
ಬೆಂಗಳೂರು (ಸೆ.06): ರಾಜ್ಯದಲ್ಲಿ ಕಬಾಬ್, ಗೋಬಿ ಮಂಚೂರಿ, ಸಿಹಿ ತಿಂಡಿಗಳ ಬಳಿಕ ಇದೀಗ ಖಾರ ಬೂಂದಿ, ಮಿಕ್ಚರ್‌ಗಳಲ್ಲೂ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ. ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಖಾರ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಈ ವೇಳೆ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಸಲಿದ್ದು, ಈ ಕುರಿತು ಆರೋಗ್ಯ ಸಚಿವರೇ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024-25 ಹಾಗೂ 2025-26ನೇ ಸಾಲಿನಲ್ಲಿ 19 ತಪಾಸಣಾ ಅಭಿಯಾನ ನಡೆಸಿದ್ದು, 19 ಬಗೆಯ ತಿಂಡಿ ಮತ್ತು ಪಾನೀಯಗಳ 3,787 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದೀಗ ಖಾರಾ ಬೂಂದಿ, ಮಿಕ್ಚರ್‌ಗಳ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಕೃತಕ ಬಣ್ಣ ಬಳಕೆಯಾಗಿರುವುದು ತಿಳಿದುಬಂದಿದೆ. ವರದಿ ಆಧಾರದ ಮೇಲೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೆ ಕೃತಕ ಬಣ್ಣ ಬಳಕೆ: ಕಬಾಬ್ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವುದನ್ನು ಸರ್ಕಾರ ನಿರ್ಬಂಧಿಸಿದ್ದರೂ ತಾಲೂಕಿನ ಕೆಲವು ಹೋಟೆಲ್‌ಗಳಲ್ಲಿ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಕೃತಕ ಬಣ್ಣ ಬಳಸುವುದನ್ನು ಮುಂದುವರಿಸಿದ್ದು, ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರದಲ್ಲಿ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಆರಂಭದಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಗೋಬಿ ಮಂಚೂರಿ ಮತ್ತು ಕಬಾಬ್ ಅಂಗಡಿಗಳಲ್ಲಿ ಜನರನ್ನು ಆಕರ್ಷಿಸಲು ಹೆಚ್ಚು ಕೆಂಪು ಬಣ್ಣ ಬರುವಂಥ ಮೆಣಸಿನಕಾಯಿ ಬಳಕೆ ಸೇರಿದಂತೆ ವಿವಿಧ ಬಗೆಯಲ್ಲಿ ಪ್ರಯತ್ನ ಮಾಡಿದ್ದರು.
ಆದರೆ ಅದು ಜನತೆಯನ್ನು ಆಕರ್ಷಿಸಲು ಫಲಕಾರಿಯಾಗಿರಲಿಲ್ಲ. ಆದರೆ ಈಗ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡದೆ ಬೀದಿ ಬದಿಯ ಕಬಾಬ್ ಮತ್ತು ಗೋಬಿ ಮಂಚೂರಿ ಅಂಗಡಿಗಳು ಸೇರಿದಂತೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗ ಳಲ್ಲಿ ಸಹ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್ 21 ರಂದು ರಾಜ್ಯಾದ್ಯಂತ ಎಲ್ಲಾ ಕಬಾಬ್, ಗೋಬಿ ಮಂಚೂರಿ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆ ಮಾಡುವುದನ್ನು ಸರ್ಕಾರ ನಿಷೇಧಿಸಿತ್ತು. ಆದೇಶ ಮೀರಿ ಕೃತಕ ಬಣ್ಣ ಬಳಸಿದರೆ 10 ಲಕ್ಷದವರೆಗೂ ದಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಲಾಗಿತ್ತು.
ಆರಂಭದಲ್ಲಿ ಸುಮ್ಮನೆ ಇದ್ದ ಅಂಗಡಿ ಮಾಲೀಕರು ರಾಜಾರೋಷವಾಗಿ ಬಣ್ಣ ಬಳಕೆ ಮಾಡುವುದನ್ನು ಮತ್ತೆ ಮುಂದುವರಿಸಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಕೃತಕ ಬಣ್ಣ ಮಿಶ್ರಣದ ಬಗ್ಗೆ ಕೆಲವರು ಗೊತ್ತಿದ್ದರೂ ಸೇವಿಸುತ್ತಿದ್ದಾರೆ. ಆದರೆ ಕೆಲವು ಅಮಾಯಕರು ಗೊತ್ತಿಲ್ಲದೇ ಬಣ್ಣ ಮಿಶ್ರಿತ ಆಹಾರ ಪದಾರ್ಥಗಳನ್ನು ತಿಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ