ಕಾಂಗ್ರೆಸ್ ಸರ್ಕಾರವಯ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತರಲು ಮುಂದಾಗಿದ್ದು, 5 ಕೆ.ಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿ ಬದಲಾಗಿ 170 ರೂ. ಹಣ ಹಂಚಿಕೆಯನ್ನು ನೀಡಲಿದೆ.
ಬೆಂಗಳೂರು (ಜೂ.30): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಯನ್ನು ನಾಳೆಯಿಂದಲೇ (ಜುಲೈ 1ರ ಶನಿವಾರ) ಜಾರಿಗೆ ತರಲು ಮುಂದಾಗಿದೆ. ನಾಳೆಯಿಂದಲೇ ಅನ್ನ ಭಾಗ್ಯ ಯೋಜನೆಯಡಿ ತಲಾ 5 ಕೆ.ಜಿ. ಅಕ್ಕಿಯನ್ನು ಹಾಗೂ ಉಳಿದ 5 ಕೆಜಿ ಅಕ್ಕಿಗೆ ಬದಲಾಗಿ 170 ರೂ. ಹಣವನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಶುರುವಾಗುತ್ತಿದೆ. ಎಲ್ಲರ ಪಡಿತರ ಚೀಟಿದಾರರ ಖಾತೆಗೆ ಹಣ ಹೋಗುತ್ತದೆ. ಶೇ.90% ಅಕೌಂಟ್ ಇದ್ದಾವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆ ಮಾಡಲಾಗುತ್ತದೆ. ಇನ್ನು ಅಕ್ಕಿ ಸಿಕ್ಕ ಬಳಿಕ ಅಕ್ಕಿ ಕೊಡುತ್ತೇವೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ರಾಜ್ಯದ ದಕ್ಷಿಣದಲ್ಲಿ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಿಪೇಯಿ!
ಪ್ರಾದೇಶಿಕ ವಿಭಾಗವಾರು ಆಹಾರ ಪದ್ದತಿಯಂತೆ ಧಾನ್ಯ ವಿತರಣೆ: ಇನ್ನು ರಾಜ್ಯಕ್ಕೆ ಎಂಎಸ್‌ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಅಕ್ಕಿಯ ಜೊತೆಗೆ ಆಯಾ ಪ್ರಾದೇಶಿಕ ವಿಭಾಗವಾರು ಆಹಾರ ಪದ್ದತಿಗೆ ಅನುಕೂಲ ಆಗುವಂತೆ 2 ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ. ಉಳಿದಂತೆ 8 ಕೆ.ಜಿ. ಅಕ್ಕಿಯನ್ನು ಕೊಡುತ್ತೇವೆ. ಮಾತು ಕೊಟ್ಟಂತೆ ಜುಲೈ 1 ರಿಂದ ಯೋಜನೆ ಜಾರಿ ಆಗುತ್ತದೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ. ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ, ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ಹೇಳಿದರು.
ಹಣದ ಬದಲು ಅಕ್ಕಿಯನ್ನೇ ಕೊಡಿ ಎಂದ ಬಳ್ಳಾರಿ ಜನತೆ: ಬಳ್ಳಾರಿಯಲ್ಲಿ ಅಕ್ಕಿ ಬೇಕಾ ಹಣ ಬೇಕಾ.. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಬಹುತೇಕ ಜನರು ಅಕ್ಕಿ ಕೊಟ್ರೇನೆ ಒಳ್ಳೆಯದು ಎನ್ನುತ್ತಿದ್ದಾರೆ. ಅಕ್ಕಿ ದುರ್ಬಳಕೆ ಆಗೋದು ಕಡಿಮೆ ಹಣ ದುರ್ಬಳಕೆಯಾಗೋ ಸಾದ್ಯತೆ ಹೆಚ್ಚು ಎನ್ನುವುದು ಬಳ್ಳಾರಿ ಜನರ ಅಭಿಪ್ರಾಯವಾಗಿದೆ. ಹಣ ಹಾಕೋದಾದ್ರೇ ಅಕೌಂಟ್ ನಂಬರ್ ಬೇಕು. ಅದಕ್ಕೆ ಆಧಾರ್ ಲಿಂಕ್ ಸೇರಿದಂತೆ ವಿವಿಧ ರೀತಿಯ ತಾಂತ್ರಿಕ ತೊಂದರೆ ಎದುರಾಗ್ತದೆ.. ಹೀಗಾಗಿ ವಿಳಂಬವಾಗೋ ಸಾಧ್ಯತೆ ಹೆಚ್ಚು. ಆದ್ರೇ ಅಕ್ಕಿ ಕೊಡೋದಾದ್ರೇ ಯಾವುದೇ ಸಮಸ್ಯೆ ಇರೋದಿಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಅಕ್ಕಿ ಸಕಾಲಕ್ಕೆ ಸಿಗದೇ ಇದ್ರೇ ಏನು ಮಾಡೋದು ಹಣ ಕೊಡಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಅಕ್ಕಿ Vs ಹಣ ಕಿತ್ತಾಟ!
ಹಣ ಕೊಡುವುದು ಸ್ವಾಗತಾರ್ಹ ಎಂದ ಚಿತ್ರದುರ್ಗ ಜನತೆ: ನೂತನ ಸರ್ಕಾರ 5 ಕೆಜಿ ಅಕ್ಕಿ ಬದಲಿಗೆ ನಾಳೆಯಿಂದ ಹಣ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೋಟೆನಾಡಿನಲ್ಲಿ ಸ್ಥಳೀಯರ ಜೊತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾತನಾಡಿದ್ದು, ಈಗ ಸರ್ಕಾರ ಅಕ್ಕಿ ಬದಲಿಗೆ ಹಣ ಕೊಡ್ತಿರೋದು ಸದ್ಯಕ್ಕೆ ಸರಿಯಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಅಕ್ಕಿಯನ್ನೇ ಕೊಟ್ರೆ ಒಳ್ಳೆಯದು. ಸರ್ಕಾರ ಕೊಡುವ ಹಣದಿಂದ ತರಕಾರಿ, ಬೆಳೆಕಾಳುಗಳನ್ನು ಖರೀದಿ ಮಾಡ್ತೀವಿ. ಸದ್ಯಕ್ಕೆ ಮೂರ್ನಾಲ್ಕು ತಿಂಗಳು ಈ ವ್ಯವಸ್ಥೆ ಸಾಕು ಅನಿಸುತ್ತದೆ. ಮನೆಯಲ್ಲಿ ಐದಾರು ಮಂದಿ ಇದ್ರೆ 500ಕ್ಕೂ ಅಧಿಕ ಹಣ ಬರುತ್ತದೆ. ಅದ್ರಿಂದ ಎಣ್ಣೆ, ಕಾಳುಗಳಿ ಇನ್ನಿತರ ವಸ್ತುಗಳ ಖರೀದಿ ಮಾಡ್ತೀವಿ. ಆದ್ರೆ 10 ಕೆಜಿ ಅಕ್ಕಿ ಕೊಡೋದು ಅದಕ್ಕಿಂತ ಒಳ್ಳೆಯ ನಿರ್ಧಾರ ಎಂದು ಹೇಳಿದರು.