
ಬೆಳ್ತಂಗಡಿ (ಜೂ.21): ಪವಿತ್ರವಾದ ಹಿಂದೂ ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದ ಸಾಧ್ಯ. ಅಂತಹ ಕಾರ್ಯವನ್ನು ಶ್ರೀರಾಮ ಶಾಲೆ ಮಾಡುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಸುಲ್ಕೇರಿಯ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಪ್ರವೇಶೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳನ್ನು ಸರಿದಾರಿಗೆ ತರುವುದು ಅಥವಾ ಹಾಳು ಮಾಡುವುದು ಪೋಷಕರ ಕೈಯಲ್ಲಿಯೇ ಇದೆ. ಇಲ್ಲಿನ ಶಾಲೆಯಲ್ಲಿ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದನ್ನು ಮಕ್ಕಳು ಮನೆಯಲ್ಲೂ ಅನುಸರಿಸುವಂತಾಗಬೇಕಾದರೆ ತಾಯಂದಿರ ಪಾತ್ರ ಮುಖ್ಯವಾಗುತ್ತದೆ. ಭಜನೆ ಮಾಡುವ ಹೊತ್ತಿನಲ್ಲಿ ಟಿ.ವಿ. ಮುಂದೆ ಕುಳಿತುಕೊಳ್ಳವುದು ಎಷ್ಟಕ್ಕೂ ಸರಿಯಲ್ಲ. ಮಗುವಿನ ಸಂಸ್ಕಾರಯುತ ಬೆಳವಣಿಗೆಯನ್ನು ಮೊದಲು ತಾಯಂದಿರು ಪ್ರೋತ್ಸಾಹಿಸಬೇಕು. ಮಕ್ಕಳು ದೀಪಗಳಂತೆ, ಹಿಂದುತ್ವದ ಶಿಕ್ಷಣ ಪಡೆದವರು ಜಗತ್ತಿಗೆ ಮಾದರಿಯಾಗುತ್ತಾರೆ ಎಂದರು.
ಅಳದಂಗಡಿ ಸತ್ಯದೇವತೆ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಕಾರ್ಕಳ ಕಮಲಾಕ್ಷ ಕಾಮತ್, ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಶ್ರೀಪಾದ ಜಿ. ಮೆಹೆಂದಳೆ, ನಾರಾವಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಸುಧಾಕರ ಭಂಡಾರಿ, ಶಿರ್ಲಾಲು ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಧೀರ್ ಸುವರ್ಣ, ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ನಾರಾವಿ, ಅಧ್ಯಕ್ಷ ರಾಜು ಪೂಜಾರಿ ವೇದಿಕೆಯಲ್ಲಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಉಪಸ್ಥಿತರಿದ್ದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ವಂದಿಸಿದರು. ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ