Karnataka assembly election: ಪಕ್ಷೇತರರ ಸೆಳೆಯಲು ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯತ್ನ

By Kannadaprabha NewsFirst Published May 13, 2023, 2:17 AM IST
Highlights

ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಶಿರಹಟ್ಟಿಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಸಂಪರ್ಕಿಸಿ ಚರ್ಚಿಸಿದ್ದು, ಅತಂತ್ರ ವಿಧಾನಸಭೆ ನಿರ್ಮಾಣ ಸಾಧ್ಯತೆ ಹಿನ್ನೆಲೆಯಲ್ಲಿ ಈ ಚರ್ಚೆಗೆ ವಿಶೇಷ ಮಹತ್ವ ಬಂದಿದೆ.

ಬೆಂಗಳೂರು (ಮೇ.13 : ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಶಿರಹಟ್ಟಿಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಸಂಪರ್ಕಿಸಿ ಚರ್ಚಿಸಿದ್ದು, ಅತಂತ್ರ ವಿಧಾನಸಭೆ ನಿರ್ಮಾಣ ಸಾಧ್ಯತೆ ಹಿನ್ನೆಲೆಯಲ್ಲಿ ಈ ಚರ್ಚೆಗೆ ವಿಶೇಷ ಮಹತ್ವ ಬಂದಿದೆ.

ಎರಡೂ ಪಕ್ಷಗಳ ಹಿರಿಯರು ಕರೆ ಮಾಡಿ ಮಾತನಾಡಿದ್ದನ್ನು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ ರಾಮಕೃಷ್ಣ ದೊಡ್ಡಮನಿ(Ramakrishna dodmani), ಸಿದ್ದರಾಮಯ್ಯ(Siddaramaiah) ಅವರು ಕರೆ ಮಾಡಿ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಹೇಳಿದ್ದಾರೆ. ಜತೆಗೆ, ಇಲ್ಲೇ ಸುರ್ಜೆವಾಲಾ ಅವರೂ ಇದ್ದಾರೆ ಮಾತನಾಡು ಎಂದರು. ಆದರೆ ನಾನು ನಾಳೆ ಫಲಿತಾಂಶ ಬರಲಿ ಸರ್‌, ಈಗಲೇ ಮಾತನಾಡುವುದು ಸರಿ ಇರುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.

Latest Videos

ಬೊಮ್ಮಾಯಿ ಹಾಗೂ ಸಿ.ಸಿ.ಪಾಟೀಲ್‌(Basavaraj bommai and cc patil) ಕೂಡಾ ಮಾತನಾಡಿದ್ದು ಅವರೂ ಹಲವು ವಿಷಯಗಳ ಕುರಿತು ಚರ್ಚಿಸಿದರು. ಅದನ್ನೆಲ್ಲ ಈಗಲೇ ಹೇಳಲು ಆಗುವುದಿಲ್ಲ. ನಾಳೆ ಫಲಿತಾಂಶ ಬರಲಿ ಅಂತ ಹೇಳಿದ್ದೇನೆ ಅಷ್ಟೆ. ಇದರೊಂದಿಗೆ ಕ್ಷೇತ್ರದ ಜನರೊಂದಿಗೂ ಚರ್ಚಿಸುತ್ತೇನೆ ಎಂದಿದ್ದೇನೆ ಎಂದು ದೊಡ್ಡಮನಿ ಹೇಳಿದರು.

ಕುತೂಹಲಕ್ಕೆ ಕಾರಣವಾದ ನಡೆ

ಶಿರಹಟ್ಟಿಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಎಂದು ಸ್ಪರ್ಧಿಸಿ ನಂತರ ವರಿಷ್ಠರು ಸೂಚಿಸಿದರೂ ನಾಮಪತ್ರ ವಾಪಸ್‌ ಪಡೆಯದೆ ಕಣದಲ್ಲೇ ಉಳಿದಿದ್ದ ರಾಮಕೃಷ್ಣ ದೊಡ್ಡಮನಿ ಅವರನ್ನು ವಾರದ ಹಿಂದಷ್ಟೇ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಾಗ ಹಿಗ್ಗಾ ಮುಗ್ಗಾ ಬೈದು ಹೋಗಿದ್ದರು. ಈಗ ಅವರೇ ಕರೆ ಮಾಡಿ ಮಾತನಾಡುವಂತಾಗಿದ್ದು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿದ್ದು ಕುತೂಹಲ ಮೂಡಿಸಿದೆ.

ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದು,ಡಿಕೆಶಿ ಕರೆ

ಹೊಸಪೇಟೆ: ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿ, ದಿ.ಎಂ.ಪಿ.ಪ್ರಕಾಶ ಅವರ ಮಗಳು ಎಂ.ಪಿ.ಲತಾ(MP Lata) ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಅವರು ಕರೆ ಮಾಡಿದ್ದು, ಭಾರಿ ಕುತೂಹಲ ಮೂಡಿಸಿದ್ದು, ಆದರೆ, ಈ ಇಬ್ಬರೂ ನಾಯಕರು ಚುನಾವಣೆ ವಿದ್ಯಮಾನದ ಬಗ್ಗೆ ಮಾತ್ರ ವಿಚಾರಿಸಿದ್ದಾರೆ ಎಂದು ಎಂ.ಪಿ.ಲತಾ ಅವರು ಸ್ಪಷ್ಪ ಪಡಿಸಿದ್ದಾರೆ.

ಈ ಕುರಿತು ಎಂ.ಪಿ.ಲತಾ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಕರೆ ಮಾಡಿ, ಏನಮ್ಮಾ ಲತಾ, ಈ ಬಾರಿ ಚುನಾವಣೆ ಹೇಗೆ ನಡೆಯಿತು, ಹೋಪ್‌ ಇದೆಯಾ? ಎಂದು ಪ್ರಶ್ನಿಸಿದ್ದು,‘ಒಕೆ ಅಂಕಲ್‌, ಚುನಾವಣೆ ಚೆನ್ನಾಗಿ ನಡೆದಿದೆ. ಹೋಪ್‌ ಇದೆ. ಪಕ್ಷೇತರಳಾದರೂ ಫೈಟ್‌ ಕೊಟ್ಟಿರುವೆ ಎಂದು ಎಂ.ಪಿ.ಲತಾ ಹೇಳಿದ್ದಾರೆ, ಇದಕ್ಕೆ ಪ್ರತಿಯಾಗಿ ‘ಒಳಿತಾಗಲಿ..’ಎಂದು ಸಿದ್ದರಾಮಯ್ಯಹಾರೈಸಿದ್ದಾರೆ.

ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಕರೆ ಮಾಡಿದ್ದು, ಈ ಬಾರಿ ಚುನಾವಣೆ ಹೇಗೆ ನಡೆಯಿತು? ಎಂದು ವಿಚಾರಿಸಿದ್ದಾರೆ ಎಂದು ಲತಾ ವಿವರಿಸಿದರು.

ಏತನ್ಮಧ್ಯೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ತಮ್ಮ ಸಹಾಯಕನ ಮೊಬೈಲ್‌ನಿಂದ ಕರೆ ಮಾಡಿದ್ದು, ನಾನು ಸಂಬಂಧಿಯೊಬ್ಬರ ಮದುವೆಯಲ್ಲಿ ಇದ್ದುದ್ದರಿಂದ ಕರೆ ಸ್ವೀಕರಿಸಲಾಗಲಿಲ್ಲ , ಮರಳಿ ಕರೆ ಮಾಡಿದಾಗ ಸಿಎಂ ರಿಸೀವ್‌ ಮಾಡಿಲ್ಲ ಎಂದು ಲತಾ ತಿಳಿಸಿದರು.

ಬಿಎಸ್‌ವೈ ಸಂಬಂಧಿ, ಪಕ್ಷೇತರ ಚಿಕ್ಕನಗೌಡರಿಗೆ ‘ಕೈ’ಗಾಳ ?

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರ(Kundagola assembly constituency )ದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರಿಗೆ (SI Chikkanagowdar) ಕಾಂಗ್ರೆಸ್‌ ಗಾಳ ಹಾಕುತ್ತಿದೆ. ಚಿಕ್ಕನಗೌಡರ ಒಂದು ವೇಳೆ ಗೆದ್ದರೆ ಅವರನ್ನು ಪಕ್ಷಕ್ಕೆ ಸೆಳೆಯಲು ಈಗಲೇ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆಯಾದರೂ ಇದನ್ನು ಚಿಕ್ಕನಗೌಡರ ತಳ್ಳಿಹಾಕಿದ್ದಾರೆ.

ಯಡಿಯೂರಪ್ಪ ಅವರ ಸಂಬಂಧಿಕರೂ ಆಗಿರುವ ಚಿಕ್ಕನಗೌಡರ, ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಎಂ.ಆರ್‌.ಪಾಟೀಲ್‌ಗೆ ಟಿಕೆಟ್‌ ನೀಡಿತ್ತು. ಇದರಿಂದ ಅಸಮಾಧಾನಗೊಂಡು ಕಾಂಗ್ರೆಸ್‌ ಟಿಕೆಟ್‌ಗೂ ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್‌ ಟಿಕೆಟ್‌ ಕೂಡ ಸಿಗದೆ, ಕೊನೆಯ ಘಳಿಗೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಅತ್ತ ಕಾಂಗ್ರೆಸ್‌ನಲ್ಲಿ ಕುಸುಮಾವತಿ ಶಿವಳ್ಳಿ(Kusuma shivalli)ಗೆ ಟಿಕೆಟ್‌ ಕೊಡುವುದಕ್ಕೆ ಆಕ್ಷೇಪಿಸಿದ್ದ ಬಹುತೇಕ ಮುಖಂಡರು ಬಳಿಕ ಚಿಕ್ಕನಗೌಡರಿಗೆ ಬೆಂಬಲ ಸೂಚಿಸಿದ್ದರು. ಕ್ಷೇತ್ರದಲ್ಲಿ ಸದ್ಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಸದ್ಯ ಚಿಕ್ಕನಗೌಡರ ಗೆಲ್ಲುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

ಶೆಟ್ಟರ್‌, ಸಿದ್ದು,ಡಿಕೇಶಿ ಕರೆ ?: ಇತ್ತ ಮತದಾನೋತ್ತರ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆಯೂ ಇದ್ದು, ಒಂದು ವೇಳೆ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊಮ್ಮಿದರೆ, ಪಕ್ಷೇತರರ ಬೆಂಬಲ ಬೇಕಾಗಬಹುದು. ಕ್ಷೇತ್ರದ ಈಗಿನ ಚಿತ್ರಣ ನೋಡಿದರೆ ಒಂದು ವೇಳೆ ಚಿಕ್ಕನಗೌಡರ ಅವರು ಗೆದ್ದರೆ ತಾವೇ ಅವರನ್ನು ಸೆಳೆದುಕೊಳ್ಳಬೇಕೆಂಬ ಇರಾದೆ ಕಾಂಗ್ರೆಸ್ಸಿನದು. ಈ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಕಾಂಗ್ರೆಸ್‌ ಹಿರಿಯ ಮುಖಂಡರು ನಡೆಸಿದ್ದಾರೆ ಎನ್ನಲಾಗಿದ್ದು, ಇತ್ತೀಚಿಗಷ್ಟೇ ಕಾಂಗ್ರೆಸ್‌ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಚಿಕ್ಕನಗೌಡರ ಅವರೊಂದಿಗೆ ಚರ್ಚೆ ನಡೆಸಿದ್ದಾರೆ, ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಸರಣಿ ಸಭೆ, ಪಕ್ಷೇತರ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಕರೆ

ತಂದೆಯ ಹಾದಿಯಲ್ಲೆ ನಡೆವೆ: ಎಂ.ಪಿ.ಪ್ರಕಾಶ್‌ ಅವರು ಸೋತರೆ, ತನ್ನ ಎದುರಾಳಿ ಗೆದ್ದರೆ ಆ ಅಭ್ಯರ್ಥಿಯ ಕೈಕುಲುಕಿ ಒಳ್ಳೆಯದಾಗಲಿ ಎಂದು ಹರ್ಷಿಸುತ್ತಿದ್ದರು. ನಾನು ಅವರ ಮಗಳು, ಎಂ.ಪಿ.ಪ್ರಕಾಶರ ವ್ಯಕ್ತಿತ್ವದಂತೆ ನಡೆದುಕೊಳ್ಳುತ್ತೇನೆ ಎಂದ ಅವರು, ಈ ಬಾರಿ ಕ್ಷೇತ್ರದ ಜನರು ಒಲವು ತೋರಿದ್ದಾರೆ, ನನಗೆ ಹೋಪ್‌ ಇದೆ ಎಂದರು.

ಬೊಮ್ಮಾಯಿ ನಮ್ಮ ಒಡನಾಡಿ: ಇನ್ನು, ಸಿಎಂ ಬಸವರಾಜ ಬೊಮ್ಮಾಯಿ ಅವರು ನಾವು ಒಟ್ಟಿಗೇ ಬೆಳೆದವರು. ಬಾಲ್ಯದಲ್ಲಿ ಅವರ ಮನೆಯಲ್ಲಿ ನಾವು, ನಮ್ಮ ಮನೆಯಲ್ಲಿ ಅವರು ಇರುತ್ತಿದ್ದೆವು. ನಮ್ಮ ತಂದೆ ಅವರು ಮೂಲ ಜನತಾದಳದಲ್ಲೇ ಇದ್ದವರಲ್ಲವೇ ಎಂದು ನೆನೆದರು.

click me!