ಮಂಗಳೂರು: ಕರ್ಣಾಟಕ ಬ್ಯಾಂಕ್‌ ತ್ರೈಮಾಸಿಕ ನಿವ್ವಳ ಲಾಭ ಶೇ.24.87ರಷ್ಟು ಹೆಚ್ಚಳ!

Published : Jan 24, 2024, 04:44 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್‌ ತ್ರೈಮಾಸಿಕ ನಿವ್ವಳ ಲಾಭ ಶೇ.24.87ರಷ್ಟು ಹೆಚ್ಚಳ!

ಸಾರಾಂಶ

ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕಗಳಲ್ಲಿ ಶೇ.೨೫ರ ವೃದ್ಧಿ ದರದೊಂದಿಗೆ ೧೦೩೨.೦೪ ಕೋಟಿ ರು.ಗಳ ನಿವ್ವಳ ಲಾಭ ಘೋಷಿಸಿದೆ.

ಮಂಗಳೂರು (ಜ.24)ಕ :  ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕಗಳಲ್ಲಿ ಶೇ.೨೫ರ ವೃದ್ಧಿ ದರದೊಂದಿಗೆ ೧೦೩೨.೦೪ ಕೋಟಿ ರು.ಗಳ ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕ ನಿವ್ವಳ ಲಾಭ ೮೨೬.೪೯ ಕೋಟಿ ರು.ಗಳಾಗಿತ್ತು. ಇದರಿಂದಾಗಿ ಪ್ರಸಕ್ತ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ವಾರ್ಷಿಕ ಶೇ. ೧೦.೧೧ ರ ವೃದ್ಧಿ ದರದೊಂದಿಗೆ 331.08 ಕೋಟಿ ರು.ಗಳ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ೩೦೦.೬೮ ಕೋಟಿ ರು.ಗಳಾಗಿತ್ತು.

ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ ೨೦೨೩-೨೪ ರ ತೃತೀಯ ತ್ರೈಮಾಸಿಕದ (೩೧.೧೨.೨೦೨೩) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

 

ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ ₹370 ಕೋಟಿ ಲಾಭ

ಬ್ಯಾಂಕಿನ ಒಟ್ಟು ವ್ಯವಹಾರ ವಾರ್ಷಿಕ ಶೇ. ೯.೨೨ ರ ದರದಲ್ಲಿ ವೃದ್ಧಿ ಕಂಡಿದ್ದು, ೧,೬೧,೯೩೬.೩೬ ಕೋಟಿ ರು.ಗೆ ಏರಿದೆ. ಬ್ಯಾಂಕಿನ ಮುಂಗಡಗಳು ಶೇ. ೯.೫೩ರ ದರದಲ್ಲಿ ವೃದ್ಧಿ ಕಂಡು ೬೯,೭೪೦.೯೭ ಕೋಟಿ ರು.ಗಳಷ್ಟಿವೆ ಹಾಗೂ ಠೇವಣಿಗಳು ಶೇ. ೮.೯೮ ರ ದರದಲ್ಲಿ ವೃದ್ಧಿ ಕಂಡು ೯೨,೧೯೫.೩೯ ಕೋಟಿ ರು.ಗಳಿಗೆ ತಲುಪಿವೆ.

ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು ೧೦ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ. ೩.೬೪ ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ ೨೦೨೩ ರಲ್ಲಿ ಶೇ. ೩.೭೪ ರಷ್ಟಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ ೧೫ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ. ೧.೫೫ ಕ್ಕೆ ಇಳಿಕೆ ಕಂಡಿವೆ. ಇದು ಮಾರ್ಚ್ ೨೦೨೩ ರಲ್ಲಿ ಶೇ. ೧.೭೦ ರಷ್ಟಿದ್ದವು. ಮಾರ್ಚ್ ೨೦೨೩ ರಲ್ಲಿ ಶೇ. ೮೦.೮೬ ರಷ್ಟಿದ್ದ ಪ್ರೊವಿಶನ್ ಕವರೇಜ್ ಅನುಪಾತ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ. ೮೦.೭೫ಕ್ಕೆ ತಲುಪಿದ್ದು, ಕಳೆದ ವಿತ್ತೀಯ ವರ್ಷದ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ (ಡಿಸೆಂಬರ್ ೨೦೨೨) ಇದು ಶೇ.೮೦.೨೧ ಆಗಿತ್ತು.

ಈ ಫಲಿತಾಂಶಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್‌, ಕರ್ಣಾಟಕ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕಾರ್ಯಕ್ಷಮತೆಗೆ ಬ್ಯಾಂಕ್ ಕೈಗೊಂಡ ಸುಧಾರಿತ ಕಾರ್ಯಾಚರಣೆಗಳು ಹಾಗೂ ಪರಿವರ್ತನೆಯ ಬದಲಾವಣೆಗಳು ಕಾರಣವೆಂದು ಹೇಳಬಹುದು. ನಾವು ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಸ್ತುತವಾಗಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದ್ದೇವೆ ಮತ್ತು ಹಲವಾರು ಹೊಸ ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ತಂತ್ರಜ್ಞಾನ ವೇದಿಕೆಗಳು ಮತ್ತು ಆಂತರಿಕ ಪ್ರಕ್ರಿಯೆಗಳನ್ನು ಇನ್ನಷ್ಟು ಸುಧಾರಿಸುವುದರ ಮೂಲಕ ಕಳೆದ ತ್ರೈಮಾಸಿಕದಲ್ಲಿ, ವಿವಿಧ ಫಿನ್‌ಟೆಕ್ ಸಹಯೋಗಗಳು ಮತ್ತು ಸಹ-ಸಾಲ ನೀಡುವುದರೊಂದಿಗೆ ವ್ಯವಹಾರವನ್ನು ವಿಸ್ತರಿಸಿದ್ದೇವೆ. ನಮ್ಮ ಶತಮಾನೋತ್ಸವದ ವರ್ಷದಲ್ಲಿ ನಾವು ಸಮರ್ಪಕವಾದ ಅಭಿವೃದ್ಧಿ ಪಥದಲ್ಲಿದ್ದೇವೆ. ಒಂದು ಶತಮಾನದ ಅಚಲ ಬದ್ಧತೆಯನ್ನು ಹಾಗೂ ವಿಶ್ವಾಸಾರ್ಹತೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತಿದ್ದೇವೆ ಎಂದರು.

ಉನ್ನತ ಹುದ್ದೆ ತೊರೆದು ಚಹಾ ಮಾರಲು ಪ್ರಾರಂಭಿಸಿದ ಐಐಟಿ ಪದವೀಧರ, ಈಗ ಈತನ ಸಂಸ್ಥೆ ಮೌಲ್ಯ 2,050 ಕೋಟಿ!

ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ತೃತೀಯ ತ್ರೈಮಾಸಿಕದಲ್ಲಿ ಶ್ಲಾಘನೀಯ ಆರ್ಥಿಕ ಫಲಿತಾಂಶಗಳನ್ನು ಪ್ರದರ್ಶಿಸಿದೆ, ಮಾತ್ರವಲ್ಲದೆ ದಕ್ಷತೆ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ. ಸವಾಲಿನ ಆರ್ಥಿಕ ಮಾರುಕಟ್ಟೆಯಲ್ಲೂ ನಮ್ಮ ಬ್ಯಾಂಕ್ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯನ್ನು ಪ್ರದರ್ಶಿಸಿದೆ. ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿರುವುದರೊಂದಿಗೆ ಫಿನ್‌ಟೆಕ್ ಪಾಲುದಾರರೊಂದಿಗೆ ಬ್ಯಾಂಕಿಂಗ್ ರಂಗದಲ್ಲಿ ಮುನ್ನುಗ್ಗುತ್ತಿದ್ದೇವೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕ ಪರಿಸರ ವ್ಯವಸ್ಥೆಯಲ್ಲಿ ಸತತ ಅಭಿವೃದ್ಧಿ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ನಾವೀನ್ಯತೆಯ ಆರ್ಥಿಕ ಸಂಸ್ಕೃತಿಯನ್ನು ಕರ್ಣಾಟಕ ಬ್ಯಾಂಕ್ ಉತ್ತೇಜಿಸುತ್ತದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌