ಇಂದು ಬಂದ್‌ ಆಗುತ್ತಾ?: ಕೆಲ ಸಂಘಟನೆಗಳ ಬೆಂಬಲ, ಇನ್ನು ಕೆಲವರದು ಇಲ್ಲ!

By Kannadaprabha NewsFirst Published Feb 13, 2020, 7:17 AM IST
Highlights

ಇಂದು ಬಂದ್‌ ಆಗುತ್ತಾ?| ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಆಗ್ರಹಿಸಿ ಬಂದ್‌ ಕರೆ| ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಕರ್ನಾಟಕ ಸಂಘಟನೆಗಳ ಒಕ್ಕೂಟ ಆಗ್ರಹ| ಕೆಲ ಸಂಘಟನೆಗಳ ಬೆಂಬಲ, ಇನ್ನು ಕೆಲವರದು ಇಲ್ಲ| ಹಾಗಾಗಿ, ಪೂರ್ತಿ ಬಂದ್‌ ಡೌಟು

ಬೆಂಗಳೂರು[ಫೆ.13]: ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂಬ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ (ಫೆ.13) ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ. ರಾಜ್ಯ ಬಂದ್‌ಗೆ ಕನ್ನಡ ಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಹುತೇಕ ಪ್ರಮುಖ ಸಂಘಟನೆಗಳು ಬಹಿರಂಗವಾಗಿ ಬಂದ್‌ಗೆ ಬೆಂಬಲ ನಿರಾಕರಿಸಿವೆ.

ಹೀಗಾಗಿ ಕರ್ನಾಟಕ ಬಂದ್‌ ರಾಜ್ಯದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಂತಹ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಜತೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಬಹುತೇಕ ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಆಟೋ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕರ್ನಾಟಕ ಬಂದ್: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ಸರೋಜಿನಿ ಮಹಿಷಿ ವರದಿ ಆಧರಿಸಿ ರಾಜ್ಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಉತ್ತರ ಭಾರತೀಯರು ಹಾಗೂ ಅನ್ಯ ರಾಜ್ಯದ ವಲಸಿಗರ ಪಾಲಾಗುತ್ತಿರುವ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಟ್ಟು ಸ್ಥಳೀಯರ ನಿರುದ್ಯೋಗ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಕಳೆದ 99 ದಿನಗಳಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದೆ. ಹೋರಾಟದ ನೂರನೇ ದಿನದ ಅಂಗವಾಗಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕನ್ನಡ ಚಳವಳಿ ನಾಗೇಶ್‌, ಸರ್ಕಾರವು ಕೂಡಲೇ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಗಳ ಭಿನ್ನಾಭಿಪ್ರಾಯ:

ಈ ನಡುವೆ ರಾಜ್ಯದ ಪ್ರಮುಖ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲು ಬಹಿರಂಗವಾಗಿಯೇ ನಿರಾಕರಿಸಿವೆ. ಕನ್ನಡಪರ ಹೋರಾಟಗಾರರಾದ ವಾಟಾಳ್‌ ನಾಗರಾಜ್‌, ಟಿ.ಎ.ನಾರಾಯಣಗೌಡ, ಪ್ರವೀಣ್‌ ಶೆಟ್ಟಿ, ಶಿವರಾಮೇಗೌಡ, ಭೀಮಾಶಂಕರ ಪಾಟೀಲ್‌, ಕೆ.ಆರ್‌. ಕುಮಾರ್‌ ಸೇರಿದಂತೆ ಪ್ರಮುಖರು ಬೆಂಬಲ ನಿರಾಕರಿಸಿದ್ದಾರೆ. ಉಳಿದಂತೆ ಸರ್ಕಾರಿ ನೌಕರರ ಸಂಘ, ಬ್ಯಾಂಕ್‌ ನೌಕರರ ಸಂಘ, ಬಿಎಂಟಿಸಿ, ಮೆಟ್ರೋ ನೌಕರರು ಸೇರಿದಂತೆ ಹಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ.

ಉಳಿದಂತೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಂದ್‌ ಬೆಂಬಲಿಸಿವೆ. ಆದರೆ, ಈ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಬಂದ್‌ನಲ್ಲಿ ಎಷ್ಟರ ಮಟ್ಟಿಗೆ ಸಕ್ರಿಯರಾಗಿ ಭಾಗವಹಿಸುತ್ತಾರೆ ಎಂಬುದರ ಮೇಲೆ ಬಂದ್‌ನ ಫಲಿತಾಂಶ ನಿಂತಿದೆ.

ಕರ್ನಾಟಕ ಬಂದ್‌, ಏನಿರುತ್ತೆ? ಏನಿರಲ್ಲ?: ಶಾಲಾ- ಕಾಲೇಜು ಕತೆ ಏನು?

ಜನಜೀವನಕ್ಕೆ ಹೆಚ್ಚು ಸಮಸ್ಯೆಯಿಲ್ಲ:

ಬಸ್ಸು, ರೈಲು, ವಿಮಾನ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು, ಚಿತ್ರಮಂದಿರ, ಮಾರುಕಟ್ಟೆ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಪರಿಣಾಮ ಜನರ ದೈನಂದಿನ ಬದುಕಿಗೆ ಬಂದ್‌ ಬಿಸಿ ತಟ್ಟುವ ಸಾಧ್ಯತೆ ಕಡಿಮೆಯಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಬಂದ್‌ನಲ್ಲಿ ಪಾಲ್ಗೊಳ್ಳದಂತೆ ವ್ಯವಸ್ಥಾಪಕ ನಿರ್ದೇಶಕರು ಖಡಕ್‌ ಸೂಚನೆ ನೀಡಿದ್ದಾರೆ. ಅಲ್ಲದೆ, ತುರ್ತು ರಜೆ ಹೊರತುಪಡಿಸಿ ಉಳಿದ ಎಲ್ಲ ಮಾದರಿಯ ರಜೆ ರದ್ದುಪಡಿಸಿದ್ದಾರೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಗೈರಾದರೆ ವೇತನ ಕಡಿತಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿಪೋ, ಬಸ್‌ ನಿಲ್ದಾಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಸ್‌ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಬಂದ್‌ ಬೆಂಬಲಿಸಿದ ಸಂಘಟನೆಗಳು

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಇಂಡಿಯನ್‌ ವೆಹಿಕಲ್ಸ್‌ ಡ್ರೈವರ್‌ ಟ್ರೇಡ್‌ ಯೂನಿಯನ್‌, ಕರ್ನಾಟಕ ಚಾಲಕರ ಒಕ್ಕೂಟ, ಓ.ಟಿ.ಯು, ಚಾಲಕರ ಮತ್ತು ಮಾಲಿಕರ ಸಂಘ, ನಮ್ಮ ಚಾಲಕರ ಟ್ರೇಡ್‌ ಯೂನಿಯನ್‌, ಪೀಸ್‌ ಆಟೋ ಟ್ಯಾಕ್ಸಿ ಡ್ರೈವರ್‌ ಅಸೋಸಿಯೇಷನ್‌, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಜೈ ಭಾರತ್‌ ವಾಹನ ಚಾಲಕರ ಸಂಘ, ಅಖಿಲ ಕರ್ನಾಟಕ ಸಾರಥಿ ಸಂಘಟನೆಗಳ ಒಕ್ಕೂಟ

ಈ ಸಂಘಟನೆಗಳ ಬೆಂಬಲ ಇಲ್ಲ

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಕುಮಾರ್‌ ಶೆಟ್ಟಿಬಣ), ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಒಕ್ಕೂಟ, ಕನ್ನಡ ಸೇನೆ, ಜಯ ಕರ್ನಾಟಕ (ಮುತ್ತಪ್ಪ ರೈ), ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ), ಕಸ್ತೂರಿ ಕನ್ನಡ ಜನಪರ ವೇದಿಕೆ, ಕರ್ನಾಟಕ ರಣಧೀರ ಪಡೆ, ಕರ್ನಾಟಕ ನವನಿರ್ಮಾಣ ಸೇನೆ (ಭೀಮಾಶಂಕರ ಪಾಟೀಲ…)

ಬಂದ್‌ಗೆ ನೈತಿಕ ಬೆಂಬಲ

ರಾಜ್ಯ ಸರ್ಕಾರಿ ನೌಕರರ ಸಂಘ, ಬ್ಯಾಂಕ್‌ ನೌಕರ ಸಂಘ, ಹೋಟೆಸ್ ಮಾಲಿಕರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು, ಮೆಟ್ರೋ ನೌಕರರು, ಖಾಸಗಿ ಆಸ್ಪತ್ರೆ ವೈದ್ಯರು, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸರಕು ಸಾಗಣೆ ವಾಹನ ಮಾಲಿಕರು ಮತ್ತು ಏಜೆಂಟ್‌ಗಳ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

* ಖಾಸಗಿ ಶಾಲೆಗಳ ಒಕ್ಕೂಟದಿಂದ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲವಿದೆ. ಪದೇ ಪದೇ ಬಂದ್‌ಗಳಿಂದ ಶೈಕ್ಷಣಿಕವಾಗಿ ಮಕ್ಕಳಿಗೆ ತೊಂದರೆಯಾಗುತ್ತದೆ. ಪರೀಕ್ಷೆಗಳು ಹತ್ತಿರ ಇರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ರಜೆ ಸಂಬಂಧ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಬಂದ್‌ ಪರಿಸ್ಥಿತಿ ನೋಡಿಕೊಂಡು ಆಯಾ ಶಾಲಾ ಆಡಳಿತ ಮಂಡಳಿ ರಜೆ ಕೊಡುವ ಬಗ್ಗೆ ನಿರ್ಧರಿಸಲಿವೆ.

- ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟ

* ಬಂದ್‌ಗೆ ನೈತಿಕ ಬೆಂಬಲವಿದೆ. ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುವುದರಿಂದ ಶಾಲಾ ವಾಹನಗಳು ಸಂಚರಿಸಲಿವೆ. ಸೇವೆ ಸ್ಥಗಿತಗೊಳಿಸಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಶಾಲಾ ವಾಹನಗಳ ಸೇವೆಯಲ್ಲಿ ಯಾವುದೇ ವ್ಯತ್ಯವಾಗುವುದಿಲ್ಲ.

- ಷಣ್ಮುಗ, ಅಧ್ಯಕ್ಷ, ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘುವಾಹನ ಚಾಲಕರ ಸಂಘ

ಕರ್ನಾಟಕ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣ ಬೆಂಬಲ ಡೌಟ್!

* ಕರ್ನಾಟಕ ಬಂದ್‌ಗೆ ರಾಜ್ಯ ರೈತ ಸಂಘದ ಸಂಪೂರ್ಣ ಬೆಂಬಲವಿದೆ. ನಾಳೆ ನಡೆಯುವ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ನಾವು ಸಹ ಸರ್ಕಾರಕ್ಕೆ ಮನವಿ ಮಾಡುತ್ತೇವೆ.

- ಕೋಡಿಹಳ್ಳಿ ಚಂದ್ರಶೇಖರ್‌, ಅಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

* ನಮ್ಮ ಸಂಘವು ನಾಡು-ನುಡಿ, ನೆಲ-ಜಲ, ಗಡಿ ಹಾಗೂ ಸಂಸ್ಕೃತಿ ರಕ್ಷಣೆಯಲ್ಲಿ ಬದ್ಧತೆ ಹೊಂದಿದೆ. ಅದರಂತೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ರಾಜ್ಯ ಬಂದ್‌ಗೆ ಸಂಘ ನೈತಿಕ ಬೆಂಬಲ ನೀಡುತ್ತದೆ.

- ಸಿ.ಎಸ್‌.ಷಡಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

click me!