ರಾಜ್ಯಾದ್ಯಂತ ಹಲವು ಕಡೆ ಬುಧವಾರದಿಂದ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ, ಕರಾವಳಿ ಹಾಗೂ ಮಲೆನಾಡಿಗೆ ‘ಯೆಲ್ಲೋ ಅಲರ್ಚ್’ ಘೋಷಣೆ ಮಾಡಿದೆ.
ಬೆಂಗಳೂರು: (ಮೇ.10) : ರಾಜ್ಯಾದ್ಯಂತ ಹಲವು ಕಡೆ ಬುಧವಾರದಿಂದ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ, ಕರಾವಳಿ ಹಾಗೂ ಮಲೆನಾಡಿಗೆ ‘ಯೆಲ್ಲೋ ಅಲರ್ಚ್’ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ವಿಧಾನಸಭೆಯ 224 ಸ್ಥಾನಗಳಿಗೆ ಬುಧವಾರ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಬುಧವಾರ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್‌್ತ ಕಲ್ಪಿಸಲಾಗಿದೆ.
ಒಂದು ಮತಕ್ಕಿದೆ ಎಲ್ಲವನ್ನೂ ಬದಲಿಸುವ ಶಕ್ತಿ: ರಮೇಶ್ ಅರವಿಂದ
ಚುನಾವಣಾ ಅಖಾಡಕ್ಕಿಳಿದಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರ ಪ್ರಭುಗಳು ಬರೆಯಲಿದ್ದಾರೆ. ಸಂಜೆ 6ಗಂಟೆಯವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾದರೂ. ಸಂಜೆವರೆಗೂ ಸಮಯ ಇದೆಯಲ್ಲ ಎಂಬ ಉದಾಸೀನ ಬೇಡ. ಕಾರಣ, ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನದೊಳಗೆ ಮತದಾನ ಮಾಡಿ ಮುಗಿಸುವುದು ಉತ್ತಮ. ಮತ ಚಲಾಯಿಸುವವರ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ.
ಮತಗಟ್ಟೆ:
ರಾಜ್ಯದಲ್ಲಿ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 2,258 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 996 ಸಖಿ ಮತಗಟ್ಟೆಗಳು, 239 ಅಂಗವಿಕಲ ಮತಗಟ್ಟೆಗಳು, 286 ಯುವ ಸಿಬ್ಬಂದಿ, 623 ಸ್ಥಳೀಯ ವಿಷಯ ಆಧಾರಿತ, 114 ಬುಡಕಟ್ಟು ಮತಗಟ್ಟೆಗಳಾಗಿವೆ. ರಾಜ್ಯದಲ್ಲಿ 11,617 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಿವೆ. ಈ ಮತಗಟ್ಟೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
5.31 ಕೋಟಿ ಮತದಾರರು:
ಒಟ್ಟು 5.31 ಕೋಟಿ ಮತದಾರರು ಮತದಾನ ಮಾಡಲು ಅರ್ಹರಿದ್ದಾರೆ. ಈ ಪೈಕಿ 2.67 ಕೋಟಿ ಪುರುಷ ಮತದಾರರು, 2.64 ಕೋಟಿ ರು. ಮಹಿಳಾ ಮತದಾರರಿದ್ದಾರೆ. 4,927 ಮತದಾರರು ಸೇವಾಮತದಾರರಾಗಿದ್ದಾರೆ. 11.71 ಲಕ್ಷ ಮತದಾರರು ಯುವ ಮತದಾರರಾಗಿದ್ದು, ಮೊದಲ ಬಾರಿಗೆ ಮತದಾನ ಮಾಡಲು ಅರ್ಹರಾಗಿದ್ದಾರೆ. 12.15 ಲಕ್ಷ ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರು, 5.71 ಲಕ್ಷ ಅಂಗವಿಕಲ ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಇವರು ಚುನಾವಣಾ ಕಣದಲ್ಲಿರುವ 2615 ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಬರೆಯಲಿದ್ದಾರೆ.
2615 ಅಭ್ಯರ್ಥಿಗಳು:
ಅಖಾಡದಲ್ಲಿರುವ 2615 ಅಭ್ಯರ್ಥಿಗಳಲ್ಲಿ 2430 ಅಭ್ಯರ್ಥಿಗಳು ಪುರುಷರು, 184 ಅಭ್ಯರ್ಥಿಗಳು ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿಯಾಗಿದ್ದಾರೆ. ಬಿಜೆಪಿಯಿಂದ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ 223 ಕ್ಷೇತ್ರದಲ್ಲಿ ಹುರಿಯಾಳುಗಳಿದ್ದಾರೆ. ಜೆಡಿಎಸ್‌ನಿಂದ 209 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್‌ಪಿಯಿಂದ 133, ಎನ್‌ಪಿಪಿ 2 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ಪಕ್ಷದಿಂದ 254 ಮತ್ತು ಪಕ್ಷೇತರರು 918 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, 187 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮನೆಯಿಂದಲೇ ಮತ:
ಇನ್ನು, ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡ 99,529 ಮತದಾರರ ಪೈಕಿ 94,931 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ80,250 ಜನರು ನೋಂದಾಯಿಸಿಕೊಂಡಿದ್ದು, ಈ ಪೈಕಿ 76,120 ಮಂದಿ ತಮ್ಮ ಹಕ್ಕು (ಶೇ. 94.85) ಚಲಾಯಿಸಿದ್ದಾರೆ. 19,279 ಅಂಗವಿಕಲ ಮತದಾರರು ನೋಂದಾಯಿಸಿಕೊಂಡಿದ್ದು, 18,811 ಜನರು ಮತದಾನ (ಶೇ.97.57) ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು, ಗೈರು ಹಾಜರಿ ಮತದಾರರು 15,328 ಮಂದಿ ನೋಂದಾಯಿಸಿಕೊಂಡಿದ್ದು, 10,066 ಮತದಾರರು ಮತದಾನ ಮಾಡಿದ್ದಾರೆ. ಒಟ್ಟು ಶೇ.65.67ರಷ್ಟುಮತದಾನವಾಗಿದೆ.
ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿ ಸಿಬ್ಬಂದಿಯು ತಮಗೆ ನಿಗದಿ ಪಡಿಸಿರುವ ಮತಗಟ್ಟೆಗಳಿಗೆ ಇವಿಎಂಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಮಂಗಳವಾರ ರಾತ್ರಿಯೇ ಮತಗಟ್ಟೆಗಳಿಗೆ ತಲುಪಿರುವ ಸಿಬ್ಬಂದಿ ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನವಾಗುವ ಮುನ್ನ ಇವಿಎಂಗಳನ್ನು ಪರೀಕ್ಷಿಸಿಕೊಳ್ಳಲಾಗಿದೆ.
1.15 ಲಕ್ಷ ಬ್ಯಾಲೆಟ್ ಯುನಿಟ್ ಲಭ್ಯತೆ
ಚುನಾವಣೆಯಲ್ಲಿ 1,15,709 ಬ್ಯಾಲೆಟ್ ಯುನಿಟ್ ಲಭ್ಯತೆ ಇದೆ. 82,543 ಕಂಟ್ರೋಲ್ ಯುನಿಟ್, 89,379 ವಿವಿಪ್ಯಾಟ್ ಲಭ್ಯತೆ ಇದೆ. ಈಗಾಗಲೇ ಮತಗಟ್ಟೆಗಳಿಗೆ 62,988 ಬ್ಯಾಲೆಟ್ ಯುನಿಟ್, 58,545 ಕಂಟ್ರೋಲ್ ಯುನಿಟ್, 58,545 ಕಂಟ್ರೋಲ್ ಯುನಿಟ್ ಹಂಚಿಕೆ ಮಾಡಲಾಗಿದೆ. 12,615 ಬ್ಯಾಲೆಟ್ ಯುನಿಟ್, 11,755 ಕಂಟ್ರೋಲ್ ಯುನಿಟ್, 17,657 ವಿವಿ ಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು
16 ವಿಧಾನಸಭೆ ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತದೆ. ಬಳ್ಳಾರಿ ನಗರ ವಿಧಾನ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೊಸಕೋಟೆಯಲ್ಲಿ 23, ಚಿತ್ರದುರ್ಗದಲ್ಲಿ 21 ಹಾಗೂ ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರದಲ್ಲಿ ತಲಾ ಐವರು ಸ್ಪರ್ಧಿಸಿದ್ದಾರೆ.
ಕಾದಿಹುದು ಇವಿಎಂ ಮತದಾರ ಬರುವನೆಂದು!
ರಾಜ್ಯ ಮತ್ತು ನೆರೆರಾಜ್ಯಗಳಿಂದ ಗಡಿಭಾಗದಲ್ಲಿ ಚೆಕ್‌ಪೋಸ್ಟ್
ರಾಜ್ಯದ 185 ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಹೈಅಲರ್ಚ್ ಸಾರಲಾಗಿದೆ. ಇದರ ಜತೆಗೆ 100 ಅಬಕಾರಿ ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ನಲ್ಲಿ ಎಚ್ಚರಿಕೆ ವಹಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯು 185 ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಿದೆ. ಇದೇ ವೇಳೆ ನೆರೆ ರಾಜ್ಯಗಳು ಸಹ ಚೆಕ್‌ಪೋಸ್ಟ್‌ಗಳನ್ನು ತೆರೆದಿವೆ. ಮಹಾರಾಷ್ಟ್ರ ರಾಜ್ಯವು 53 ಪೊಲೀಸ್ ಚೆಕ್‌ಪೋಸ್ಟ್, ಗೋವಾ ರಾಜ್ಯವು 5 ಪೊಲೀಸ್, 3 ಅಬಕಾರಿ ಮತ್ತು 3 ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ಗಳನ್ನು ತೆರೆದಿವೆ, ಆಂಧ್ರಪ್ರದೇಶವು 57 ಪೊಲೀಸ್ ಚೆಕ್‌ಪೋಸ್ಟ್, ತೆಲಂಗಾಣ 30 ಪೊಲೀಸ್, 5 ಅಬಕಾರಿ ಮತ್ತು 11 ವಾಣಿಜ್ಯ ತೆರಿಗೆ, ತಮಿಳುನಾಡು 25 ಪೊಲೀಸ್ 2 ಅಬಕಾರಿ, 5 ವಾಣಿಜ್ಯ ತೆರಿಗೆ ಮತ್ತು ಕೇರಳ ರಾಜ್ಯವು 20 ಪೊಲೀಸ್, 8 ಅಬಕಾರಿ, 14 ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ಗಳನ್ನು ತೆರೆದಿವೆ.