
ಗದಗ (ಫೆ.3): ಗದಗ ಜಿಲ್ಲೆಯ ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಅಡಗಿರುವ ಚಿನ್ನದ ನಿಕ್ಷೇಪದ ಬಗ್ಗೆ ಅಚ್ಚರಿಯ ಮಾಹಿತಿಗಳು ಹೊರಬಂದಿವೆ. ಈ ಭಾಗದಲ್ಲಿ ಕೇವಲ ನಿಸರ್ಗ ಸಂಪತ್ತಷ್ಟೇ ಅಲ್ಲದೆ, ವಿಜಯನಗರ ಸಾಮ್ರಾಜ್ಯ ಹಾಗೂ ಬ್ರಿಟಿಷರ ಕಾಲದಲ್ಲೂ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಎಂಬ ನಿಗೂಢ ಸತ್ಯವನ್ನು ಇತಿಹಾಸ ತಜ್ಞ ಡಾ. ದತ್ತಪ್ರಸನ್ನ ಪಾಟೀಲರು ಬಿಚ್ಚಿಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಗೆ ಇಲ್ಲಿನ ಚಿನ್ನವನ್ನೇ ಬಳಸಲಾಗುತ್ತಿತ್ತು ಎಂಬುದು ಇತಿಹಾಸದ ಉಲ್ಲೇಖಗಳಲ್ಲಿ ದೃಢಪಟ್ಟಿದೆ.
ಪ್ರಾಚೀನ ಕಾಲದಲ್ಲಿ ಇಲ್ಲಿನ ನೀರಿನಲ್ಲಿ ಅದಿರನ್ನು ತೋಯಿಸಿ ಬಂಗಾರ ತೆಗೆಯುವ ವಿಶಿಷ್ಟ ಪದ್ಧತಿ ಜಾರಿಯಲ್ಲಿತ್ತು ಎಂದು ಹೇಳಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಈ ಭಾಗದಲ್ಲಿ ಸಂಶೋಧನೆ ನಡೆಸಿದಾಗ 'ಧಾರವಾಡ ಸಿಸ್ಟ್' ಎಂಬ ಕಲ್ಲಿನಲ್ಲಿ ಚಿನ್ನದ ಅಂಶ ಇರುವುದನ್ನು ಪತ್ತೆಹಚ್ಚಿದ್ದರು. 1804ರಲ್ಲಿಯೇ ಈ ಬಗ್ಗೆ ಸಂಶೋಧನೆಗಳು ಆರಂಭವಾಗಿದ್ದು, ಇತಿಹಾಸಕಾರ ರಾಬರ್ಟ್ ಬ್ರೂಸ್ ಫೂಟ್ ಮೊದಲ ಬಾರಿಗೆ ಇಲ್ಲಿನ ಚಿನ್ನದ ನಿಕ್ಷೇಪವನ್ನು ದೃಢಪಡಿಸಿದ್ದರು.
ಕಪ್ಪತಗುಡ್ಡದ ಚಿನ್ನದ ಅದಿರಿನ ಬಗ್ಗೆ ಮೈಸೂರು ಮಹಾರಾಜರಿಗೂ ಕುತೂಹಲವಿತ್ತು. ಬ್ರಿಟಿಷರ ಕಾರ್ಯವೈಖರಿಯನ್ನು ಗಮನಿಸಿದ ಮಹಾರಾಜರು, ಈ ಅದಿರಿನ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಆದೇಶಿಸಿದ್ದರು. 1905ರ ಸುಮಾರಿಗೆ ಯಾವ ಯಾವ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ದೊರೆಯಬಹುದು ಎಂಬ ಸಂಪೂರ್ಣ ಮಾಹಿತಿ ಲಭ್ಯವಾಯಿತು. ಈ ಅಧ್ಯಯನದ ಫಲವಾಗಿ 13ಕ್ಕೂ ಹೆಚ್ಚು ಕಂಪನಿಗಳು ಈ ಭಾಗದಲ್ಲಿ ಗಣಿಗಾರಿಕೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದವು.
ದಾಖಲೆ ಪ್ರಮಾಣದ ಚಿನ್ನ ಉತ್ಪಾದನೆ
ಒಟ್ಟು 13 ಕಂಪನಿಗಳು ನಡೆಸಿದ ಗಣಿಗಾರಿಕೆಯಲ್ಲಿ ಸುಮಾರು 670 ಕಿಲೋ ಚಿನ್ನ ಉತ್ಪಾದನೆಯಾಗಿತ್ತು ಎಂಬ ಅಧಿಕೃತ ಉಲ್ಲೇಖವಿದೆ. ಧಾರವಾಡ ಮೈನಿಂಗ್ ಕಂಪನಿ, ಮೈಸೂರು ಮತ್ತು ಕಬಲಾಯತ ಗೋಲ್ಡ್ ಮೈನಿಂಗ್ ಕಂಪನಿಗಳು ಇಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದವು. ಸ್ವಾತಂತ್ರ್ಯ ನಂತರವೂ ಈ ಭಾಗದಲ್ಲಿ ಗಣಿಗಾರಿಕೆ ಮುಂದುವರಿದಿದ್ದು, 1990ರ ದಶಕದವರೆಗೂ ಇಲ್ಲಿ ಚಿನ್ನ ತೆಗೆಯಲಾಗುತ್ತಿತ್ತು ಎಂಬುದು ಗಮನಾರ್ಹ ಅಂಶ ಎಂದು ಇತಿಹಾಸ ಸಂಶೋಧಕ ಡಾ. ದತ್ತಪ್ರಸನ್ನ ಪಾಟೀಲರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ