ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪರಿಷತ್ ಸಭಾಂಗಣದಲ್ಲಿ ಮತ್ತು ಹೊರಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಯತ್ನ ನಡೆದಿದ್ದು, ಮಾರ್ಷಲ್‌ಗಳ ರಕ್ಷಣೆಯಲ್ಲಿ ಸಿ.ಟಿ. ರವಿ ಇದ್ದಾರೆ. ಈ ಘಟನೆ ಬೆಳಗಾವಿ ಅಧಿವೇಶನದಲ್ಲಿ ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ.
ಬೆಳಗಾವಿ (ಡಿ.19): ಬೆಳಗಾವಿಯ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ* ಎಂಬ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಸಿ.ಟಿ. ರವಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಪರಿಷತ್ ಸಭಾಂಗಣದ ಹೊರಗೆ ಹೋದರೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡುತ್ತಾರೆ. ಇನ್ನು ಪರಿಷತ್ತಿನ ಒಳಗೆ ಬಂದರೆ ಕಾಂಗ್ರೆಸ್ ಸದಸ್ಯರು ನಿನಗೆ ತಾಯಿ, ತಂಗಿ, ಹೆಂಡತಿ ಇಲ್ವೇನೋ ಎಂದು ಬಾಯಿಗೆ ಬಂದಂತೆ ಬೈಯ್ದು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಪರಿಷತ್ ಸಭಾಂಗಣದ ಒಳಗಿದ್ದರೂ ಸಿ.ಟಿ. ರವಿ ಮಾರ್ಷಲ್‌ಗಳ ಕಾವಲಿನಲ್ಲಿ ನಿಂತುಕೊಂಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದ ಮುಕ್ತಾಯಕ್ಕೂ ಒಂದು ದಿನ ಇರುವ ಮೊದಲು ಭಾರೀ ಹೈಡ್ರಾಮಾ ಶುರುವಾಗಿದೆ. ವಿಧಾನ ಪರಿಷತ್ ಆವರಣದಲ್ಲಿ ಬೆಳಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಅಮಿತ್ ಶಾ ಅವರು ಅಂಬೇಡ್ಕರ್ ವಿಚಾರವಾಗಿ ಮಾತನಾಡಿದ ಬಗ್ಗೆ ಪರ-ವಿರೋಧವಾಗಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ. ರವಿ ಅವರಿಗೆ ನೀನು ಕೊಲೆಗಡುಕ ಎಂದು ಹೇಳಿದ್ದಾರೆ. ಆದರೆ, ಈ ವೇಳೆ ಅದನ್ನು ಸಹಿಸಿಕೊಳ್ಳದ ಸಿ.ಟಿ. ರವಿ ನೀನೊಬ್ಬ ಪ್ರಾಸ್ಟಿಟ್ಯೂಟ್ (ವೇ*) ಎಂಬ ಪದವನ್ನು ಬಳಕೆ ಮಾಡಿದ್ದಾರಂತೆ. ಇದನ್ನು ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಕೇಳಿಸಿಕೊಂಡಿಲ್ಲ. ಆದರೆ, ಇತರೆ ಕಾಂಗ್ರೆಸ್ ಸದಸ್ಯರು ಕೇಳಿಸಿಕೊಂಡು ಅವರಿಗೆ ಹೇಳಿದ್ದಾರೆ.
undefined
ಇದಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪರಿಷತ್ ಸಭಾಂಗಣದಿಂದ ಅಳುತ್ತಲೇ ಹೊರಗೆ ಹೋಗಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಕೊಠಡಿಗೆ ತೆರಳಿದ್ದ ವೇಳೆ ಲಕ್ಷ್ಮೀ ಹೆಬ್ಬಾಳಕ್ರ್ ಅವರು ದೂರು ನೀಡಿದ್ದಾರೆ. ಆದರೆ, ಇತ್ತ ಸಿ.ಟಿ. ರವಿ ಅವರು ನಾನು ಅಂತಹ ಪದವನ್ನೇ ಬಳಕೆ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಸಭಾಂಗಣದ ವಿಡಿಯೋ ಹಾಗೂ ಆಡಿಯೋ ಪರಿಶೀಲನೆ ಮಾಡುವಂತೆ ಸಭಾಪತಿ ಸೂಚನೆ ನೀಡಿದ್ದಾರೆ. ಇದರ ಇದಾದ ನಂತರ ಮಧ್ಯಾಹ್ನದ ಊಟಕ್ಕೆ ಹೋಗಿದ್ದಾರೆ.
ಮಧ್ಯಾಹ್ನ ಊಟ ಮಾಡಿಕೊಂಡು ವಾಪಸ್ ಬರುವಾಗ ಸಿ.ಟಿ. ರವಿ ಮೇಲೆ ಹಲ್ಲೆ ಯತ್ನ ನಡೆದಿದೆ. ಆದರೆ, ಇಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿ ಕಳಿಸಿದ್ದಾರೆ. ಇದಾದ ನಂತರ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಹಾಗೂ ಲಕ್ಷ್ಮೀ ಹಾಗೂ ಚನ್ನರಾಜ್ ಅವರ ಪಿಎ ಸದ್ದಾಂ ಸೇರಿದಂತೆ ಐದಾರು ಜನರು ಸುವರ್ಣ ಸೌಧದ ಒಳಗೆ ಸಿ.ಟಿ. ರವಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಈ ವೇಳೆ ಮಾರ್ಷಲ್‌ಗಳು ಸಿ.ಟಿ. ರವಿ ಅವರನ್ನು ರಕ್ಷಣೆ ಮಾಡಿದರಾದರೂ ಅವರನ್ನು ಗೇಟಿನೊಳಗೆ ಕಳಿಸಿ ಮುಚ್ಚುವಾಗ ಕಾಲಿನಿಂದ ಒಬ್ಬರು ಒದ್ದು ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿಗೆ ಕಾಲಿಂದ ಒದ್ದು, ಹಲ್ಲೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು!
ಇದಾದ ನಂತರ ಸಿ.ಟಿ. ರವಿ ಅವರು ಸಭಾಪತಿ ಕೊಠಡಿಗೆ ತೆರಳಿ ದೂರು ನೀಡಿ ತಮಗೆ ರಕ್ಷಣೆ ಕೊಡಬೇಕು ಎಂದು ಕೇಳಿದ್ದಾರೆ. ಇದಾದ ನಂತರ ಅಧಿವೇಶನ ನಡೆಯುವ ಪರಿಷತ್ ಸಭಾಂಗಣದೊಳಗೆ ಹೋದರೆ ಅಲ್ಲಿ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ 10ಕ್ಕೂ ಅಧಿಕ ಮಾರ್ಷಲ್‌ಗಳು ಬಂದು ಸಿ.ಟಿ. ರವಿ ಅವರನ್ನು ಸುತ್ತುವರೆದು ರಕ್ಷಣೆ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಲೇ ಸಿಟಿ ರವಿ ನಿನಗೆ ಅಕ್ಕ-ತಂಗಿಯರು ಇಲ್ವೇನೋ.. ನಿನಗೆ ತಾಯಿ, ಮಗಳು, ಹೆಂಡತಿ ಇಲ್ವೇನೋ... ಎಂದು ಬಾಯಿಗೆ ಬಂದತೆ ಬೈದಿದ್ದಾರೆ. ಇದರ ಬೆನ್ನಲ್ಲಿಯೇ ಪರಿಷತ್ ಸಭಾಂಗಣದ ಆಡಿಯೋವನ್ನು ಮ್ಯೂಟ್ ಮಾಡಲಾಗಿದೆ.
ಪರಿಷತ್ ಸಭಾಂಗಣದಿಂದಲೂ ಹೊರನಡೆದ ಸಿ.ಟಿ.ರವಿ:
ಸಿ.ಟಿ. ರವಿ ಅವರು ಸಭಾಂಗಣದಲ್ಲಿ ಬಂದರೂ ಕೈ ನಾಯಕರಿಂದ ತರಾಟೆಗೆ ಒಳಗಾದ ಬೆನ್ನಲ್ಲಿಯೇ ಅಲ್ಲಿಂದ ಮಾರ್ಷಲ್‌ಗಳು ಭದ್ರತೆಯಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಸಭಾಪತಿ ಅವರ ಕೊಠಡಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಕ್ಷೇತ್ರದ ಜಿಲ್ಲೆಯಲ್ಲಿಯೇ ಅಧಿವೇಶನ ನಡೆಯುತ್ತಿದ್ದು, ಸಾವಿರಾರು ಬೆಂಬಲಿಗರು ಸುವರ್ಣ ಸೌಧದಲ್ಲಿ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲು ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸಿ.ಟಿ. ರವಿ ಅವರು ಸುವರ್ಣ ಸೌಧ ಬಿಟ್ಟು ಹೊರಗೆ ಬಂದರೂ ಅವರ ಮೇಲೆ ಮುತ್ತಿಗೆ ಹಾಕುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವೇ* ಎಂದರಾ ಸಿ.ಟಿ.ರವಿ; ಕಣ್ಣೀರಿಡುತ್ತಾ ಹೊರನಡೆದ ಸಚಿವೆ!
100 ಜನ ವಶಕ್ಕೆ:
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮೇಲೆ ಹಲ್ಲೆಗೆ ಯತ್ನಿಸಿ ಸುವರ್ಣ ಸೌಧದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಸುಮಾರು 100ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಸುವರ್ಣ ಸೌಧದ ಹೊರಗೆ ಸಿ.ಟಿ. ರವಿ ಅವರ ಆಕ್ಷೇಪಾರ್ಹ ಪದ ಬಳಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.