
ವಿಧಾನಸಭೆ(ಮಾ.22): ಉಕ್ರೇನ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟಿದ್ದ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ರಾಜ್ಯಕ್ಕೆ ತರಲು ಶ್ರಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸೋಮವಾರ ಕಂದಾಯ ಸಚಿವ ಆರ್.ಅಶೋಕ್, ಮಾ.1ರಂದು ಮೃತಪಟ್ಟಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೆರೆ ಗ್ರಾಮದ ನವೀನ್ ಮೃತದೇಹವನ್ನು ಹುಟ್ಟೂರಿಗೆ ತರಲಾಗಿದೆ. ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಸುರಕ್ಷಿತವಾಗಿ ಮೃತದೇಹ ತರಲು ಕೇಂದ್ರ ಸರ್ಕಾರ ಸಾಕಷ್ಟುಪ್ರಯತ್ನಿಸಿದೆ. ಇದಕ್ಕಾಗಿ ಪ್ರಧಾನಿ ಅವರಿಗೆ ವಿಶೇಷ ಅಭಿನಂಧನೆ ಸಲ್ಲಿಸಲಾಗುವುದು ಎಂದು ಹೇಳಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನು ಉಕ್ರೇನ್‌ನಲ್ಲಿ ಸಿಲಿಕಿಕೊಂಡಿದ್ದ ಭಾರತೀಯರನ್ನು ತವರಿಗೆ ಸುರಕ್ಷಿತವಾಗಿ ಕರೆತರಲಾಗಿದೆ. ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತದ ಬಾವುಟ ಹಿಡಿದು ಸುರಕ್ಷಿತವಾಗಿ ತಮ್ಮ ದೇಶಕ್ಕೆ ತಲುಪಿದ್ದಾರೆ. ಇದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹೀಗಾಗಿ ಸದನವೂ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದು ಎಂದರು.
ನನ್ನ ಮಗನ ವೈದ್ಯನಾಗುವ ಕನಸು ನನಸಾಗಲಿಲ್ಲ, ದೇಹವಾದರೂ ವಿದ್ಯಾರ್ಥಿಗಳಿಗೆ ಸಹಾಯವಾಗಲಿ: ತಾಯಿ ಕಣ್ಣೀರು
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಷ್ಯಾ-ಉಕ್ರೇನ್ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳ್ಳೆಯ ಕೆಲಸ ಮಾಡಿವೆ. ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ತರುವುದು ಸುಲಭದ ಕೆಲಸವಾಗಿರಲಿಲ್ಲ. ವಿಶೇಷವಾಗಿ ನಮ್ಮ ರಾಜ್ಯದ ವೈದ್ಯ ವಿದ್ಯಾರ್ಥಿ ನವೀನ್ ದೇಹವನ್ನು ತರಲು ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರ ಮಾಡಿರುವ ಕೆಲಸ ಮರೆಯಲು ಸಾಧ್ಯವಿಲ್ಲ. ಇದು ಜನರ ಮನಸ್ಸಿನಲ್ಲಿ ಉಳಿಯಲಿದೆ ಎಂದು ಪ್ರಶಂಸಿಸಿದರು.
ಲಿಂಗಾಯತ ಪದ್ಧತಿಯಿಂದ ಅಂತಿಮ ವಿಧಿವಿಧಾನ
ಉಕ್ರೇನ್ ಯುದ್ಧದಲ್ಲಿ ಮೃತಪಟ್ಟನವೀನ್ ಗ್ಯಾನಗೌಡರ ಮೃತದೇಹಕ್ಕೆ ಸೋಮವಾರ ತಾಲೂಕಿನ ಚಳಗೇರಿ ಗ್ರಾಮದ ನಿವಾಸದಲ್ಲಿ ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತಿಮ ಪೂಜೆ ಸಲ್ಲಿಸಲಾಯಿತು. ಚನ್ನವೀರಶಾಸ್ತ್ರಿಗಳು ಪೂಜಾ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. ವಿವಿಧ ಸ್ವಾಮಿಗಳ ಭಾವಚಿತ್ರಗಳನ್ನು ಇರಿಸಿ ಕಳಶ ಹೂಡಿ ಶಿವ, ಗೌರಿ, ಗಣೇಶ ಪ್ರತಿಷ್ಠಾಪಿಸಿ ಹೂ, ಪತ್ರಿಗಳಿಂದ ಪೂಜೆ ಕೈಗೊಳ್ಳಲಾಯಿತು.
ಹರಿಹರದಲ್ಲಿ ಕೋಲ್ಡ್ ಬಾಕ್ಸ್‌ಗೆ ನವೀನ್ ಮೃತದೇಹ ಶಿಫ್ಟ್
ಎಕ್ಕೆ ಗಿಡ ಇಟ್ಟು ವಿವಾಹ
ನವೀನ್ ಅಂತಿಮ ವಿಧಿ-ವಿಧಾನ ವೇಳೆ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷನ ಕೈಗೆ ಕಂಕಣ ಕಟ್ಟಲಾಗಿತ್ತು. ನಂತರ ನವೀನ ತಂದೆ ತೆಂಗಿನಕಾಯಿ ಮೇಲೆ ಕರ್ಪೂರವಿರಿಸಿ ದೇಹದ ಸುತ್ತ ಪ್ರದಕ್ಷಿಣೆ ಹಾಕಿದರು. ತಾಯಿ ವಿಜಯಲಕ್ಷ್ಮಿ ಆರತಿ ಬೆಳಗಿದರು. ನವೀನ್ ಅವಿವಾಹಿತನಾಗಿದ್ದರಿಂದ ಆತನ ದೇಹದ ಮೇಲೆ ಎಕ್ಕೆ ಗಿಡ ಇರಿಸಿ ವಿವಾಹ ಶಾಸ್ತ್ರ ಮಾಡಲಾಯಿತು. ಇದಾದ ಮೇಲೆ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು.
ಉಕ್ರೇನ್‌ನಲ್ಲಿ ಯುದ್ಧಕ್ಕೆ ಬಲಿಯಾದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಶನಿವಾರ ಮಧ್ಯಾಹ್ನ ಪೋಲೆಂಡ್ ರಾಜಧಾನಿ ವಾರ್ಸಾದಿಂದ ಭಾರತಕ್ಕೆ ರವಾನಿಸಿತ್ತು.. ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಉಕ್ರೇನಲ್ಲಿ ಅಗತ್ಯ ದಾಖಲೆ ಪರಿಶೀಲನೆ ಬಳಿಕ ಭಾರತೀಯ ರಾಯಭಾರ ಸಿಬ್ಬಂದಿಗೆ ಶುಕ್ರವಾರ ನವೀನ್ ಮೃತದೇಹ ಹಸ್ತಾಂತರಿಸಲಾಗಿತ್ತು. ಅಧಿಕಾರಿಗಳು ಶನಿವಾರ ಪೋಲೆಂಡ್ ರಾಜಧಾನಿ ವಾರ್ಸಾ ತಲುಪಿದ್ದಾರು. ಮಧ್ಯಾಹ್ನ 1ಕ್ಕೆ ಮೃತದೇಹ ಹೊತ್ತ ಎಮಿರೇಟ್ಸ್ ವಿಮಾನವು ವಾರ್ಸಾದಿಂದ ಹೊರಟಿತ್ತು, ಭಾನುವಾರ ದುಬೈ ತಲುಪಲಿದೆ. ಅಲ್ಲಿಂದ ಮತ್ತೊಂದು ಎಮಿರೇಟ್ಸ್ ವಿಮಾನದಲ್ಲಿ ಸೋಮವಾರ ಬೆಳಗಿನ ಜಾವ 3ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರೆ ಗ್ರಾಮದ ನವೀನ್ ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಉಕ್ರೇನ್ ರಷ್ಯಾ ಯುದ್ಧದಲ್ಲಿ ಮಾ.1 ರಂದು ರಷ್ಯಾ ಸೈನಿಕರ ದಾಳಿಯಿಂದ ಸಾವಿಗೀಡಾಗಿದ್ದರು. 21 ದಿನದ ಬಳಿಕ ನವೀನ್ ಮೃತದೇಹವನ್ನು ಭಾರತಕ್ಕೆ ತರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ