ಹುಕ್ಕೇರಿ ಶ್ರೀಗಳಿಂದ ವಿದೇಶಿ ರೇಡಿಯೋದಲ್ಲಿ ಕನ್ನಡ

By Web DeskFirst Published Nov 10, 2018, 9:48 AM IST
Highlights

ಹುಕ್ಕೇರಿ ಹಿರೇಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ಸಿಂಗಾಪುರ, ಆಸ್ಪ್ರೇಲಿಯಾ, ದುಬೈನಲ್ಲಿ ಬಾನುಲಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕೈಂಕರ್ಯಕ್ಕೆ ಚಾಲನೆ ನೀಡಿದ್ದಾರೆ. 

ಹುಕ್ಕೇರಿ :  ಕನ್ನಡ ನಾಡು​- ನುಡಿ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯಲ್ಲಿ ಸದಾ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಸಮುದ್ರದಾಚೆಗೂ ಕನ್ನಡ ಕಂಪು ಹರಡಿಸುತ್ತಿದೆ.

ಹುಕ್ಕೇರಿ ಹಿರೇಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ಸಿಂಗಾಪುರ, ಆಸ್ಪ್ರೇಲಿಯಾ, ದುಬೈನಲ್ಲಿ ಬಾನುಲಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕೈಂಕರ್ಯಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಕನ್ನಡ ಬಾನುಲಿ ಕಾರ್ಯಕ್ರಮ ನಡೆಸುವುದು ಮಾಮೂಲಿ. ಆದರೆ, ಶ್ರೀಗಳು ಸ್ವತಃ ಆಸ್ಥೆ ವಹಿಸಿ ವಿದೇಶಗಳಲ್ಲಿ ಕನ್ನಡದಲ್ಲಿ ಬಾನುಲಿ ಕಾರ್ಯಕ್ರಮಗಳು ವಾರಕ್ಕೊಮ್ಮೆ ಪ್ರಸಾರವಾಗುವಂತೆ ನೋಡಿಕೊಂಡಿದ್ದಾರೆ.

ಆರಂಭದಲ್ಲಿ ಆಸ್ಪ್ರೇಲಿಯಾದಲ್ಲಿ 2015ರಲ್ಲಿ ಬಾನುಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಿಂಗಾಪುರದಲ್ಲಿ 2017ರಲ್ಲಿ ಹಾಗೂ ದುಬೈನಲ್ಲಿ 2018ರಲ್ಲಿ ಬಾನುಲಿ ಕಾರ್ಯಕ್ರಮ ಆರಂಭಗೊಂಡಿತು. ವಾರದಲ್ಲಿ ಅರ್ಧ ಗಂಟೆಯ ಕಾಲ ಈ ಮೂರು ದೇಶಗಳಲ್ಲಿ ಕನ್ನಡ ಚಿತ್ರಗೀತೆಗಳು, ಕರ್ನಾಟಕಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಕನ್ನಡ ಕೈಂಕರ್ಯ ಇನ್ನೂ ಮುಂದುವರಿದಿದೆ. ಆ ದೇಶದಲ್ಲಿ ನೆಲೆಸಿರುವ ಕನ್ನಡಿಗರೇ ಇದರ ವೆಚ್ಚವನ್ನು ನೋಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ರಾಜ್ಯೋತ್ಸವಕ್ಕೆ 30 ಸಾವಿರ ಹೋಳಿಗೆ:

ನೆರೆಯ ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ರಾಜ್ಯದ ಬೆಳಗಾವಿ ತಾಲೂಕಿನ ಹುಕ್ಕೇರಿ ಹಿರೇಮಠ ನಿತ್ಯವೂ ಕನ್ನಡ ನಾಡು, ಭಾಷೆ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಕನ್ನಡಿಗರ ಹಿತಾಸಕ್ತಿ ಕಾಯುವ ಕಾಯಕದಲ್ಲಿ ನಿರತವಾಗಿದೆ. ಇದರ ಜತೆಗೆ ಗೋವಾದಲ್ಲಿ ಕನ್ನಡಿಗರ ಮಹಾಸಂಘ ಹುಟ್ಟುಹಾಕುವ, ನೆರೆ ರಾಜ್ಯದಲ್ಲೂ ಕನ್ನಡ ಕಂಪು ಸೂಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸುಮಾರು 30 ಸಾವಿರಕ್ಕಿಂತ ಹೆಚ್ಚು ಜನರಿಗೆ ಹೋಳಿಗೆ ವಿತರಿಸುವ ಮೂಲಕ ಕನ್ನಡ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಸಂಪ್ರದಾಯಕ್ಕೆ ಶ್ರೀಗಳು ನಾಂದಿ ಹಾಡಿದ್ದಾರೆ.

1984ರಲ್ಲಿ ಹಿರೇಮಠದ ಉತ್ತರಾಧಿಕಾರಿಯಾಗಿ ನೇಮಕವಾದ ಚಂದ್ರಶೇಖರ ಶಿವಾಚಾರ್ಯರು, ಹುಕ್ಕೇರಿ ತಾಲೂಕಿನ ಗಡಿ ಹಾಗೂ ಅನೇಕ ಹಳ್ಳಿಗಳಿಗೆ ಸಂಚರಿಸಿ ಕನ್ನಡ ಭಾಷೆ, ಸಂಸ್ಕೃತಿಯ ಕುರಿತು ಅನೇಕ ಕಾರ್ಯಾಗಾರಗಳನ್ನು ಏರ್ಪಡಿಸಿದ್ದಾರೆ. 1992ರಲ್ಲಿ ಅವರು ಜವಾಬ್ದಾರಿ ವಹಿಸಿಕೊಂಡ ಬಳಿಕ ಕನ್ನಡದ ಬಗೆಗಿನ ಹಿರೇಮಠದ ಕಾಳಜಿ ಮತ್ತಷ್ಟುವೇಗ ಪಡೆಯಿತು. ರಾಜ್ಯದ ವಿವಿಧ ಭಾಗ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಚರಿಸಿದ ಚಂದ್ರಶೇಖರ ಶ್ರೀಗಳು, ಅಲ್ಲಿ ನಡೆಯುವ ಸಮ್ಮೇಳನ, ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮ ಬದ್ಧತೆ ತೋರಿಸಿದ್ದಾರೆ.

ಪ್ರಸಿದ್ಧ ವೈದ್ಯ ಡಾ. ಸ.ಜ. ನಾಗಲೋಟಿಮಠ ಹೆಸರಿನಲ್ಲಿ ಹಿರೇಮಠದಲ್ಲಿ ಶ್ರೀಗಳು ಗ್ರಂಥಾಲಯ ತೆರೆದಿದ್ದಾರೆ. ಇಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕನ್ನಡದ ವಿವಿಧ ಪ್ರಕಾರದ ಪ್ರಬಂಧ, ಕವನ ಸಂಕಲನ, ಕಾದಂಬರಿ ಸೇರಿದಂತೆ ಕನ್ನಡದ ಬಹಳಷ್ಟುಪುಸ್ತಕಗಳಿವೆ. ಗಡಿ ಆಚೆ, ಗಡಿ ಈಚೆ, ಕನ್ನಡದಲ್ಲಿ ವಚನಗಳ ಕಾರಂಜಿ ಸೇರಿದಂತೆ ಅನೇಕ ಪುಸ್ತಕಗಳನ್ನು ಶ್ರೀಮಠವು ಹೊರತಂದಿದೆ.

ವರದಿ : ರವಿ ಕಾಂಬಳೆ

click me!