
ಬೆಂಗಳೂರು(ಮೇ.10): ರಾಜ್ಯದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಗಳ ಚಿಕಿತ್ಸೆಗೆ ಸರ್ಕಾರ ಮಾಡುತ್ತಿರುವ ವೆಚ್ಚ ಎಷ್ಟುಗೊತ್ತಾ? ಪ್ರತಿ ಸೋಂಕಿತ ವ್ಯಕ್ತಿಗೆ ಸರಾಸರಿ ಮೂರೂವರೆ ಲಕ್ಷ ರು.ವರೆಗೂ ಅಂದಾಜು ಚಿಕಿತ್ಸಾ ವೆಚ್ಚ ತಗಲುತ್ತಿದೆ. ಆಶ್ಚರ್ಯವಾದರೂ ಇದು ನಿಜ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೇ 8ರ ಗುರುವಾರದವರೆಗೆ ಒಟ್ಟು 136 ಕೋವಿಡ್ 19 ವೈರಾಣು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಅಗತ್ಯ ವೈದ್ಯಕೀಯ ಉಪಕರಣಗಳು, ಔಷಧ ಖರೀದಿ, ಕಟ್ಟಡ ನಿರ್ವಹಣೆ ಸೇರಿದಂತೆ ಇವರ ಚಿಕಿತ್ಸೆಗೆ ಇದುವರೆಗೂ ತಗುಲಿರುವ ವೆಚ್ಚ 4.74 ಕೋಟಿ ರು.ಗಳು. ಈ ಪ್ರಕಾರ ಪ್ರತಿ ವ್ಯಕ್ತಿಗೆ ಸರಾಸರಿ 3,48,845 ಲಕ್ಷ ರು. ವೆಚ್ಚ ತಗಲುತ್ತದೆ ಎಂದು ಇಲ್ಲಿನ ರೋಗಿಗಳ ಚಿಕಿತ್ಸಾ ಜವಾಬ್ದಾರಿ ನಿರ್ವಹಿಸುತ್ತಿರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ (ಬಿಎಂಸಿ) ಸರ್ಕಾರಕ್ಕೆ ಅಂದಾಜು ಲೆಕ್ಕಾಚಾರದ ಮಾಹಿತಿ ನೀಡಿದೆ.
ಸರ್ಕಾರಿ ಆಸ್ಪತ್ರೆಯಲ್ಲೇ ಪ್ರತಿ ವ್ಯಕ್ತಿಗೆ ಸರಾಸರಿ 3.48 ಲಕ್ಷ ರು. ವೆಚ್ಚವಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ವೆಚ್ಚ ಇನ್ನಷ್ಟುದುಬಾರಿಯಾಗಿಯೇ ಇರುತ್ತದೆ. ಬೆಂಗಳೂರಿನ 17 ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಸೇರಿದಂತೆ ರಾಜ್ಯದಲ್ಲಿ ಹಲವು ಆಸ್ಪತ್ರೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಅನುಮತಿ ಪಡೆದಿವೆ.
ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಘಟಕದಲ್ಲಿ (ಟ್ರಾಮಾ ಅಂಡ್ ಎಮರ್ಜೆನ್ಸಿ ಕೇರ್ ಸೆಂಟರ್) ಬೆಂಗಳೂರಿನ ಬಹುಪಾಲು ಕೊರೋನಾ ಸೋಂಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ (ಬಿಎಂಸಿ) ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರ ಬಿಎಂಸಿ ಮಾದರಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇತರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದಲೂ ವೆಚ್ಚದ ಕುರಿತು ವರದಿ ಕೇಳಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರದ ವರೆಗೆ ಚಿಕಿತ್ಸೆ ನೀಡಲಾಗಿರುವ 136 ಕೋವಿಡ್ ರೋಗಿಗಳಿಗೆ ಇದುವರೆಗೆ ಒಟ್ಟು 4.74 ಕೋಟಿ ರು. ವೆಚ್ಚವಾಗಿದೆ. ಈ ಮೊತ್ತವನ್ನು ಪ್ರತಿ ರೋಗಿಗೆ ಖರ್ಚಾಗಿರುವ ಸರಾಸರಿ ಅಂದಾಜು ಲೆಕ್ಕ ಮಾಡಿದಾಗ 3.48 ಲಕ್ಷ ರು. ತಗುಲುತ್ತದೆ ಎಂದು ಬಿಎಂಸಿ ಮಾಹಿತಿ ನೀಡಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸೆಂಟ್‌ಜಾನ್ ಕಾಲೇಜು ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿನ ವೆಚ್ಚದ ಬಗ್ಗೆಯೂ ಮಾಹಿತಿ ಕೇಳಿದ್ದೇವೆ.
- ಎಸ್.ಸುರೇಶ್‌ಕುಮಾರ್, ಕೋವಿಡ್ ಉಸ್ತುವಾರಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ