
ಎಂ. ಪ್ರಹ್ಲಾದ್
ಕನಕಗಿರಿ (ಫೆ.17): ಸ್ವಂತ ಹಣದಿಂದ ತಾವೇ ಓದುವ ಕೊಠಡಿಗಳಿಗೆ ಬಣ್ಣ ಹಚ್ಚಿ ಶಾಲೆಯ ಅಂದ ಹೆಚ್ಚಿಸುವ ಕೆಲಸ ಮಾಡಿರುವ ಕೊಪ್ಪಳ ಜಿಲ್ಲೆ ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳ ಸತ್ಕಾರ್ಯಕ್ಕೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ 342 ಮಕ್ಕಳ ಪೈಕಿ 245 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಿದ್ದು, ಇವರೆಲ್ಲರೂ ಸೇರಿಕೊಂಡು ತಮ್ಮ ಶಾಲಾ ಕೊಠಡಿಗಳಿಗೆ ಸ್ವ-ಇಚ್ಛೆಯಿಂದ ಬಣ್ಣ ಹಚ್ಚಿದ್ದಾರೆ. ಈ ಬಣ್ಣ ಹಚ್ಚುವ ಕಾರ್ಯಕ್ಕಾಗಿ ಪ್ರತಿ ವಿದ್ಯಾರ್ಥಿ ತಮ್ಮ ಪಾಲಕರು, ಪೋಷಕರ ಬಳಿ ತಲಾ ₹100 ಸಂಗ್ರಹಿಸಿದ್ದಾರೆ. ಒಟ್ಟು ₹20 ಸಾವಿರ ಸಂಗ್ರಹವಾಯಿತು. ಆದರೆ, ಈ ಹಣ ಬಣ್ಣ ಹಚ್ಚಲು ಸಾಲುವುದಿಲ್ಲ ಎಂಬುದು ಮನವರಿಕೆಯಾಯಿತು. ಹೀಗಾಗಿ, ಬಣ್ಣ ಹಚ್ಚಲು ಕಾರ್ಮಿಕರನ್ನು ನೇಮಿಸುವ ಬದಲು ತಾವೇ ಬಣ್ಣ ಹಚ್ಚಿದರು.
ಎಸ್ಎಸ್ಎಲ್‌ಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋಗುವಾಗ ‘ಶಾಲೆಗಾಗಿ ನಾವು’ ಎನ್ನುವ ಧ್ಯೇಯದಡಿ ಒಂದಲ್ಲ ಒಂದು ರೀತಿಯಲ್ಲಿ ಸೇವಾ ಕಾರ್ಯ ಮಾಡುವ ರೂಢಿ ಈ ಶಾಲೆಯಲ್ಲಿದೆ. ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲೆಗಾಗಿ ಸ್ಕ್ರೀನ್, ಮ್ಯಾಟ್, ಮೈಕ್ ಸೆಟ್ ಹಾಗೂ ಶಾಮಿಯಾನ ನೀಡಿದ್ದರು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.
ನಮ್ಮ ಶಾಲೆಯ ಕೊಠಡಿಗಳಿಗೆ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. ಹೀಗಾಗಿ ನಾವೆಲ್ಲರೂ ಸೇರಿ ಚರ್ಚಿಸಿ ಸಂಗ್ರಹಿಸಿದ ಹಣದಲ್ಲಿ ಬಣ್ಣ ಹಚ್ಚಬೇಕೆನ್ನುವ ನಿರ್ಧಾರ ಮಾಡಿದೆವು. ಕಾರ್ಮಿಕರಿಗೆ ಕೂಲಿ ಹಣ ನೀಡಲು ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ನಾವೇ ಬಣ್ಣ ಹಚ್ಚಿದ್ದೇವೆ.
ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ತಾವೇ ಹಣ ಸಂಗ್ರಹಿಸಿ ಸ್ವ-ಇಚ್ಛೆಯಿಂದ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಶಾಲೆಯ ಉದ್ದಾರಕ್ಕೆ ನಮ್ಮದು ಅಳಿಲು ಸೇವೆ ಇರಲಿ ಎನ್ನುವ ಪರಿಕಲ್ಪನೆಯೊಂದಿಗೆ ಮಕ್ಕಳು ಋಣ ತೀರಿಸುವ ಸತ್ಕಾರ್ಯ ಮಾಡಿರುವುದು ಶಾಲಾ ಆಡಳಿತ ಮಂಡಳಿಗೆ ಖುಷಿ ತಂದಿದೆ.
- ಜಗದೀಶ ಹಾದಿಮನಿ, ಮುಖ್ಯ ಶಿಕ್ಷಕ.-
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ