ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

Published : Aug 15, 2023, 06:04 PM ISTUpdated : Aug 15, 2023, 06:16 PM IST
ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್‌: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್

ಸಾರಾಂಶ

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಮಾದರಿಯಲ್ಲಿಯೇ ದಲಿತ ವಿರೋಧಿ ಹೇಳಿಕೆ ನೀಡಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಮೇಲೆ ರಾಜಾಜಿನಗರ ಪೊಲೀಸರು ಎನ್‌ಸಿಆರ್‌ ದಾಖಲಿಸಿದ್ದಾರೆ.

ಬೆಂಗಳೂರು (ಆ.15): ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಅವರ ಮಾದರಿಯಲ್ಲಿಯೇ, ಈಗ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ 'ದಲಿತ ವಿರೋಧಿ' ಪದವನ್ನು ಹೇಳಿಕೆ ನೀಡಿರುವ ವಿಡಿಯೋ ಮುನ್ನೆಲೆಗೆ ಬಂದಿದೆ. ಇನ್ನು ಪೊಲೀಸರು ನಟ ಉಪೇಂದ್ರನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಆದರೆ, ಕಾಂಗ್ರೆಸ್‌ ಸಚಿವ ಮಲ್ಲಿಕಾರ್ಜುನ ವಿರುದ್ಧ ದೂರು ನೀಡಿದರೂ ಪೊಲೀಸರು ಎನ್‌ಸಿಆರ್‌ ದಾಖಲು ಮಾಡಿಕೊಂಡಿದ್ದಾರೆ. 

ಕಳೆದ ಮೂರು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕ ಉಪೇಂದ್ರ ಅವರು ಸಾಮಾಜಿಕ ಜಾಲತಾಣದ ವೈವ್‌ ಕಾರ್ಯಕ್ರಮದಲ್ಲಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆಂದು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ನಟ ಉಪೇಂದ್ರ ಅವರ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಕೂಡಲೇ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಆದರೆ, ಈಗ ಕಾಂಗ್ರೆಸ್‌ನ ಸರ್ಕಾರದ ಸಚಿವರೇ ಆಗಿರುವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಉಪೇಂದ್ರ ಅವರು ನೀಡಿದ ಮಾದರಿಯಲ್ಲಿಯೇ ದಲಿತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ದಿವಾಕರ್‌ ಎನ್ನುವವರು ರಾಜಾಜಿನಗರ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಆದರೆ, ಪೊಲೀಸರಿ ಎಫ್‌ಐಆರ್‌ ಬದಲು ಎನ್‌ಸಿಆರ್‌ ದಾಖಲಿಸಿದ್ದಾರೆ.

ಬುದ್ಧಿವಂತ ನಟ ಉಪೇಂದ್ರ ಹೊಲೆಗೇರಿ ಹೇಳಿಕೆ: ಎಫ್‌ಐಆರ್‌ ದಾಖಲಿಸಿದ ಸಮಾಜ ಕಲ್ಯಾಣ ಇಲಾಖೆ

ಈಗ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹಳೆಯ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ವೀಡಿಯೊವನ್ನು ಯೂಟ್ಯೂಬ್‌ ಚಾನೆಲ್‌ ನಲ್ಲಿ ಮೂರು ತಿಂಗಳ ಮೊದಲು ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ನಗರದ ಅಶೋಕ್‌ ಥಿಯೇಟರ್‌ ಬಳಿ ನಿರ್ಮಾಣಗೊಂಡಿರುವ ಅಂಡರ್‌ ಪಾಸ್‌ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. 'ಊರನ್ನು ಹೊಲೆಗೇರಿ ಮಾಡಬೇಡಿ' ಎಂದು ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ಅವರು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತು ಹಿಂದೆ ಮಾಡಿದ್ದ ವಿಡಿಯೋ ತುಣುಕು ಉಪೇಂದ್ರ ಅವರ ಕೇಸಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಪೇಂದ್ರನ ಮೇಲೆ ಕೇಸ್‌ ಆಗಿದ್ದು, ಮಲ್ಲಿಕಾರ್ಜುನ ಮೇಲೆ ಕ್ರಮ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ, ದಿವಾಕರ್‌ ಎನ್ನುವವರು ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌: ಎಫ್‌ಐಆರ್‌ಗೆ ತಡೆ

ನನ್ನ ಹೇಳಿಕೆ ತಿರುಚಲಾಗಿದೆ: 
'ಕೆಲವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ, ನಾನು ಆ ರೀತಿಯಾಗಿ ಹೇಳಿಲ್ಲ. ಉಪೇಂದ್ರ ಪ್ರಕರಣ ಬಗ್ಗೆ ನನಗೆ ಏನು ಗೊತ್ತಿಲ್ಲ. ನಾನು ಗಾಧೆ ಮಾತನ್ನು ಬಳಸಿಲ್ಲ, ಒಳ್ಳೆಯ ಕೆಲ್ಸಾ ಮಾಡಿ ಹೊಲಸು ಮಾಡಬೇಡಿ ಹೇಳಿದ್ದೇನೆ ಅಷ್ಟೇ. ಅದನ್ನು ನೀವು, ಅವರು ತಿರುಚಿದ್ದೀರಿ.
- ಎಸ್‌.ಎಸ್‌.ಮಲ್ಲಿಕಾರ್ಜುನ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ

ಇನ್ನು ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ರಾಜ್ಯ ಸರ್ಕಾರದ ಸಚಿವರಾದ ಕಾರಣ ಅವರ ಮೇಲೆ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಎನ್‌ಸಿಆರ್‌ ಮಾತ್ರ ದಾಖಲಿಸಲಾಗಿದೆ. ಆದರೆ, ಈ ಬಗ್ಗೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಾಗಿದೆ. ಆದ್ದರಿಂದ ದಿವಾಕರ್‌ ಎನ್ನುವವರು ನೀಡಿದ ದೂರನ್ನು ಪಡೆದ ರಾಜಾಜಿನಗರ ಪೊಲೀಸರು, ವಿಧಾನಸೌಧ  ಠಾಣೆಗೆ ಹೋಗಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡುವಂತೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು