ಪ್ರತಿ ವರ್ಷ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸುವ ನಾಡದ್ರೋಹಿ ಎಂಇಎಸ್ ಈ ಬಾರಿಯೂ ಕರಾಳ ದಿನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತಿರುವ ಎಂಇಎಸ್ ಪುಂಡರು ಮತ್ತೆ ಮಹಾರಾಷ್ಟ್ರದ ರಾಜಕಾರಣಿಗಳ ಮನೆ ಬಾಗಿಲು ತಟ್ಟಿದ್ದಾರೆ.
ವರದಿ; ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಅ.29): ದಸರಾ ಉತ್ಸವ ನೋಡಲು ಹೇಗೆ ಮೈಸೂರಿಗೆ ಹೋಗಬೇಕು ಎಂಬ ಮಾತಿದೆಯೋ ಹಾಗೇ ಕನ್ನಡ ರಾಜ್ಯೋತ್ಸವ ನೋಡಬೇಕು ಅಂದ್ರೆ ಗಡಿ ಜಿಲ್ಲೆ ಬೆಳಗಾವಿಗೆ ಬರಲೇಬೇಕು. ಏಕಂದ್ರೆ ಬೆಳಗಾವಿಯಲ್ಲಿ ಅಷ್ಟೊಂದು ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಆದ್ರೆ ಪ್ರತಿ ವರ್ಷ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸುವ ನಾಡದ್ರೋಹಿ ಎಂಇಎಸ್ ಈ ಬಾರಿಯೂ ಕರಾಳ ದಿನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತಿರುವ ಎಂಇಎಸ್ ಪುಂಡರು ಮತ್ತೆ ಮಹಾರಾಷ್ಟ್ರದ ರಾಜಕಾರಣಿಗಳ ಮನೆ ಬಾಗಿಲು ತಟ್ಟಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆ ಎಂಇಎಸ್‌ಗೆ ಬೆನ್ನೆಲುಬಾಗಿ ನಿಂತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದ್ರೆ ಕಳೆದ ಮೂರು ವರ್ಷಗಳಿಂದ ಅದ್ಧೂರಿ ರಾಜ್ಯೋತ್ಸವ ಆಚರಿಸಲು ಗಡಿ ಕನ್ನಡಿಗರಿಗೆ ಆಗಿಲ್ಲ. ಕೋವಿಡ್ ಹಿನ್ನೆಲೆ ಎರಡು ವರ್ಷಗಳ ಕಾಲ ಅದ್ಧೂರಿ ರಾಜ್ಯೋತ್ಸವಕ್ಕೆ ಬ್ರೇಕ್ ಬಿದ್ದಿತ್ತು.
ಇದಾದ ಬಳಿಕ ಕಳೆದ ವರ್ಷ ಅದ್ಧೂರಿ ರಾಜ್ಯೋತ್ಸವ ಮಾಡಬೇಕೆಂದು ಕನ್ನಡ ಸಂಘಟನೆಗಳು ಪ್ಲ್ಯಾನ್ ಮಾಡಿಕೊಂಡಿದ್ದವು. ಆದರೆ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆ ಸರಳವಾಗಿ ಯಾವುದೇ ಆಡಂಬರ ಇಲ್ಲದೇ ಕಳೆದ ವರ್ಷ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿತ್ತು. ಸದ್ಯ ಈ ಬಾರಿಯ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ಕನ್ನಡಪರ ಸಂಘಟನೆಗಳು ಪ್ಲ್ಯಾನ್ ಮಾಡಿವೆ. ಆದ್ರೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಿ ವರ್ಷ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವ ಎಂಇಎಸ್ ಈ ಬಾರಿಯೂ ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನಕ್ಕೆ ಕರೆ ನೀಡುತ್ತಿರುವ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆ ಬೆಂಬಲಕ್ಕೆ ನಿಂತಿದೆ.
ಕೊಲ್ಲಾಪುರದಲ್ಲಿ ಸಭೆ ಸೇರಿ ನಾಡದ್ರೋಹಿ ಘೋಷಣೆ ಕೂಗಿದ ಪುಂಡರು:
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ ಸಭೆ ಸೇರಿರುವ ಶಿವಸೇನೆ ಪುಂಡರು ನವೆಂಬರ್ ಒಂದರಂದು ಬೆಳಗಾವಿಗೆ ಬಂದು ಎಂಇಎಸ್ ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ನಿನ್ನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಸಭೆ ಸೇರಿದ್ದರು. ಸಭೆ ಬಳಿಕ ಬೆಳಗಾವಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ನವೆಂಬರ್ 1ರಂದು ನಡೆಯುವ ಎಂಇಎಸ್ ಕರಾಳ ದಿನಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿರುವ ವಿಜಯ್ ದೇವಣೆ, 'ಅಕ್ಟೋಬರ್ 31ರಂದು ಶಿವಸೇನೆಯ ಎಲ್ಲಾ ಪದಾಧಿಕಾರಿಗಳು ಕೊಲ್ಲಾಪುರದಲ್ಲಿ ಸೇರುತ್ತೇವೆ. ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜ ಸಮಾಧಿ ಸ್ಥಳದಲ್ಲಿ ಸೇರಿ ಅಲ್ಲಿಂದ ಕೊಲ್ಲಾಪುರ - ಕಾಗಲ್ - ನಿಪ್ಪಾಣಿ - ಸಂಕೇಶ್ವರ ಮಾರ್ಗವಾಗಿ ಬೆಳಗಾವಿಗೆ ಹೋಗುತ್ತೇವೆ. ಅಕ್ಟೋಬರ್ 31ರಂದು ಬೆಳಗಾವಿ ಎಂಇಎಸ್ ಮುಖಂಡರು ಕೊಲ್ಲಾಪುರ ಬರುತ್ತಿದ್ದಾರೆ. ಎಂಇಎಸ್, ಶಿವಸೇನೆ ಕಾರ್ಯಕರ್ತರು ಕೈಯಲ್ಲಿ ಭಗವಾ ಧ್ವಜ, ಮಶಾಲ್ ಹಿಡಿದು ಬೆಳಗಾವಿಗೆ ಹೋಗುತ್ತೇವೆ. ಅಲ್ಲಿ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಇರುವ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡಿ ನವೆಂಬರ್ 1ರಂದು ಕರಾಳ ದಿನ ವೇಳೆ ಎಲ್ಲರೂ ಭಾಗಿಯಾಗ್ತೇವೆ. ಮಹಾರಾಷ್ಟ್ರದ ಕಾಗಲ್ ಬಳಿ ಚೆಕ್‌ಪೋಸ್ಟ್‌ನಲ್ಲಿ ತಡೆದ್ರೆ ಶಿನೋಳಿ ಮಾರ್ಗವಾಗಿ ಬೆಳಗಾವಿಗೆ ಹೋಗ್ತೀವಿ. ಎಂಇಎಸ್ ಕರಾಳ ದಿನ ರ‌್ಯಾಲಿಯಲ್ಲಿ ನಾವು ಭಾಗಿಯಾಗ್ತೇವೆ' ಎಂದು ತಿಳಿಸಿದ್ದಾರೆ.
'ಎಂಇಎಸ್ ನಿಷೇಧಿಸಿ, ಕರಾಳ ದಿನಾಚರಣೆಗೆ ಅವಕಾಶ ನೀಡಬೇಡಿ:
ಇತ್ತ ಎಂಇಎಸ್, ಶಿವಸೇನೆ ಪುಂಡಾಟಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಎಂಇಎಸ್ ನಿಷೇಧಿಸುವಂತೆ ಹಲವು ವರ್ಷಗಳಿಂದ ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ನಡೆಸಿದ ಪುಂಡಾಟಿಕೆಯನ್ನು ಇನ್ನೂ ಜನ ಮರೆತಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆನು ಕೆಲವೇ ದಿನಗಳು ಬಾಕಿ ಇದ್ದು ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ರಾಜಕೀಯ ಲಾಭಕ್ಕಾಗಿ ಮರಾಠಿ ಭಾಷಿಕರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸಕ್ಕೆ ಪದೆಪದೇ ಕೈ ಹಾಕುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
Belagavi: ಎಂಇಎಸ್ ಪುಂಡರಿಗೆ ಬೇಲ್ ಸಿಕ್ರೂ ಬಿಡುಗಡೆ ಭಾಗ್ಯ ಇಲ್ಲ..!
ಈ ಕುರಿತು ಮಾತನಾಡಿರುವ ಬೆಳಗಾವಿಯ ಕನ್ನಡಪರ ಸಂಘಟನೆಗಳ ಒಕ್ಕೂಟದ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ, 'ಮಹಾರಾಷ್ಟ್ರದ ಶಿವಸೇನೆ ಪುಂಡರು ಪದೇಪದೇ ಪುಂಡಾಟಿಕೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಮಹಾರಾಷ್ಟ್ರದ ಶಿವಸೇನೆ ಮುಖಂಡ ಬೆಳಗಾವಿಗೆ ಬರದಂತೆ ನೋಡಿಕೊಳ್ಳಬೇಕು. ನವೆಂಬರ್ 23ರಂದು ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಬಗ್ಗೆ ಅಂತಿಮ ವಿಚಾರಣೆ ಇದೆ. ಇಂತಹ ಸಂದರ್ಭದಲ್ಲಿ ಗಡಿ ಕ್ಯಾತೆ ತಗೆಯೋದು ನ್ಯಾಯಾಂಗ ನಿಂದನೆ ಆಗುತ್ತೆ. ಕಳೆದ ಹಲವು ವರ್ಷಗಳಿಂದ ನ್ಯಾಯಾಂಗ ನಿಂದನೆ ಅರ್ಜಿ ಹಾಕಿ ಎಂದರೂ ಸರ್ಕಾರ ಕಿವಿಗೊಡುತ್ತಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಎಂಇಎಸ್ ಮಾಡುವ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದು' ಎಂದು ಆಗ್ರಹಿಸಿದ್ದಾರೆ.
Belagavi: ರಾಜ್ಯ ಸರ್ಕಾರವನ್ನು ಟೀಕಿಸಿ ಎಂಇಎಸ್ ಉದ್ಧಟತನ
ಅದೇನೇ ಇರಲಿ ರಾಜ್ಯೋತ್ಸವ ದಿನದಂದು ಪದೇಪದೇ ಕ್ಯಾತೆ ತಗೆಯುವ ಎಂಇಎಸ್ ಪುಂಡರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕಿದೆ. ಬೆಳಗಾವಿಗೆ ನುಗ್ಗಿ ಕರಾಳ ದಿನಾಚರಣೆಯಲ್ಲಿ ಭಾಗಿಯಾಗುತ್ತೇವೆ ಅನ್ನೋ ಮಹಾರಾಷ್ಟ್ರದ ಶಿವಸೇನೆ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾಡದ್ರೋಹಿ ಎಂಇಎಸ್‌ನ ಕರಾಳ ದಿನಾಚರಣೆಗೆ ಸರ್ಕಾರ ಅನುಮತಿ ನೀಡಬಾರದು ಎಂಬುದು ಕನ್ನಡಿಗರ ಒಕ್ಕೊರಲ ಹಕ್ಕೊತ್ತಾಯ.