
ಬೆಂಗಳೂರು(ಏ.26): ರಾಜ್ಯಾದ್ಯಂತ ಭಾರಿ ಸದ್ದು ಮಾಡಿರುವ ಉಪನ್ಯಾಸಕರ ನೇಮಕಾತಿ ಅಕ್ರಮದ ಮೂಲ- ಕೇವಲ 8 ಹುದ್ದೆಗಳ ಭರ್ತಿಗಾಗಿ ನಡೆದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದ್ದು! ಹಾಗಿದ್ದ ಮೇಲೆ ನೂರಾರು ಹುದ್ದೆಗಳ ಭರ್ತಿಗೆ ನಡೆದ ವಾಣಿಜ್ಯ, ಅರ್ಥಶಾಸ್ತ್ರ ವಿಷಯಗಳ ಪರೀಕ್ಷೆ ಕಥೆಯೇನು? ಅಲ್ಲಿ ಅಕ್ರಮ ನಡೆದಿಲ್ಲವೇ? ನೂರಕ್ಕೆ ನೂರರಷ್ಟುಅಕ್ರಮ ನಡೆದಿದೆ ಎಂದು ಖಡಾ ಖಂಡಿತವಾಗಿ ವಾದಿಸುತ್ತಾರೆ ಉಪನ್ಯಾಸಕರ ಹುದ್ದೆಗೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ ನೂರಾರು ಅಭ್ಯರ್ಥಿಗಳು.
ಹೀಗಾಗಿಯೇ ಈ ಬಾರಿ ನಡೆದ ಎಲ್ಲ 25 ವಿಷಯಗಳ 1242 ಹುದ್ದೆಗಳಿಗೆ ನಡೆದ ಪರೀಕ್ಷೆಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾದವರನ್ನು ಬಯಲಿಗೆ ತಂದು ಪ್ರಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಧ್ಯಾಪಕರ ನೇಮಕಾತಿ ಹಗರಣ: ಅತಿಥಿ ಉಪನ್ಯಾನಕಿ ಸೌಮ್ಯಾ ವಶಕ್ಕೆ, ಈಕೆಯೇ ಕಿಂಗ್‌ಪಿನ್.?
ಈ ಉದ್ದೇಶ ಸಾಧನೆಗಾಗಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಅಭ್ಯರ್ಥಿಗಳು ಸಂಘಟಿತರಾಗತೊಡಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ತಾವು ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಅಭ್ಯರ್ಥಿಗಳ ನಿಯೋಗ ಒಗ್ಗೂಡಿಸುತ್ತಿರುವವರು ‘ಕನ್ನಡಪ್ರಭ’ಗೆ ಮಾಹಿತಿ ನೀಡಿದ್ದಾರೆ.
ನೇಮಕಾತಿ ಹುದ್ದೆಗಳ ಅಂಕಿ ಸಂಖ್ಯೆಯನ್ನು ಗಮನಿಸಿದಾಗ ಯಾರಿಗಾದರೂ ಈ ಅನುಮಾನ ಬಾರದೆ ಇರದು. ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ಕಳೆದ ಮಾಚ್‌ರ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು 26 ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ. ಈ ಪೈಕಿ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವ ಸಂಬಂಧ ದೂರು ದಾಖಲಾಗಿ ತನಿಖೆ ನಡೆಯುತ್ತಿರುವುದು ಕೇವಲ 8 ಹುದ್ದೆಗಳ ಭರ್ತಿಗೆ ನಡೆದ ಭೂಗೋಳಶಾಸ್ತ್ರ ವಿಷಯದ್ದು.
ಎಂಟೇ ಎಂಟು ಹುದ್ದೆಗಳ ಪ್ರಶ್ನೆ ಪತ್ರಿಕೆಯೇ ಸೋರಿಕೆಯಾಗುತ್ತದೆ ಎಂದರೆ ಅತಿ ಹೆಚ್ಚು 198 ಹುದ್ದೆಗಳಿರುವ ವಾಣಿಜ್ಯ ಶಾಸ್ತ್ರ, 122 ಹುದ್ದೆಗಳ ಭರ್ತಿಗೆ ನಡೆದಿರುವ ಅರ್ಧಶಾಸ್ತ್ರ, 107 ಹುದ್ದೆಗಳಿಗೆ ನಡೆದ ಕನ್ನಡ, 98 ಹುದ್ದೆಗಳಿರುವ ರಾಜ್ಯಶಾಸ್ತ್ರ, 85 ಹುದ್ದೆಗಳ ರಸಾಯನಶಾಸ್ತ್ರ, 75 ಹುದ್ದೆಗಳ ಭೌತಶಾಸ್ತ್ರ, 84 ಹುದ್ದೆಗಳ ಇಂಗ್ಲೀಷ್ ಹೀಗೆ ನೂರಾರು ಹುದ್ದೆಗಳಿಗೆ ನಡೆದ ವಿಷಯಗಳ ಪರೀಕ್ಷೆಗಳಲ್ಲಿ ಅಕ್ರಮ ನಡೆಯದೆ ಇರಲು ಸಾಧ್ಯವಿದೆಯೇ? ಎಂದು ಈ ಅಭ್ಯರ್ಥಿಗಳು ಪ್ರಶ್ನಿಸುತ್ತಾರೆ.
ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ವಿರೋಧ
ಹಾಗಾಗಿ ಸರ್ಕಾರ ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಪ್ರಾಧ್ಯಾಪಕರ ನೇಮಕಾತಿ ಅಕ್ರಮವನ್ನು ಒಂದು ವಿಷಯಕ್ಕೆ ಸೀಮಿತಗೊಳಿಸದೆ ಎಲ್ಲ ವಿಷಯಗಳ ಪರೀಕ್ಷೆ ಬಗ್ಗೆಯೂ ತನಿಖೆ ನಡೆಸಬೇಕು. ಆಗ ಭೂಗೋಳಶಾಸ್ತ್ರದಲ್ಲಿ ಬಿಚ್ಚಿಕೊಂಡಿರುವ ಅಕ್ರಮದ ಒಂದು ಎಳೆ ಉಳಿದ ವಿಷಯಗಳ ಪರೀಕ್ಷೆಗಳ ಅಕ್ರಮಗಳೂ ಅನಾವರಣವಾಗಬಹುದು ಎಂದು ಕೇಳುತ್ತಿದ್ದಾರೆ.
ಸರ್ಕಾರ ತನಿಖೆ ನಡೆಸಲಿ
ಪ್ರಾಧ್ಯಾಪಕರ ನೇಮಕಾತಿ ಹುದ್ದೆಗಳು ಡೀಲ್ ಆಗಿ ಹೋಗಿವೆ ಎಂಬ ಆರೋಪ, ಸುದ್ದಿಗಳು ಪರೀಕ್ಷೆಗೂ ಮೊದಲೇ ಎಲ್ಲೆಡೆ ಹಬ್ಬಿ ಹೋಗಿದ್ದವು. ಆಗಲೇ ಪರೀಕ್ಷೆ ಬರೆಯುವುದೇ ಬೇಡ ಎನ್ನುವಷ್ಟುಬೇಸರ ಆಗಿಹೋಗಿತ್ತು. ಆದರೂ, ಸರ್ಕಾರದ ಮೇಲೆ ನಂಬಿಕೆ ಇಟ್ಟು ನಾವು ಪರೀಕ್ಷೆ ಬರೆದೆವು. ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಆ ನಂಬಿಕೆ ಹುಸಿಯಾಗಿದೆ. ಸರ್ಕಾರಕ್ಕೆ ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಬಗ್ಗೆ ಬದ್ಧತೆ, ಕಾಳಜಿ ಇದ್ದರೆ ಎಲ್ಲ ವಿಷಯಗಳ ತನಿಖೆ ನಡೆಸಲಿ.
ಶ್ರೀನಿವಾಸ್ ಮೂರ್ತಿ, ವಾಣಿಜ್ಯ ವಿಭಾಗದ ಅಭ್ಯರ್ಥಿ
25 ವಿಷಯಗಳ ಬಗ್ಗೆ ತನಿಖೆ ನಡೆಸಿ
ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಕೇವಲ 8 ಹುದ್ದೆಗಳಿರುವ ಒಂದೇ ವಿಷಯದಲ್ಲಿ ಆಗಿರಲು ಸಾಧ್ಯವೇ ಇಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆ ವಿಷಯದ ಅಕ್ರಮ ಹೊರಬರುತ್ತಿದೆ ಅಷ್ಟೆ. ಇದೇ ಜಾಡು ಹಿಡಿದು ಇತರೆ ವಿಷಯಗಳ ಪರೀಕ್ಷೆಯಲ್ಲಿ ನಡೆದಿರಬಹುದಾದ ಅಕ್ರಮ ತನಿಖೆ ಮಾಡಿದರೆ ಉಳಿದವೂ ಹೊರಬರಬಹುದು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಲ್ಲ 25 ವಿಷಯಗಳ ಪರೀಕ್ಷೆಯನ್ನೂ ತನಿಖೆ ನಡೆಸಬೇಕು.
ಎಂ.ಸಿ.ಹರೀಶ್, ಕನ್ನಡ ವಿಷಯದ ಅಭ್ಯರ್ಥಿ
ಸರ್ಕಾರ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸದೆ ಕಷ್ಟಪಟ್ಟು ಓದಿದ ಮಕ್ಕಳ ಪ್ರಾಧ್ಯಾಪಕ ಹುದ್ದೆಯ ಕನಸಿಗೆ ಕೊಳ್ಳಿ ಇಟ್ಟಿದೆ ಎಂದು ನಾವು ಭಾವಿಸಿದ್ದೇವೆ. ಈಗ ಬಯಲಾಗಿರುÊ Üಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಮುಖ್ಯಮಂತ್ರಿ ಅವರಿಗಾದರೂ ಪ್ರಮಾಣಿಕವಾಗಿ ಓದಿದ ಮಕ್ಕಳ ಬಗ್ಗೆ ಬದ್ಧತೆ ಇದ್ದರೆ ಕೂಡಲೇ ಮಧ್ಯಪ್ರೇಶಿಸಿ ಪ್ರಾಧ್ಯಾಪಕ ನೇಮಕಾತಿಯ ಎಲ್ಲ ವಿಷಯಗಳ ಪರೀಕ್ಷೆ ಬಗ್ಗೆಯೂ ತನಿಖೆಗೆ ಆದೇಶಿಸಲಿ.
ಕವಿತ, ಇತಿಹಾಸ ವಿಷಯದ ಅಭ್ಯರ್ಥಿ
ಪ್ರಾಮಾಣಿಕರಿಗೆ ಅನ್ಯಾಯ
ಪ್ರಾಧ್ಯಾಪಕರಾಗಬೇಕೆಂಬ ಉದ್ದೇಶದಿಂದ ಹಲವು ವರ್ಷಗಳಿಂದ ಎಲ್ಲ ಕೆಲಸಗಳನ್ನೂ ಬಿಟ್ಟು ಹಗಲಿರುಳು ಕಷ್ಟಪಟ್ಟು ಓದಿ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಬರೆದಿದ್ದೆವು. ಆದರೆ, ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, 40 ಲಕ್ಷ ಡೀಲ್ ಆಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟವರಿಗೆ ಇದರಿಂದ ಕಷ್ಟಪಟ್ಟವರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಸರ್ಕಾರ ಎಲ್ಲ ವಿಷಯಗಳ ತನಿಖೆ ಆಗಬೇಕು.
ನಂದೀಶ್, ಸಮಾಜಶಾಸ್ತ್ರ ಅಭ್ಯರ್ಥಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ