Mandya: 30 ವರ್ಷ ಬಳಿಕ ಮಂಡ್ಯದಲ್ಲಿ ಮರುಕಳಿಸಲಿದೆ ಕನ್ನಡ ನುಡಿ ಸಡಗರ

By Sathish Kumar KHFirst Published Jan 8, 2023, 11:25 PM IST
Highlights

- 1994ರಲ್ಲಿ ಸಕ್ಕರೆ ನಾಡಿನಲ್ಲಿ ನಡೆದಿದ್ದ ಅಕ್ಷರ ಜಾತ್ರೆ
- 50 ವರ್ಷಗಳಲ್ಲಿ ಮೂರನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ,

ಮಂಡ್ಯ (ಜ.08): ಮೂವತ್ತು ವರ್ಷದ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಭಾಗ್ಯ ಇದೀಗ ಸಕ್ಕರೆ ನಾಡು ಮಂಡ್ಯಕ್ಕೆ ಒಲಿದು ಬಂದಿದೆ. ಅಪ್ಪಟ ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ಕನ್ನಡ ಕಹಳೆ ಮೊಳಗಿಸುವ ನಿರ್ಧಾರ ಮಾಡಿರುವುದು ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಹಾಗೂ ಪುಸ್ತಕ ಪ್ರೇಮಿಗಳಲ್ಲಿ ಹರ್ಷ ಮೂಡಿಸಿದೆ.

ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನದಂದು ಮುಂದಿನ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಕಳೆದುಹೋಗಿರುವ ಸಾಹಿತ್ಯ ಸಮ್ಮೇಳನದ ಗತ ವೈಭವ ಮರಳಿ ಸೃಷ್ಟಿಯಾದಂತಾಗಿದೆ.  ಎಲ್ಲರ ದೃಷ್ಟಿ ಸಕ್ಕರೆ ಜಿಲ್ಲೆಯತ್ತ ನೆಟ್ಟಿದೆ.

1974ಲ್ಲಿ 48ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಥಮ ಬಾರಿಗೆ ಮಂಡ್ಯದಲ್ಲಿ ನಡೆದಿತ್ತು. ಜಯದೇವಿ ತಾಯಿ ಲಿಗಾಡೆ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಕೆ.ಟಿ.ಚಂದು ಜಿಲ್ಲಾ ಸಾಹಿತ್ಯಪರಿಷತ್ ಅಧ್ಯಕ್ಷರಾಗಿದ್ದರು. ಎಂ.ಲಿಂಗಯ್ಯ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಕೆ.ವಿ.ಶಂಕರಗೌಡ ಪೋಷಕರಾಗಿದ್ದರು. 1994ರಲ್ಲಿ ನಡೆದ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯವನ್ನೇ ಅರಸಿ ಬಂದಿತ್ತು. ಆ ಸಮಯದಲ್ಲಿ ಚದುರಂಗ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ನಡೆಸುವ ಸಾರಥ್ಯವನ್ನು ಹಿಡಿದು ತಂದವರು ಅಂದಿನ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷರಾಗಿದ್ದ ಜಿ.ಟಿ.ವೀರಪ್ಪ. ಅಂದು ಜಿ.ಮಾದೇಗೌಡರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರೆ, ಎಸ್.ಎಂ.ಕೃಷ್ಣ ಅವರು ಪ್ರಧಾನ ಪೋಷಕರಾಗಿದ್ದರು. 

ಇದನ್ನೂ ಓದಿ: ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಮಹೇಶ್ ಜೋಷಿ

ಆ ಸಮಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಕ್ಕೆ 42 ಲಕ್ಷ ರು. ಹಣವನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಸಮ್ಮೇಳನಕ್ಕೆ ಖರ್ಚಾದ ಹಣ 22 ಲಕ್ಷ ರು. ಮಾತ್ರ. ಇನ್ನೂ 20 ಲಕ್ಷ ರು. ಹಣವನ್ನು ಉಳಿಸಲಾಗಿತ್ತು. ಅಂದು ಜಿಲ್ಲಾ ಸಾಹಿತ್ಯ ಪರಿಷತ್‌ಗೆ ಒಂದು ಕಚೇರಿ ಇರಲಿಲ್ಲ. ನಗರಸಭೆಯಿಂದ ಉಚಿತವಾಗಿ ದೊರೆತ ನಿವೇಶನದಲ್ಲಿ 6.25 ಲಕ್ಷ ರು. ವೆಚ್ಚದಲ್ಲಿ ಕಚೇರಿ ಕಟ್ಟಡ ನಿರ್ಮಿಸಲಾಯಿತು. ಕಲಾಮಂದಿರ ನಿರ್ಮಾಣಕ್ಕೆ 8.25 ಲಕ್ಷ ರು., ಕುವೆಂಪು ಪ್ರತಿಮೆ ಸ್ಥಾಪನೆಗೆ 4 ಲಕ್ಷ ರು., ಜಾನಪದ ಲೋಕಕ್ಕೆ 1 ಲಕ್ಷ ರು. ನೀಡಲಾಗಿತ್ತು. 

ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ಸಂಭ್ರಮ ನೆಲೆಸಿತ್ತು. ಸಮ್ಮೇಳನದಲ್ಲಿ ಸಿರಿಯೊಡಲು ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದವರಲ್ಲಿ 8,500 ರಸೀದಿ ನೀಡಲಾಗಿತ್ತು. 10 ರಿಂದ 12 ಸಾವಿರ ಜನರು ಸೇರಿದ್ದರು ಎಂದು ಅಂದಿನ ಸಾಹಿತ್ಯ ವೈಭವದ ದಿನಗಳನ್ನು ಮೆಲುಕು ಹಾಕಿದವರು ಪ್ರೊ.ಜಿ.ಟಿ.ವೀರಪ್ಪ.

Mandya: ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯದಿಂದಲೇ ಮುನ್ನುಡಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದಕ್ಕೆ ಮೊದಲು ಮುನ್ನುಡಿ ಬರೆದಿದ್ದೇ ಮಂಡ್ಯ ಜಿಲ್ಲೆ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಮೇತನಹಳ್ಳಿಇ ರಾಮರಾವ್ ಮತ್ತು ಮದ್ದೂರು ತಾಲೂಕು ಪ್ರತಿನಿಧಿ ಕೆ.ಟಿ.ಚಂದು ಅವರು ಸೇರಿ 1970ರಲ್ಲಿ ಮದ್ದೂರಿನಲ್ಲಿ ತೀ.ತಾ.ಶರ್ಮ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲೇ ಮೊಟ್ಟಮೊದಲಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದರು.

click me!