ನಾಳೆ ಬ್ರಿಟನ್‌ ಕನ್ನ​ಡಿ​ಗ​ರು ಭಾರತಕ್ಕೆ; ಲಂಡನ್‌ನಿಂದ ಬೆಂಗ್ಳೂರಿಗೆ ಬರಲಿದೆ ವಿಮಾನ

By Kannadaprabha NewsFirst Published May 10, 2020, 10:36 AM IST
Highlights

ಕೊರೋನಾದಿಂದಾಗಿ ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಅನಿವಾಸಿ ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಸೋಮವಾರ ಮುಂಜಾನೆ 3.30ರ ವೇಳೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬ್ರಿಟನ್‌(ಯುಕೆ)ನಿಂದ ಬರಲಿರುವ ವಿಮಾನದಲ್ಲಿ ಸುಮಾರು 250 ಮಂದಿ ಆಗಮಿಸೋ ನಿರೀಕ್ಷೆ ಇದೆ. 

ದೊಡ್ಡಬಳ್ಳಾಪುರ (ಮೇ. 05):  ಕೊರೋನಾದಿಂದಾಗಿ ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಅನಿವಾಸಿ ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಸೋಮವಾರ ಮುಂಜಾನೆ 3.30ರ ವೇಳೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಬ್ರಿಟನ್‌(ಯುಕೆ)ನಿಂದ ಬರಲಿರುವ ವಿಮಾನದಲ್ಲಿ ಸುಮಾರು 250 ಮಂದಿ ಆಗಮಿಸೋ ನಿರೀಕ್ಷೆ ಇದೆ. ಹೊರದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಏರ್‌ಲಿಫ್ಟ್‌ ಮಾಡುವ ಕಾರ್ಯಾಚರಣೆ ಭಾಗವಾಗಿ ಈ ವಿಮಾನ ಮಾ.7ರ ತಡರಾತ್ರಿಯೇ ಬೆಂಗಳೂರಿನಲ್ಲಿ ಬಂದಿಳಿಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಈ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.

ವಂದೇ ಭಾರತ್‌ ಕಾರ್ಯಾಚರಣೆ: ದುಬೈನಿಂದ ಬಂದವರಿಗೆ ಸೋಂಕು!

ಈ ಕುರಿತು ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಏರ್‌ಇಂಡಿಯಾ ವಿಮಾನ ಮೂಲಕ ಬಂದಿಳಿಯಲಿರುವ ಎಲ್ಲ ಅನಿವಾಸಿ ಭಾರತೀಯರ ಆರೋಗ್ಯ ತಪಾಸಣೆಗೆ ಈಗಾಗಲೇ ಏರ್‌ಪೋರ್ಟಲ್ಲೇ 100 ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಲಾಗಿದ್ದು, ಎಲ್ಲ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ವಿದೇಶಗಳಿಂದ ಬರುವ ಭಾರತೀಯ ಪ್ರಯಾಣಿಕರನ್ನು ಸ್ವಾಗತಿಸಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಸಜ್ಜಾಗಿದ್ದು, ಕ್ವಾರಂಟೈನ್‌ ಕೇಂದ್ರಗಳ ಸುತ್ತ ಭದ್ರತೆ ಕಲ್ಪಿಸಲಾಗಿದೆ.

ಕ್ವಾರಂಟೈನ್‌ಗಾಗಿ ಬೆಂಗಳೂರು ನಗರದ ಹೋಟೆಲ್‌ಗಳ ಸುಮಾರು 6500 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ಹೊರವಲಯದ ರೆಸಾರ್ಟ್‌, ಹೋಟೆಲ್‌ಗಳು ಸೇರಿದಂತೆ 365ಕಟ್ಟಡಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹೋಟೆಲ್‌ಗೆ ಒಬ್ಬ ಅಧಿಕಾರಿಯನ್ನು ಮೇಲ್ವಿಚಾರಣೆಗಾಗಿ ನೇಮಿಸಲಾಗಿದೆ ಎಂದರು.

ನೋಡಲ್‌ ಅಧಿಕಾರಿ, ಹೆಲ್ಪ್‌ ಡೆಸ್ಕ್‌: ಅನಿವಾಸಿ ಭಾರತೀಯರ ಮೇಲ್ವಿಚಾರಣೆಗೆ ಈಗಾಗಲೇ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಕ್ವಾರಂಟೈನ್‌ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ಹೆಲ್ಪ್‌ ಡೆಸ್ಕ್‌ ಆಗಿ ಕಾರ್ಯನಿರ್ವಹಿಸಲು ತಂಡ ರಚಿಸಲಾಗಿದ್ದು, ಈ ತಂಡ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಅಗತ್ಯ ಮೇಲ್ವಿಚಾರಣೆ ನಡೆಸಲಿದೆ ಎಂದರು.

ಎಲ್ಲ ಪ್ರಯಾಣಿಕರಿಗೂ ಕ್ವಾರಂಟೈನ್‌: ಬರುವ ಎಲ್ಲ ಪ್ರಯಾಣಿಕರಿಗೆ ಏರ್‌ಪೋರ್ಟಲ್ಲೇ ಆರೋಗ್ಯ ತಪಾಸಣೆ ನಡೆಯಲಿದೆ. ಕೋವಿಡ್‌-19 ಸೋಂಕು ಲಕ್ಷಣಗಳು ಕಂಡು ಬರುವ ವ್ಯಕ್ತಿಗಳನ್ನು ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗುವುದು. ಉಳಿದಂತೆ ಪ್ರಯಾಣಿಕರನ್ನು ಎ, ಬಿ, ಸಿ ಮತ್ತು ಡಿ ಕೆಟಗರಿ(ಎ-ಸೋಂಕಿತರು, ಬಿ- 60 ವರ್ಷ ಮೇಲ್ಪಟ್ಟವರು, ಸಿ-35ರಿಂದ 60 ವರ್ಷದ ನಡುವಿನವರು, ಡಿ -35ಕ್ಕಿಂತ ಕೆಳಗಿನವರು) ಯಲ್ಲಿ ಪ್ರತ್ಯೇಕಿಸಿ ಕ್ವಾರಂಟೈನ್‌ ಮಾಡಲಾಗುವುದು.

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

- ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಕ್ವಾರಂಟೈನ್‌

- ಕ್ವಾರಂಟೈನ್‌ಗಾಗಿ ಬೆಂಗಳೂರಲ್ಲಿ 6500 ಕೊಠಡಿ, ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 365 ಕಟ್ಟಡ ನಿಗದಿ

- ಎನ್‌ಆರ್‌ಐಗಳ ವಯಸ್ಸಿಗನುಗುಣವಾಗಿ ಎ,ಬಿ,ಸಿ,ಡಿ ಕೆಟಗರಿ ಎಂದು ವಿಂಗಡಣೆ, ಪ್ರತ್ಯೇಕ ಕ್ವಾರಂಟೈನ್‌

- ಸೋಂಕಿನ ಲಕ್ಷಣಗಳಿದ್ದರೆ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಥವಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

click me!