ಬೆಂಗಳೂರು (ಸೆ.07): ಕೇಂದ್ರ ಸರ್ಕಾರ ಸೆ.14 ರಂದು ನಡೆಸುವ ‘ಹಿಂದಿ ದಿವಸ’ ಆಚರಣೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಭಾಗಗಳಲ್ಲಿಯ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳ ಮುಂದೆ ಪ್ರತಿಭಟಿಸಲು ನಿರ್ಧರಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಹಿಂದಿ ಹೇರಿಕೆಯ ಪರಿಣಾಮ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡಿಗರು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಜೊತೆಗೆ, ಉತ್ತರ ಭಾರತದ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ ಎಂದು ತಿಳಿಸಿದ್ದಾರೆ.
ಮರಾಠಿ ಆಸ್ಮಿತೆ ಎಂದು ನಾಲಿಗೆ ಹರಿಬಿಟ್ಟ ಠಾಕ್ರೆ, ಇವೆಲ್ಲಾ ಚೆನ್ನಾಗಿರಲ್ಲ ಎಂದು ಎಚ್ಚರಿಸಿದ ಕರವೇ
ಪ್ರಸ್ತುತ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಭಾರತದಲ್ಲಿ ಬಹುಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದಲು ಅವಕಾಶವಿದೆ. ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ದೇಶದ ಎಲ್ಲ ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಭಾಷಿಕರು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಧೋರಣೆ ತೊಲಗಬೇಕು ಎಂದು ನಾರಾಯಣಗೌಡ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ದೇಶದಲ್ಲಿ ಭಾಷೆಯ ಹೆಸರಿನಲ್ಲಿ ತಾರತಮ್ಯ ಅಂತ್ಯವಾಗಬೇಕಾದರೆ ಸಂವಿಧಾನದ 343ರಿಂದ 351ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕು. ಜೊತೆಗೆ, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ತೆಗೆದು ಹಾಕಬೇಕು. ಈ ಪರಿಚ್ಛೇದಗಳನ್ನು ತೆಗೆದುಹಾಕದ ಹೊರತು ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವೇ ಇರುವುದಿಲ್ಲ. ಭಾಷೆಯ ಹೆಸರಿನ ತಾರತಮ್ಯಕ್ಕೆ ಅಂತ್ಯವಾಡಬೇಕು ಎಂದು ಆಗ್ರಹಿಸಿದ್ದಾರೆ.