ರ