ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ: ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ

Published : Jul 21, 2025, 08:47 AM IST
children

ಸಾರಾಂಶ

ರಾಜ್ಯದಲ್ಲಿ ಮಕ್ಕಳ ಪೌಷ್ಟಿಕತೆ ಬಗ್ಗೆ ಆತಂಕ ಮೂಡಿದ್ದು, ರಾಜ್ಯ ಸರ್ಕಾರ ಸಮೀಕ್ಷೆಯಂತೆ 2024-25ರಲ್ಲಿ 1.10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಗಿರೀಶ್‌ ಗರಗ

ಬೆಂಗಳೂರು (ಜು.21): ರಾಜ್ಯದಲ್ಲಿ ಮಕ್ಕಳ ಪೌಷ್ಟಿಕತೆ ಬಗ್ಗೆ ಆತಂಕ ಮೂಡಿದ್ದು, ರಾಜ್ಯ ಸರ್ಕಾರ ಸಮೀಕ್ಷೆಯಂತೆ 2024-25ರಲ್ಲಿ 1.10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ಶಾಲೆಗಳಲ್ಲಿ ಬಿಸಿಯೂಟ, ಮೊಟ್ಟೆ ವಿತರಣೆ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ, ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳ ಪೌಷ್ಟಿಕತೆಗೆ ಸಂಬಂಧಿಸಿ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಎಲ್ಲ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಅದರಲ್ಲಿ ಕಳೆದ ಸಾಲಿನಲ್ಲಿ 1.10 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.

ಅದರಲ್ಲೂ ಉತ್ತರ ಕರ್ನಾಟಕದ ವಿಜಯನಗರ, ರಾಯಚೂರು, ಬೀದರ್‌, ಬಳ್ಳಾರಿಯಂಥ ಜಿಲ್ಲೆಗಳಲ್ಲೇ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. 9,526 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ: ಮಕ್ಕಳ ಪೌಷ್ಟಿಕಮಟ್ಟ ಪತ್ತೆಗಾಗಿ 2024-25ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 30.87 ಲಕ್ಷ ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಅದರಲ್ಲಿ ಮಕ್ಕಳ ವಯಸ್ಸು, ತೂಕದ ಆಧಾರದ ಮೇಲೆ ಪೌಷ್ಟಿಕಮಟ್ಟವನ್ನು ಅಳತೆ ಮಾಡಲಾಗಿದೆ. ಅದರಲ್ಲಿ 1.01 ಲಕ್ಷ ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಉಳಿದಂತೆ 9,526 ಮಕ್ಕಳು ತೀವ್ರ ಅಪೌಷ್ಟಿಕತೆಗೆ ತುತ್ತಾಗಿರುವ ಅಂಶ ಪತ್ತೆಯಾಗಿದೆ.

ವಿಜಯನಗರದಲ್ಲಿ ಅತಿಹೆಚ್ಚು: ಅಪೌಷ್ಟಿಕ ಮಕ್ಕಳ ಪೈಕಿ ವಿಜಯನಗರ ಜಿಲ್ಲೆಯಲ್ಲೇ ಅತಿಹೆಚ್ಚಿನ ಮಕ್ಕಳು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 97,947 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರಲ್ಲಿ 5,413 ಸಾಧಾರಣ (ಶೇ. 5.53) ಮತ್ತು 1,184 (ಶೇ. 21) ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಉಳಿದಂತೆ ಬೀದರ್‌ನಲ್ಲಿ 1.13 ಲಕ್ಷ ಮಕ್ಕಳು ಪರೀಕ್ಷೆಗೊಳಗಾಗಿದ್ದು, 6,369 (ಶೇ. 5.6) ಸಾಧಾರಣ ಅಪೌಷ್ಟಿಕತೆ, 838 (ಶೇ. 0.74) ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ಇನ್ನು, ಪೌಷ್ಟಿಕ ಮಕ್ಕಳಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಿದ್ದು, ದಕ್ಷಿಣ ಕನ್ನಡದಲ್ಲಿ 97,004 ಮಕ್ಕಳಲ್ಲಿ 38 (ಶೇ. 0.04) ತೀವ್ರ ಮತ್ತು 331 (ಶೇ. 0.95) ಸಾಧಾರಣ ಅಪೌಷ್ಟಿಕತೆ ಹಾಗೂ ಉತ್ತರ ಕನ್ನಡದಲ್ಲಿ 66,370 ಮಕ್ಕಳಲ್ಲಿ 60 (ಶೇ. 0.09), 630 (ಶೇ. 0.95) ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪೌಷ್ಟಿಕತೆ ವೃದ್ಧಿಗೆ ಕ್ರಮ: ಮಕ್ಕಳಲ್ಲಿನ ಅಪೌಷ್ಟಿಕತೆ ದೂರ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಅದರಲ್ಲೂ ಸಾಧರಣ ಅಪೌಷ್ಟಿಕ ಮಕ್ಕಳಿಗಿಂತ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವಂತೆಯೂ ಅದರಲ್ಲಿ ಸೂಚಿಸಲಾಗಿದೆ. ಜಿಲ್ಲಾವಾರು ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೇಂದ್ರ ಸರ್ಕಾರದ ಪೋಷಣ್‌ ಟ್ರ್ಯಾಕರ್‌ ಅನ್ನು ವೀಕ್ಷಿಸಿ ಕ್ರಮಗಳನ್ನು ಕೈಗೊಳ್ಳಬೇಕು.

ಮಕ್ಕಳನ್ನು ಮೇಲ್ವಿಚಾರಣೆ ಮಾಡುತ್ತಾ, ಕಾಲಕಾಲಕ್ಕೆ ಅವರನ್ನು ತೂಕ ಮಾಡಿ, ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಜತೆಗೆ ಕೇಂದ್ರಕ್ಕೆ ಕಳುಹಿಸಲಾದ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ, ಸಾಧಾರಣ ಅಪೌಷ್ಟಿಕತೆಗೆ ಬರುವಂತೆ ಹಾಗೂ ಅಂತಿಮವಾಗಿ ಮಕ್ಕಳನ್ನು ಸದೃಢ ಮಾಡುವವರೆಗೆ ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ. ಮಕ್ಕಳು ಅಪೌಷ್ಟಿಕತೆಯಿಂದ ಹೊರಬಂದಿರುವ ಕುರಿತು ಬಾಲ ವಿಕಾಸ ಸಮಿತಿ ಸದಸ್ಯರ ಸಮ್ಮುಖದಲ್ಲಿ ಮಕ್ಕಳ ತೂಕ, ಎತ್ತರವನ್ನು ಮರು ಅಳತೆ ಮಾಡಬೇಕು.

ಈ ಎಲ್ಲದರ ಜತೆಗೆ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ, ಸಂಪೂರ್ಣ ಲಸಿಕೆ ಪಡೆದಿರುವ ಮಕ್ಕಳ ಪ್ರಮಾಣ, ಮಕ್ಕಳ ಮನೆಯಲ್ಲಿ ಸುಧಾರಿತ ಶೌಚಾಲಯ ಸೌಲಭ್ಯವಿದೆಯೇ, ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆಯೇ ಎಂಬುದನ್ನು ಸಮೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅರೋಗ್ಯ ಇಲಾಖೆಗಳು ಸಮನ್ವಯತೆಯಿಂದ ಅನುಷ್ಠಾನಗೊಳಿಸುವಂತೆಯೂ ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್