ಝಮೀರ್ ಅಹಮದ್ ಎಲ್ಲಿದ್ದಾರಪ್ಪಾ.? ಸ್ವಲ್ಪ ಮುಖ ತೋರಿಸಿ ಎಂದ್ರು ಸಭಾಪತಿ!

By Sathish Kumar KH  |  First Published Dec 6, 2023, 2:16 PM IST

ಅಧಿವೇಶನ ಆರಂಭವಾಗಿದ್ದರೂ ಸಚಿವ ಜಮೀರ್ ಅಹಮದ್ ಕಾಣಿಸುತ್ತಲೇ ಇಲ್ಲ, ಎಲ್ಲಿದ್ದಾರೆ ಅವರು ಸ್ವಲ್ಪ ಮುಖವನ್ನು ತೋರಿಸಿ ಎಂದು ಸಭಾನಾಯಕರಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನೆ ಮಾಡಿದರು.


ಬೆಳಗಾವಿ (ಡಿ.06): ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಝಮೀರ್ ಅಹಮದ್ ಕಾಣಿಸಲಿಲ್ಲ. ಈ ಹಿನ್ನಲೆಯಲ್ಲಿ ಸ್ವಲ್ಪ ಝಮೀರ್ ಅಹಮದ್ ಗೆ ಮುಖ ತೋರಿಸಲು ಹೇಳಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾ ನಾಯಕರಿಗೆ ಸೂಚನೆ ನೀಡಿದರು. ಆದರೆ, ಇದಕ್ಕೆ ಮಧ್ಯ ಪ್ರವೇಶ ಮಾಡಿದ ಕೋಟಾ ಶ್ರೀನಿವಾಸ್ ಅವರು ಸಚಿವ ಝಮೀರ್ ತೆಲಂಗಾಣ ಚುನಾವಣೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ. ಸ್ಪೀಕರ್ ಸ್ಥಾನದ ಮೇಲೆ ವಿಶ್ವಾಸವಿಲ್ಲದ ಕಾರಣ ಅವರು ಅಧಿವೇಶನಕ್ಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳಿಗಾಲ ಅಧಿವೇಶನ ಆರಂಭವಾಗಿ ಮೂರು ದಿನಗಳಾದರೂ ಝಮೀರ್ ಅಹಮದ್ ಬರ್ತಾನೆ ಇಲ್ಲ. ಅವರು ಎಲ್ಲಿದ್ದಾರೆ ಸ್ವಲ್ಪ ಮುಖ ತೋರಿಸಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾನಾಯಕರಿಗೆ ಸೂಚನೆ ನೀಡಿದರು. ಆದರೆ, ಝಮೀರ್ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಬಿಜೆಪಿ ಸದಸ್ಯರ ಗದ್ದಲ ಶುರುವಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ಅವರು, ಸ್ಪೀಕರ್ ಸ್ಥಾನದ ಮೇಲೆ ಝಮೀರ್ ಗೆ ವಿಶ್ವಾಸ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ. ಸ್ಪೀಕರ್ ಹಾಗೂ ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲ ಅಂತ ಅವರು ಬಂದಿಲ್ವಾ? ಸ್ಪೀಕರ್ ಸ್ಥಾನಕ್ಕೆ ಗೌರವ ನೀಡದೇ ಅಪಮಾನ ಮಾಡಿದರೆ ಅದಕ್ಕಿಂತ ದೊಡ್ಡ ದುರಂತ ಇಲ್ಲ. ತೆಲಂಗಾಣ ಚುನಾವಣೆಯಲ್ಲಿ ಮಾತನಾಡಿದ್ದು ಗೊತ್ತಿಲ್ವಾ? ಎಂದು ಕಿಡಿಕಾರಿದ್ದಾರೆ.

Tap to resize

Latest Videos

'ನಾನು ನಂದಿನಿ ತಿರುಪತಿಗೆ ಬರ್ತೀನಿ..' ಎಂದ ಕೆಎಂಎಫ್‌, ನೋ ವೇ ಚಾನ್ಸೇ ಇಲ್ಲ ಎಂದ ತಿಮ್ಮಪ್ಪ!

ಸಭಾಪತಿ ಪ್ರಶ್ನೆಗೆ ಉತ್ತರಿಸಿದ ಸಭಾ ನಾಯಕರು ಝಮೀರ್ ಅಹಮದ್ ಅವರು ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ ಎಂದು ಉತ್ತರಿಸಿದರು. ಇದರಿಂದ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಭಾಪತಿ ಹೊರಟ್ಟಿ ಅವರು, ಪದೇ ಪದೆ ಸಚಿವರು ಗೈರು ಹಾಜರಾಗುವುದು ಸರಿಯಲ್ಲ ಎಂದರು. ಇದಕ್ಕೆ ಪುನಃ ಮಧ್ಯ ಪ್ರವೇಶಿಸಿದ ನಾರಾಯಣಸ್ವಾಮಿ ಅವರು, ಸರ್ಕಾರಕ್ಕೆ ಸಭಾಪತಿ ಛಾಟಿ ಬೀಸಬೇಕು. ಮುಖ ತೋರಿಸಿ ಅಂತ ಮಾತ್ರ ಹೇಳಿದರೆ ಹೇಗೆ? ಎಂದರು. ಇವರಿಗೆ ಧ್ವನಿಗೂಡಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರು, ಯಾರು ಏನು ಬೇಕಾದರೂ ಮಾತಾಡಬಹುದಾ? ಎಂದರು. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ನಾನು ಸೂಕ್ಷ್ಮವಾಗಿ ಹೇಳಿದ್ದೇನೆ ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದರು.

ಬ್ರ್ಯಾಂಡ್‌ ಬೆಂಗಳೂರು: ಸದನದಲ್ಲಿ ಕೈ-ಕಮಲ ಕಿತ್ತಾಟ, ನಗರದ ಮಾನ ಕಳೆಯಬೇಡಿ ಎಂದ ಖಾದರ್

ಸಚಿವ ಜಮೀರ್ ಅಹಮದ್ ಸ್ಪೀಕರ್ ಬಗ್ಗೆ ಹೇಳಿದ್ದೇನು?
ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು, ಕರ್ನಾಟಕ ವಿಧಾನಸಭೆಯಲ್ಲಿ ಮುಸ್ಲಿಂ ಸ್ಪೀಕರ್ (ಯುಟಿ ಖಾದರ್) ಮುಂದೆ ಬಿಜೆಪಿ ನಾಯಕರು ಕೈಮುಗಿದು, ತಲೆಬಾಗಿ ನಿಲ್ಲುತ್ತಾರೆ. ಕಾಂಗ್ರೆಸ್ ನೀಡಿದ ಅವಕಾಶಕ್ಕೆ ಧನ್ಯವಾದಗಳು ಎಂದು ಹೇಳಿದ್ದರು. ಈ ಬಗ್ಗೆ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸಿ ಜಮೀರ್ ರಾಜಿನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸಿದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಜಮೀರ್ ಉದ್ದೇಶಪೂರ್ವಕವಾಗಿ ಯಾವುದೇ ಹೇಳಿಕೆ ನೀಡಿಲ್ಲ' ಎಂದು ಹೇಳಿದ್ದರು.

click me!