
ಬೆಂಗಳೂರು(ಫೆ.26): ವಾರಗಳ ಹಿಂದೆಯೇ ಯುದ್ಧದ(War) ಮುನ್ಸೂಚನೆ ಇದ್ದು, ಭಾರತಕ್ಕೆ(India) ಹಿಂದಿರುಗುವಂತೆ ಸಲಹೆ ಬಂದರೂ ತಮ್ಮ ಭವಿಷ್ಯದ ದೃಷ್ಟಿಯಿಂದ ಹಲವು ಕನ್ನಡಿಗ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿಯೇ ಉಳಿದುಕೊಂಡು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಕ್ರೇನ್‌ನಲ್ಲಿ(Ukraine) ಸಿಲುಕಿರುವ ಕನ್ನಡಿಗರ ಪೈಕಿ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು(Medical students). ಅವರೆಲ್ಲರಿಗೂ ಕಳೆದ ವಾರವೇ ಯುದ್ಧದ ಮಾಹಿತಿಯನ್ನು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ(Indian Embassy) ಮತ್ತು ವಿಶ್ವವಿದ್ಯಾಲಯಗಳು(Universities) ನೀಡಿವೆ. ಆದರೆ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಅಲ್ಲಿಂದ ಹೊರಟು ಕರ್ನಾಟಕ(Karnataka) ಸೇರಿದ್ದಾರೆ. ಉಕ್ರೇನ್‌ನ ತಾತ್ಕಾಲಿಕ ನಿವಾಸಿ ಕಾರ್ಡ್ ಲಭ್ಯವಾಗದ ವಿದ್ಯಾರ್ಥಿಗಳು, ವಿವಿಗಳಿಂದ ಮೂಲ ದಾಖಲಾತಿ ಸಿಗದ ವಿದ್ಯಾರ್ಥಿಗಳು, ಜತೆಗೆ ಆನ್‌ಲೈನ್ ಪಾಠ ಇರಲ್ಲ ಎಂದು ತಿಳಿದ ಬಹುತೇಕ ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಳ್ಳುವ ನಿರ್ಧರಿಸಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿಸಿದೆ.
Russia Ukraine Crisis: ದಿನಸಿ, ಔಷಧಿ, ನಗದು ಹಣಕ್ಕಾಗಿ ಉಕ್ರೇನ್ ಜನರ ಪರದಾಟ
ಈ ಕುರಿತು ಮಾತನಾಡಿದ ಉಕ್ರೇನ್‌ನಲ್ಲಿರುವ ಬೆಂಗಳೂರು(Bengaluru) ಮೂಲದ ವೈದ್ಯಕೀಯ ವಿದ್ಯಾರ್ಥಿನಿ ರುಚಿರಾ, ‘ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಕ್ರೇನ್‌ನ ತಾತ್ಕಾಲಿಕ ನಿವಾಸಿ ಕಾರ್ಡ್ ಸಿಕ್ಕಿಲ್ಲ. ಒಮ್ಮೆ ಭಾರತಕ್ಕೆ ಮರಳಿದರೆ ಅಲ್ಲಿಂದ ಹಿಂದಿರುಗುವುದಕ್ಕೆ ಹೊಸದಾಗಿ ವೀಸಾ ಮಾಡಿಸಬೇಕು. ಅದಕ್ಕಾಗಿ ಅಗತ್ಯವಿರುವ ದಾಖಲೆಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದು, ಕೋರ್ಸ್ ಮುಗಿಯುವವರೆಗೂ ಅವರು ಮರಳಿಸುವುದಿಲ್ಲ. ಬೇಕೇ ಬೇಕು ಎಂದರೆ ಕೋರ್ಸ್ ಕೈಬಿಡಬೇಕಾಗುತ್ತದೆ. ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಇಲ್ಲಿಯೇ ಉಳಿದುಕೊಂಡಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಆನ್‌ಲೈನ್ ಕ್ಲಾಸ್ ಇಲ್ಲ ಎಂದರು:
ಯುದ್ಧ ಹಿನ್ನೆಲೆಯಲ್ಲಿ ದೇಶಕ್ಕೆ ಹೋಗುತ್ತೇವೆ. ಆನ್‌ಲೈನ್ ತರಗತಿ ಆರಂಭಿಸಿ ಎಂದು ಉಕ್ರೇನ್‌ನ ಹಲವು ವಿವಿಗಳಿಗೆ ಭಾರತೀಯರೂ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಮನವಿ ಮಾಡಿದ್ದೇವು. ಆನ್‌ಲೈನ್ ತರಗತಿ ಆರಂಭಿಸಲ್ಲ ಎಂದು ವಿವಿಗಳು ಹೇಳಿದವು. ಬುಧವಾರ ಸಂಜೆವರೆಗೂ ತರಗತಿ ನಡೆಸಿದ್ದಾರೆ. ಒಂದು ವೇಳೆ ಭಾರತಕ್ಕೆ ಮರಳಿದ್ದರೆ ಶೈಕ್ಷಣಿಕ ವರ್ಷವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು ಎಂದು ಬೆಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ಸುಜಯ್ ತಿಳಿಸಿದರು.
ನಮ್ಮನ್ನು ಕರೆದುಕೊಂಡು ಹೋಗಿ:
ದೊಡ್ಡ ಮಟ್ಟದಲ್ಲಿ ಯುದ್ಧವಾಗುವುದಿಲ್ಲ, ಸ್ವಲ್ವ ದಿನ ಇರುತ್ತದೆ ಅಷ್ಟೆಎಂದುಕೊಂಡೆವು. ಆದರೆ, ಈಗ ಹಾಸ್ಟೆಲ್‌ನ ಬಂಕರ್‌ಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನಮ್ಮನ್ನು ಭಾರತಕ್ಕೆ ಕರೆದೊಯ್ಯಿರಿ ಎಂದಿದ್ದಾರೆ ವಿದ್ಯಾರ್ಥಿನಿ ಐಶ್ವರ್ಯ.
ಮುಂದೆ ಗೊತ್ತಿಲ್ಲ:
ಉಕ್ರೇನ್‌ನಲ್ಲಿರುವ ಕನ್ನಡಿಗರ ಪೈಕಿ 100ಕ್ಕೂ ಹೆಚ್ಚು ಮಂದಿ ರಾಜಧಾನಿ ಬೆಂಗಳೂರಿನವರಿದ್ದು, ಸದ್ಯ ಸುರಕ್ಷಿತವಾಗಿದ್ದೇವೆ. ಮುಂದಿನ ಪರಿಸ್ಥಿತಿ ಗೊತ್ತಿಲ್ಲ. ಶೀಘ್ರ ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ.
ಶುಕ್ರವಾರದ ಅಂತ್ಯಕ್ಕೆ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸಹಾಯವಾಣಿಗೆ ಬೆಂಗಳೂರಿನಿಂದ 115 ಮಂದಿ ಕರೆ ಮಾಡಿ ತಮ್ಮವರು ಉಕ್ರೇನ್‌ದಲ್ಲಿ ಸಿಲುಕಿಕೊಂಡಿರುವುದಾಗಿ ನೋಂದಾಯಿಸಿದ್ದಾರೆ. ವಾಯುದಾಳಿ ಹಿನ್ನೆಲೆ ಬಂಕರ್‌ಗಳಲ್ಲಿ ಸುರಕ್ಷಿತವಾಗಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗೊತ್ತಿಲ್ಲ. ಶೀಘ್ರವೇ ನಮ್ಮನ್ನು ಭಾರತಕ್ಕೆ ಕರೆತರುವ ವ್ಯವಸ್ಥೆಯಾಗಬೇಕು ಎಂದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಬಾಂಬ್ ಸದ್ದಿನಿಂದ ಗಾಬರಿಗೊಂಡು ಕಣ್ಣೀರು ಹಾಕುತ್ತಾ ತಂದೆ ತಾಯಿಯರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಸ್ಥಳೀಯ ಪೋಷಕರಿಗೆ ಧೈರ್ಯ ತುಂಬಿದ್ದಾರೆ.
Russia Ukraine Crisis: ಬಾಲ್ಟಿಕ್ ದೇಶದಲ್ಲೂ ಯುದ್ಧ ಭೀತಿ!
ವಿದ್ಯಾಭ್ಯಾಸ ಮುಗಿಸಿಕೊಂಡೇ ಬರುತ್ತೇವೆ:
ಹಲವು ವಿದ್ಯಾರ್ಥಿಗಳು, ನಮಗೆ ತೊಂದರೆ ಇಲ್ಲ, ಸುರಕ್ಷಿತವಾಗಿದ್ದೇವೆ ಎಂದು ಪೋಷಕರಿಗೆ ತಿಳಿಸಿದ್ದಾರೆ. ಉಕ್ರೇನ್‌ನ ಕೆಲವು ಭಾಗದಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ಹಾಸ್ಟೆಲ್‌ನಲ್ಲಿರುವವರನ್ನು ಕೆಳಮಹಡಿಯ ಬಂಕರ್‌ಗಳಿಗೆ ಸ್ಥಳಾಂತರಿಸಿ ಆಹಾರ ಪೂರೈಸಿದ್ದಾರೆ. ಪ್ರತಿ ನಾಲ್ಕು ಗಂಟೆಗೊಮ್ಮೆ ಕರ್ನಾಟಕಕ್ಕೆ ಕರೆ ಮಾಡಿ ಪೋಷಕರೊಂದಿಗೆ ಮಾತನಾಡುತ್ತಿದ್ದೇವೆ. ಯುದ್ಧ ಮುಗಿದು ವಾತಾವರಣ ತಿಳಿಯಾದರೆ ತರಗತಿಗಳು ಆರಂಭವಾಗುತ್ತವೆ. ವಿದ್ಯಾಭ್ಯಾಸ(Study) ಮುಗಿಸಿಕೊಂಡೇ ಬರುತ್ತೇವೆ ಎಂದು ವೈದ್ಯಕೀಯ ವಿದ್ಯಾರ್ಥಿನಿ ಗಾಯತ್ರಿ ಖನ್ನಾ ತಿಳಿಸಿದ್ದಾರೆ.
ಬಾಂಬ್ ದಾಳಿ ಸದ್ದು ಕೇಳಿ ಭಯ
‘ರಷ್ಯಾದಿಂದ(Russia) ನಡೆದ ಬಾಂಬ್ ದಾಳಿ ಹಿನ್ನೆಲೆ ನಮ್ಮನ್ನು ಅಪಾರ್ಟ್‌ಮೆಂಟ್‌ಗಳಿಂದ ಮೆಟ್ರೋ ನಿಲ್ದಾಣದ ಶೆಲ್ಟರ್‌ಗಳಿಗೆ ಸ್ಥಳಾಂತರಗೊಳಿಸಲಾಗಿದೆ. ನಾವು ಇರುವ ಸ್ಥಳದಿಂದ ರಷ್ಯಾ ಗಡಿ 40 ಕಿ.ಮೀ. ದೂರವಿದೆ. ಆಗಾಗ ಬಾಂಬ್ ಸದ್ದು ಕೇಳಿ ಸಾಕಷ್ಟು ಭಯವಾಗುತ್ತದೆ. ರಾಜ್ಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದೇವೆ. ಶೀಘ್ರವೇ ಭಾರತಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ ಎಂಬ ನಂಬಿಕೆಯಲ್ಲಿದ್ದೇವೆ ಎನ್ನುತ್ತಾರೆ ಉಕ್ರೇನ್‌ನ ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ಸುಂಕದಕಟ್ಟೆಮೂಲದ ಆರ್.ವಾರುಣಿ ಉಪಾಧ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ