
ಆನಂದ್ ಎಂ. ಸೌದಿ
ಯಾದಗಿರಿ (ಏ.27): "ಕೆಟ್ಟ ವಾಸನೆಯಿಂದ ಆರೋಗ್ಯದ ಮೇಲೆ ನೇರವಾಗಿ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. 2-3 ತಿಂಗಳಿಗೊಮ್ಮೆ ಉಸಿರಾಟದ ತೊಂದರೆ, ಎದೆನೋವು ಹಾಗೂ ಇನ್ನೂ ಕೆಲವು ತೊಂದರೆಗಳಾಗುತ್ತಿದ್ದರೆ ಈ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾದ ಕೈಗಾರಿಕಾ ಪ್ರದೇಶಗಳಿಂದ ಹೊರಬರುವ ಅನಿಲ ಹಾಗೂ ಕೆಟ್ಟ ವಾಸನೆಯಿಂದ ಆಗಿರುವುದಿಲ್ಲ. ಅದು ನಿಮ್ಮ ವೈಯುಕ್ತಿಕ ಕಾರಣದಿಂದ ಆಗಿರುವ ಆರೋಗ್ಯ ಸಮಸ್ಯೆಗಳು..!"
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್- ತ್ಯಾಜ್ಯ ಕಂಪನಿಗಳಿಂದ ವಿಷಗಾಳಿಯ ಆತಂಕ ಹಾಗೂ ದುರ್ನಾತದಿಂದಾಗಿ, ಜಿಟಿಸಿಸಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಆರೋಗ್ಯದ ಮೇಲಾಗುತ್ತಿರುವ ಅಡ್ಡ ಪರಿಣಾಮಗಳ ಬಗ್ಗೆ "ಕನ್ನಡಪ್ರಭ" ವರದಿಯ ಆಧಾರದಡಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಮಕ್ಕಳ ಆಯೋಗಕ್ಕೆ ವರದಿ ಸಲ್ಲಿಸಿದ ಆರೋಗ್ಯ ಅಧಿಕಾರಿಗಳ ಈ ಮೇಲಿನಂತಹ ಹೇಳಿಕೆ ಆಘಾತ ಮೂಡಿಸುವಂತಿದೆ.
Toxic Air: ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದ ಸರ್ಕಾರ: ವಿಳಂಬ ಏಕೆ?
ವರದಿಯಲ್ಲೇನಿದೆ?: ಮಕ್ಕಳ ಹಕ್ಕುಗಳ ಆಯೋಗ ನೀಡಿದ್ದ ಸಮನ್ಸ್ ವಿಚಾರಣೆಗೆಂದು ಏ.23ರಂದು ಬೆಂಗಳೂರಿಗೆ ತೆರಳಿದ್ದ ಅಧಿಕಾರಿಗಳ ತಂಡ, ಮಾಹಿತಿಗಳನ್ನು ಒದಗಿಸಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯ ಅಂಶಗಳನ್ನು ಪ್ರಸ್ತಾಪಿಸಿದ್ದು, ಜಿಟಿಸಿಸಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಿಸಿದಾಗ ಕೆಲವು ವಿದ್ಯಾರ್ಥಿಗಳು ಕೆಟ್ಟ ವಾಸನೆಯಿಂದ 2-3 ತಿಂಗಳಿಗೊಮ್ಮೆ ಉಸಿರಾಟದ ತೊಂದರೆ, ಎದೆನೋವು ಹಾಗೂ ಇನ್ನೂ ಕೆಲವು ತೊಂದರೆಗಳಾಗುತ್ತಿದ್ದವು ಎಂದು ತಿಳಿಸಿದ್ದರು.
ಆಗ ವೈದ್ಯಾಧಿಕಾರಿಗಳು, ಕೆಟ್ಟ ವಾಸನೆಯಿಂದ ಆರೋಗ್ಯದ ಮೇಲೆ ನೇರವಾಗಿ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. 2-3 ತಿಂಗಳಿಗೊಮ್ಮೆ ಉಸಿರಾಟದ ತೊಂದರೆ, ಎದೆನೋವು ಹಾಗೂ ಇನ್ನೂ ಕೆಲವು ತೊಂದರೆಗಳಾಗುತ್ತಿದ್ದರೆ ಈ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾದ ಕೈಗಾರಿಕಾ ಪ್ರದೇಶಗಳಿಂದ ಹೊರಬರುವ ಅನಿಲ ಹಾಗೂ ಕೆಟ್ಟ ವಾಸನೆಯಿಂದ ಆಗಿರುವುದಿಲ್ಲ. ಅದು ನಿಮ್ಮ ವೈಯುಕ್ತಿಕ ಕಾರಣದಿಂದ ಆಗಿರುವ ಆರೋಗ್ಯ ಸಮಸ್ಯೆಗಳು. ಈ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾದ ಕೈಗಾರಿಕೆಗಳಿಂದ ಹೊರಬರುವ ಅನಿಲ ಹಾಗೂ ಕೆಟ್ಟ ವಾಸನೆಯು ಕಾರಣವಾಗಿದ್ದರೆ, ಅದು ನಿರಂತರವಾಗಿ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದಾರೆ.
ಈ ಭಾಗದಲ್ಲಿನ ವಾಯಮಾಲಿನ್ಯ ಗುಣಮಟ್ಟ ಅನಾರೋಗ್ಯಕರ ಎಂಬಂಶ ನಿರಂತರವಾಗಿ ಕಂಡು ಬರುತ್ತಿದ್ದರೂ, ಜನರು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳ ಕುರಿತು ದೂರುಗಳ ನೀಡುತ್ತಿದ್ದರೂ, ಬಾಧಿತ ಪ್ರದೇಶದ ಜನರ ಕೂಲಕಂಷ ಆರೋಗ್ಯ ತಪಾಸಣೆ ಮಾಡದೆ, "ಅದು ನಿಮ್ಮ ವೈಯುಕ್ತಿಕ ಕಾರಣದಿಂದ ಆಗಿರುವ ಆರೋಗ್ಯ ಸಮಸ್ಯೆಗಳು.." ಎಂಬ ಷರಾ ಬರೆದಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ವರದಿ ಅನುಮಾನ ಮೂಡಿಸಿದೆ. "ನಾಮ್ ಕೆ ವಾಸ್ತೆ"ಯಂತೆ ಅಲ್ಲಿನವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಜಿಟಿಸಿಸಿ ಕೇಂದ್ರವಷ್ಟೇ ಅಲ್ಲ, ಅರ್ಧ ಕಿ.ಮೀ. ಅಂತರದಲ್ಲಿರುವ ಹಳ್ಳಿಗಳಲ್ಲೂ ಮಕ್ಕಳಿದ್ದಾರೆ.
ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆಂಬ ಕಾರಣಕ್ಕೆ ಆರೋಗ್ಯಧಿಕಾರಿಗಳು "ತಪಾಸಣಾ ಶಾಸ್ತ್ರ" ಪೂರೈಸಿದ್ದಾರೆ ಎಂದು ದೂರುವ ಜನರು, ಹಾಗಿದ್ದರೆ ಅದ್ಯಾವ ವೈಯುಕ್ತಿಕ ಕಾರಣಕ್ಕೆ ಅನೇಕ ಮಕ್ಕಳಿಗೆ ನಿರಂತರ ಆರೋಗ್ಯ ಸಮಸ್ಯೆಗಳು ಬಂದಿವೆಯೇ ಎಂದು ಪ್ರಶ್ನಿಸುತ್ತಾರೆ. ಇಲ್ಲಿ ಅಂತಹುದ್ದೇನೂ ಆರೋಗ್ಯ ಸಮಸ್ಯೆಯಿಲ್ಲ, ಸಣ್ಣಪುಟ್ಟ ಜಡ್ಡು ಜಾಪತ್ರಿ ಬಿಟ್ಟರೆ ಅಂತಹ ಗಂಭೀರ ಪರಿಣಾಮ ಬೀರುವಂತಹ ರೋಗಗಳು ಇಲ್ಲಿನ ಜನರನ್ನು ಬಾಧಿಸುತ್ತಿಲ್ಲ ಎಂದು ಕೈಗಾರಿಕೆಗಳಿಗೆ ಪೂರಕವಾದ ಅಂಶಗಳುಳ್ಳ ವರದಿಯನ್ನೇ ಆರೋಗ್ಯ ಇಲಾಖೆ ನೀಡಿದೆ ಎಂಬುದಾಗಿ ಕಡೇಚೂರಿನ ಭೀಮಣ್ಣ ಆರೋಪಿಸುತ್ತಾರೆ.
ವಿಷಕಾರಿ ತ್ಯಾಜ್ಯ ಹಳ್ಳಕ್ಕೆ, ಅಲ್ಲಿಂದ ಭೀಮೆಯೊಡಲಿಗೆ: ಜನ-ಜಲ-ಜೀವನದ ಮೇಲೆ ದುಷ್ಪರಿಣಾಮ
ಜನರ ದೂರಿನನ್ವಯ, 2024 ರ ಡಿಸೆಂಬರಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡದ ಸಮಿತಿ ಭೇಟಿ ನೀಡಿ, 179 ಪುಟಗಳ ವರದಿ ನೀಡಿದ್ದರು. ಕೆಲವು ಕಂಪನಿಗಳು ನಿಯಮ ಪಾಲಸುತ್ತಿಲ್ಲ ಎಂದು ತಾವು ಗಮನಿಸಿದ್ದನ್ನು ವರದಿಯಲ್ಲಿ ಉಲ್ಲೇಖಿಸಿದ್ದ ಸಮಿತಿಯು, ಕೆಲವೊಂದು ಸಲಹೆಗಳ ಅಳವಡಿಸಿಕೊಳ್ಳಬೇಕು. ಇಲ್ಲಿದಿದ್ದರೆ ಇಲ್ಲಿನ ಪರಿಸರ, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಬಗ್ಗೆ ಎಚ್ಚರಿಸಿದ್ದರು. ಆದರೆ, ಇಷ್ಟೆಲ್ಲಗಳ ಮಧ್ಯೆ, ವೈಯುಕ್ತಿಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು, ಕೈಗಾರಿಕೆಗಳಿಂದಾಗಿದ್ದಲ್ಲಿ ನಿರಂತರವಾಗಿರುತ್ತಿತ್ತು ಎಂನ ಆರೋಗ್ಯ ಇಲಾಖೆಯ ವರದಿಯೇ ರೋಗಗ್ರಸ್ಥವಾಗಿದೆ ಎಂದೆನ್ನುವ ಸಾಮಾಜಿಕ ಕಾರ್ಯಕರ್ತ ಶ್ರೀಶೈಲ, ಸರ್ಕಾರ ಇಂತಹಗಳಲ್ಲಿ ಮೂರನೇ ತಂಡಗಳಿಂದ ಜನರ ಆರೋಗ್ಯ ಕೂಲಂಕಷ ತಪಾಸಣೆ ನಡೆಸಬೇಕು ಎಂದು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ