ಕೆನಡಾ ಸಂಸತ್ತಿನ ಅಧಿವೇಶನದಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ ಅವರನ್ನು ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಬರುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಆಹ್ವಾನಿಸಿದ್ದಾರೆ.
ಬೆಂಗಳೂರು (ಮೇ.21): ಕೆನಡಾ ಸಂಸತ್ತಿನ ಅಧಿವೇಶನದಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ ಅವರನ್ನು ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಬರುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಆಹ್ವಾನಿಸಿದ್ದಾರೆ.
ಶುಕ್ರವಾರ ಈ ಕುರಿತು ಚಂದ್ರ ಅವರಿಗೆ ಪತ್ರ ಬರೆದಿರುವ ಜೋಶಿ, ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ನಿಮ್ಮನ್ನು ಅಭಿನಂದಿಸುತ್ತೇನೆ. ಹಾವೇರಿಯಲ್ಲಿ ಮುಂದೆ ಜರುಗಲಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ತಾವು ಮೊದಲ ದಿನದಂದು ಆಗಮಿಸಿ ಸಮಾರಂಭದ ಗೌರವ ಹೆಚ್ಚಿಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.
Haveri: ಕಸಾಪ ವಿಶೇಷ ಸಭೆಯಲ್ಲಿ ಕೋಲಾಹಲ: ಮಹೇಶ್ ಜೋಶಿ ವಿರುದ್ಧ ಮೊಳಗಿದ ಧಿಕ್ಕಾರ
ಅಲ್ಲದೇ, ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ 100 ಜನ ಕನ್ನಡಿಗರು ಸದಸ್ಯರಿರುವಲ್ಲಿ ಹೊರ ದೇಶ ಘಟಕಗಳನ್ನು ಸ್ಥಾಪಿಸಲು ನಿಯಮಗಳನ್ನು ಜಾರಿಗೆ ತರಲಾಗಿದೆ. ಕೆನಡಾ ದೇಶದಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪರಿಷತ್ತಿನ ಘಟಕವನ್ನು ಸ್ಥಾಪಿಸಿ, ಕನ್ನಡದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾವೇರಿ ಸಾಹಿತ್ಯ ಸಮ್ಮೇಳನ ನವೆಂಬರ್‌ಗೆ ಮುಂದೂಡಿಕೆ: ಹಾವೇರಿಯಲ್ಲಿ ಸೆ.23ರಿಂದ 25ರವರೆಗೆ ನಡೆಸಲು ಉದ್ದೇಶಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು, ಸಿರಿಗೆರೆಯ ತರಳಬಾಳು ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಅದ್ದೂರಿ ಶ್ರದ್ಧಾಂಜಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂದೂಡುವಂತೆ ರಾಜ್ಯ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಶಿ ಮನವಿ ಮಾಡಿದ್ದಾರೆ. ಇದರ ಬದಲು ನ.11ರಿಂದ 13ರವರೆಗೆ ಸಮ್ಮೇಳನ ನಡೆಸಲು ಕೋರಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಸಮ್ಮೇಳನ ನಿಗದಿಯಾಗಿರುವ ಅವಧಿಯಲ್ಲಿಯೇ ತರಳಬಾಳು ಮಠದ 20ನೇ ಪೀಠಾಧಿಪತಿಯಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಅದ್ಧೂರಿ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಪಿತೃ ಪಕ್ಷ ಇರಲಿದೆ. ಆದ್ದರಿಂದ ಸಮ್ಮೇಳನವನ್ನು ಮುಂದೂಡುವಂತೆ ಸಿರಿಗೆರೆ ಮಠದ ಸ್ವಾಮೀಜಿಗಳು ಕರೆ ಮಾಡಿ ಮತ್ತು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಮಹೋತ್ಸವದಲ್ಲಿ ಹಾವೇರಿ, ರಾಣೆಬೆನ್ನೂರು, ರಟ್ಟೆಹಳ್ಳಿ, ಹಿರೇಕೆರೂರು ಸೇರಿದಂತೆ ನಾನಾ ಭಾಗಗಳ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನೂ ಆಯೋಜಿಸಿದರೆ, ಶ್ರದ್ಧಾಂಜಲಿ ಸಮಾರಂಭಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ. ಹೀಗಾಗಿ, ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕು ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ, ಮಹೇಶ್ ಜೋಶಿ ಆಕ್ರೋಶ..!
ಜತೆಗೆ ಹಿರಿಯ ವಕೀಲರಾದ ಬಸವರಾಜ ಹುಡೇದಗಡ್ಡಿ, ಹಾವೇರಿಯ ಕನಕ ಗುರುಪೀಠದ ಸ್ವಾಮೀಜಿ ಸೇರಿದಂತೆ ಅನೇಕರು ಸಾಹಿತ್ಯ ಸಮ್ಮೇಳನವನ್ನು ಪಿತೃ ಪಕ್ಷದಲ್ಲಿ ನಡೆಸುವುದು ಬೇಡ. ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯುವ ಸೆ.25ರಂದು ಮಹಾಲಯ ಅಮಾವಾಸ್ಯೆ ಇದೆ. ಅಂದು ಸಾಕಷ್ಟುಮಂದಿ ತಮ್ಮ ಪೂರ್ವಿಕರನ್ನು ಪೂಜಿಸುವ ವಿಶೇಷ ದಿನ. ಆ ದಿನ ಸಮ್ಮೇಳನ ಮಾಡಿದರೆ ಹೆಚ್ಚಿನವರು ಬರಲು ತೊಂದರೆಯಾಗುತ್ತದೆ. ಹೀಗಾಗಿ ಸಮ್ಮೇಳನ ಮುಂದೂಡಬೇಕು ಕೋರಿದ್ದಾರೆ.