ಗಡಿ ವಿವಾದ: ಮರಾಠಿಗರ ಪುಂಡಾಟಕ್ಕೆ ಕನ್ನಡಿಗರ ಆಕ್ರೋಶ..!

By Kannadaprabha News  |  First Published Nov 26, 2022, 9:31 AM IST

ಕಲಬುರಗಿ ಬಳಿ ಮಹಾರಾಷ್ಟ್ರ ಬಸ್ಸಿಗೆ ಮಸಿ, ಚಾಮರಾಜನಗರದಲ್ಲಿ ಮಹಾ ಸಿಎಂ ಚಿತ್ರಕ್ಕೆ ಬೆಂಕಿ 


ಬೆಳಗಾವಿ/ಬೆಂಗಳೂರು(ನ.26):  ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯ ದೌಂಡ ಹಾಗೂ ಕೊಲ್ಲಾಪುರದಲ್ಲಿ ಅಖಿಲ ಭಾರತ ಮರಾಠಾ ಸಂಘ ಹಾಗೂ ಶಿವಸೇನೆಯ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಕಪ್ಪು ಮಸಿ ಬಳಿದು ಪುಂಡಾಟ ಮೆರೆದಿದ್ದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಜಕೀಯ ಪಕ್ಷಗಳ ನಾಯಕರು, ಕನ್ನಡಪರ ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಸಾರಿಗೆ ಬಸ್ಸಿಗೆ ಕಪ್ಪು ಮಸಿ ಬಳಿದು, ‘ಬೆಳಗಾವಿ ನಮ್ಮದು’ ಎನ್ನುವ ಭಿತ್ತಿ ಪತ್ರಗಳನ್ನು ಅಂಟಿಸಿ, ಪ್ರತಿಭಟನೆ ನಡೆಸಿದರು.

Latest Videos

undefined

ಗಡಿ ವಿವಾದ ಕೆದಕಿದ್ದ ಮಹಾ ನಾಯಕರಿಗೆ ಬೊಮ್ಮಾಯಿ ಖಡಕ್‌ ಎಚ್ಚರಿಕೆ

ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ತೆರಳಿದ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ, ಬೆಳಗಾವಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಬೆಳಗಾವಿ ಗಡಿ ವಿಚಾರದಲ್ಲಿ ಗಡಿಭಾಗದಲ್ಲಿರುವ ರಾಜ್ಯದ ಜನಪ್ರತಿನಿಧಿಗಳು ಮೌನ ನಡೆ ಅನುಸರಿಸುತ್ತಿದ್ದಾರೆ. ಬೆಳಗಾವಿಯಿಂದ ಬೀದರ್‌ವರೆಗೂ ಎಲ್ಲ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗಡಿ ವಿವಾದದ ಬಗ್ಗೆ ಒಂದೇ, ಒಂದು ಪ್ರತಿಕ್ರಿಯೆ ನೀಡಿಲ್ಲ ಎಂದು ಕಿಡಿ ಕಾರಿದರು.
 

click me!