₹8703 ಕೋಟಿಗೆ ಏರಿಕೆಯಾದ ಕೆ-ಶಿಪ್ ವೆಚ್ಚ; ಸಂಕಷ್ಟದಲ್ಲಿ 10 ಪ್ರಮುಖ ರಾಜ್ಯ ಹೆದ್ದಾರಿಗಳ ನಿರ್ಮಾಣ

Published : Oct 07, 2026, 07:39 AM IST
Karnataka Highway Upgrades

ಸಾರಾಂಶ

ಲೋಕೋಪಯೋಗಿ ಇಲಾಖೆಯ ವಿಳಂಬ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇ.ಡಿ ದಾಳಿಯಿಂದಾಗಿ ಕೆ-ಶಿಪ್ 4 ಹೆದ್ದಾರಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇದರಿಂದಾಗಿ 780 ಕಿ.ಮೀ ರಸ್ತೆ ನಿರ್ಮಾಣದ ವೆಚ್ಚ ಬರೋಬ್ಬರಿ 3,000 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ

ವಿಶೇಷ ವರದಿ

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಮೇಲಿನ ಕಿಕ್‌ಬ್ಯಾಕ್‌ ಆರೋಪ ಸಂಬಂಧ ನಡೆದ ಜಾರಿ ನಿರ್ದೇಶನಾಲಯ(ಇ.ಡಿ)ದ ದಾಳಿ ರಾಜ್ಯಕ್ಕೆ ವರದಾನವಾಗಬೇಕಿದ್ದ ಕೆ-ಶಿಪ್ 4ರ ಅಡಿ ಕೈಗೆತ್ತಿಕೊಂಡಿದ್ದ 10 ಪ್ರಮುಖ ರಾಜ್ಯ ಹೆದ್ದಾರಿಗಳ ಸುಮಾರು 780.56 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಗೆ ವಿಘ್ನ ತಂದೊಡ್ಡಿದೆ.

ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಈ ಮಹತ್ವದ ಯೋಜನಾ ವೆಚ್ಚ 3,000 ಕೋಟಿ ರು.ಗಳಷ್ಟು ಹೆಚ್ಚಳ ಆಗಿದೆ. ಯೋಜನಾ ವೆಚ್ಚ ಹೆಚ್ಚಾದ ಕಾರಣ ಅದನ್ನು ನಿಭಾಯಿಸಲು ಹೆಚ್ಚುವರಿ ಹಣ ಬೇಕು ಎಂದು ಸರ್ಕಾರ ಸಾಲಕ್ಕಾಗಿ ಬೇಡಿಕೆಯಿಟ್ಟರೆ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಹೆಚ್ಚುವರಿ ಸಾಲ ನೀಡಲು ನಿರಾಕರಿಸಿದೆ.

ಇದರ ಬೆನ್ನಲ್ಲೇ ಸಚಿವ ಸತೀಶ್ ಅವರ ಮೇಲೆಯೇ ಕಿಕ್‌ಬ್ಯಾಕ್‌ ಆರೋಪದಡಿ ನಡೆದಿರುವ ಇ.ಡಿ ದಾಳಿ ಯೋಜನೆಯು ಈ ಸರ್ಕಾರದ ಅವಧಿಯಲ್ಲೇ ಕಾರ್ಯರೂಪಕ್ಕೆ ಬರುವ ಬಗ್ಗೆಯೇ ಅನುಮಾನ ಹುಟ್ಟುವಂತೆ ಮಾಡಿದೆ.

ಏಕೆಂದರೆ, ಎಡಿಬಿ ಹೆಚ್ಚುವರಿ ಸಾಲ ನೀಡಲು ನಿರಾಕರಿಸಿರುವುದರಿಂದ ಅದಕ್ಕೆ ಬದಲಿ ವ್ಯವಸ್ಥೆ ಅಥವಾ ಎಡಿಬಿಯ ಮನವೊಲಿಸುವ ಪ್ರಕ್ರಿಯೆಯೇ ವರ್ಷಾನುಗಟ್ಟಲೇ ಆಗುವ ಸಾಧ್ಯತೆಯಿದೆ. ಅಲ್ಲದೆ, ಒಂದೂಕ್ಕಾಲು ವರ್ಷದ ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

ಹೀಗಾಗಿ ಯೋಜನೆ ಅನುಷ್ಠಾನ ವಿಳಂಬವಾದರೆ ಮುಂದಿನ 3-4 ವರ್ಷದಲ್ಲಿ ಯೋಜನಾ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆಯಿದೆ. ಪರಿಣಾಮ ಭಾರಿ ಹೊರೆ ಸರ್ಕಾರ ಹಾಗೂ ಸಾರ್ವಜನಿಕರ ಮೇಲೆ ಬೀಳಲಿದೆ.

ವರದಾನವಾಗಬೇಕಿದ್ದ ಯೋಜನೆ

ರಾಜ್ಯದ ಹತ್ತು ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿನ 780 ಕಿ.ಮೀ. ರಸ್ತೆಯನ್ನು 5,736 ಕೋಟಿ ರು.ವೆಚ್ಚದಲ್ಲಿ ನಿರ್ಮಿಸುವ ಕುರಿತು 2023ರಲ್ಲಿ ಪ್ರಾಥಮಿಕ ಯೋಜನಾ ವರದಿ (ಪಿಪಿಆರ್) ಸಲ್ಲಿಕೆಯಾಗಿತ್ತು. ಆದರೆ, ಯೋಜನೆ ವಿಳಂಬದಿಂದಾಗಿ ಯೋಜನಾ ವೆಚ್ಚ 8,703 ಕೋಟಿ ರು.ಗೆ ಹೆಚ್ಚಳವಾಗಿದ್ದು, 2,967.02 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಿದೆ. ಇನ್ನು ಪರಿಷ್ಕೃತ ಯೋಜನಾ ವೆಚ್ಚವಾದ 8,703 ಕೋಟಿ ರು. ಮೇಲಿನ ಆ್ಯನುಟಿ ಮೇಲಿನ ಬಡ್ಡಿ, ಆಪರೇಷನ್‌ ಮತ್ತು ನಿರ್ವಹಣೆ ಸೇರಿ 10,726.03 ಕೋಟಿ ರು.ವರೆಗೆ ವೆಚ್ಚ ಉಂಟಾಗಲಿದೆ. ಪಿಪಿಆರ್‌ ವರದಿಯಿಂದ ಡಿಪಿಆರ್‌ ವರದಿ ವೇಳೆಗೆ ಯೋಜನಾ ವೆಚ್ಚ ಹೆಚ್ಚುವರಿ ಶುಲ್ಕಗಳು ಸೇರಿ ಬಹುತೇಕ ದುಪ್ಪಟ್ಟಾದಂತಾಗಿದೆ.

ಯಾವ್ಯಾವ ರಸ್ತೆ ನಿರ್ಮಾಣ?

ಡಿಪಿಆರ್ ಬಳಿಕ ಮಳವಳ್ಳಿಯಿಂದ ಎಚ್‌.ಡಿ.ಕೋಟೆ ನಡುವಿನ 81.62 ಕಿ.ಮೀ. ರಾಜ್ಯ ಹೆದ್ದಾರಿ -33, ಹೊಮ್ಮರಗಲ್ಲಿಯಿಂದ ಸಂತೆಮರಹಳ್ಳಿ (ರಾ.ಹೆ.57) 69.42 ಕಿ.ಮೀ, ಮಡಿಕೇರಿಯಿಂದ ದೋಣಿಗಲ್‌ವರೆಗಿನ 93 ಕಿ.ಮೀ, ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣದ ಬಿ.ಎಂ.ರಸ್ತೆ ಜಂಕ್ಷನ್‌ವರೆಗಿನ 66.18 ಕಿ.ಮೀ, ಮಾಗಡಿಯಿಂದ ಹುಣಸನಹಳ್ಳಿವರೆಗಿನ 96.20 ಕಿ.ಮೀ, ಚಡ್ಚನ್‌ನಿಂದ ಝಲ್ಕಿ, ಇಂಡಿ, ಅಫ್ಜಲ್‌ಪುರ ಮೂಲಕ ಗಾಣಗಪುರವರೆಗಿನ 119.50 ಕಿ.ಮೀ, ದೇವರ ಹಿಪ್ಪರಗಿಯಿಂದ ನಾರಾಯಣಪುರ ಜಲಾಶಯ ಗೇಟ್‌ವರೆಗಿನ 95 ಕಿ.ಮೀ, ಅರಬಾವಿಯಿಂದ ಲೋಕಾಪುರವರೆಗಿನ 62.59 ಕಿ.ಮೀ, ಗಿಣಿಗೇರದಿಂದ ಮುಂಡರಗಿವರೆಗಿನ 46.35 ಕಿ.ಮೀ. ಮ್ಯಾಡನೇರಿ ಕ್ರಾಸ್‌ನಿಂದ ಬೇವಿನಕಟ್ಟಿ ಕ್ರಾಸ್‌ ಮೂಲಕ ಕಾಟ್ರಲ ಕ್ರಾಸ್‌ವರೆಗಿನ 49.80 ಕಿ.ಮೀ. ಸೇರಿ 780 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

ವೆಚ್ಚ ಹೆಚ್ಚಳಕ್ಕೆ ಹಲವು ಕಾರಣ

ಯೋಜನಾ ವೆಚ್ಚ ಹೆಚ್ಚಳಕ್ಕೆ ಲೋಕೋಪಯೋಗಿ ಇಲಾಖೆ ಹಲವು ಕಾರಣಗಳನ್ನು ನೀಡಿದ್ದು, 2023ರಲ್ಲಿ 11 ರಸ್ತೆಗಳಿಗೆ ಅನುಮೋದನೆ ನೀಡಲಾಗಿತ್ತು. 2024ರಲ್ಲಿ 10 ರಸ್ತೆಗಳನ್ನು ಮಾತ್ರ ನಿರ್ಮಾಣಕ್ಕೆ ಕೈಗೆತ್ತಿಕೊಳ್ಳಲಾಯಿತು. ಹನೂರು ಪಾಲಾರ್‌ ರಸ್ತೆಯು ಮಲೈಮಹದೇಶ್ವರ ವನ್ಯಜೀವಿ ಧಾಮದ ಮೂಲಕ ಹಾದಿ ಹೋಗುತ್ತದೆ. ಅದಕ್ಕೆ ಪರಿಸರ, ಅರಣ್ಯ ಇಲಾಖೆ ಅನುಮೋದನೆ ಸೇರಿ ಹಲವು ಸಮಸ್ಯೆಯ ಮುನ್ಸೂಚನೆ ಲಭ್ಯವಾಯಿತು. ಹೀಗಾಗಿ ಬದಲಿ ಮಾರ್ಗದ ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರದ ಪರ್ಯಾಯ ರಸ್ತೆ ಬಗ್ಗೆ ಸೇರಿ ಹಲವು ಬದಲಾವಣೆಗಳ ಬಗ್ಗೆ ಚರ್ಚಿಸಿ ನಿರ್ಧರಿಸಿದ್ದರಿಂದ ವಿಳಂಬವಾಯಿತು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಎಡಿಬಿಯಿಂದ 3,115 ಕೋಟಿ ರು.ಗಿಂತ ಹೆಚ್ಚು ಸಾಲವಿಲ್ಲ:

2021ರಲ್ಲಿ 39ನೇ ಯೋಜನಾ ನಿರ್ಣಯ ಮಂಡಳಿಯ ಸಭೆಯಲ್ಲಿ 915 ಕಿ.ಮೀ. ಉದ್ದದ ಹನ್ನೊಂದು ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿತ್ತು. ಯೋಜನೆಯ ಪ್ರಾಥಮಿಕ ವರದಿ (ಪಿಪಿಆರ್‌) ಸಿದ್ಧಪಡಿಸಿ 2024ರ ಫೆಬ್ರವರಿಯಲ್ಲಿ ಹಣಕಾಸು ಇಲಾಖೆ ಅನುಮೋದನೆ ಪಡೆದು, 2024ರ ಮಾರ್ಚ್‌ನಲ್ಲಿ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿತ್ತು. 5,736 ಕೋಟಿ ರು. ವೆಚ್ಚದ ಯೋಜನೆಗೆ 3,115 ಕೋಟಿ ರು. ಆರ್ಥಿಕ ಸಹಾಯ ನೀಡಲು 2025ರ ಫೆಬ್ರುವರಿ ತಿಂಗಳಲ್ಲಿ ಎಡಿಬಿ ಬ್ಯಾಂಕ್‌ ಒಪ್ಪಿಗೆ ನೀಡಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಳದಿಂದ ಆರ್ಥಿಕ ಇಲಾಖೆಯು ಎಡಿಬಿ ಬ್ಯಾಂಕ್‌ನಿಂದ ಹೆಚ್ಚುವರಿ ಸಾಲ ಪಡೆಯಲು ಸಲಹೆ ನೀಡಿದ್ದರೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

780.56 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಸಿವಿಲ್‌ ಕಾಮಗಾರಿಗಳಿಗೆ 5,678.35 ಕೋಟಿ ರು, ಭೂಸ್ವಾಧೀನ ಪ್ರದೇಶ 1,717.93 ಎಕರೆ ಭೂಸ್ವಾಧೀನ, 999.16 ಕೋಟಿ ರು. ಭೂ ಸ್ವಾಧೀನ ವೆಚ್ಚ ಆಗಲಿದೆ. 6,678 ಕೋಟಿ ರು. ವೆಚ್ಚ ನಿರೀಕ್ಷಿಸಲಾಗಿತ್ತು.

ಆದರೆ, 109ನೇ ಪಿಎಸ್ಸಿ ಸಭೆಯಲ್ಲಿ ಯೋಜನೆ ವಿಳಂಬ ಮತ್ತಿತರ ಕಾರಣಗಳಿಗೆ ಯೋಜನಾ ವೆಚ್ಚ ಹೆಚ್ಚಾಗಿರುವ ಬಗ್ಗೆ ಚರ್ಚೆ ನಡೆಸಿ 6,281 ಕೋಟಿ ರು.ಸಿವಿಲ್‌ ಕಾಮಗಾರಿಗಳಿಗೆ ಪೂರಕ ಶುಲ್ಕಗಳು ಸೇರಿ 6,551.02 ಕೋಟಿ ರು, ಪರಿಸರ ನಿರ್ವಹಣೆ ಯೋಜನೆಗೆ 94.22 ಕೋಟಿ ರು, ಪರಿಶೀಲನಾ ಶುಲ್ಕದ ಹೆಸರಿನಲ್ಲಿ 109.93 ಕೋಟಿ ರು, ರಸ್ತೆ ಸುರಕ್ಷತಾ ಕಾಮಗಾರಿಗಳಿಗೆ 31.41 ಕೋಟಿ ರು, ಎನ್‌ಜಿಒ ಕಾರ್ಯಕ್ಕೆ 6.28 ಕೋಟಿ ರು, ಭೂಸ್ವಾಧೀನ ಹಾಗೂ ಪೂರಕ ಕಾಮಗಾರಿಗಳಿಗೆ 1,679.52 ಕೋಟಿ ರು., ಸೇರಿ ಒಟ್ಟು 8,703 ಕೋಟಿ ರು. ಆಯಿತು.

ಇನ್ನು ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್‌, ನಿರ್ಮಾಣ (ಇಪಿಸಿ) 2,510 ಕೋಟಿ ರು., ಆ್ಯನ್ಯುಟಿ ಮೊತ್ತ 1,891 ಕೋಟಿ ರು., ಹೀಗೆ ಒಟ್ಟು ವೆಚ್ಚ 10,726 ಕೋಟಿ ರು. ಆಗಿತ್ತು.

ಸರ್ಕಾರದ ಮೇಲೆ 839 ಕೋಟಿ ರು. ಹೊರೆ:

5,736 ಕೋಟಿ ರು. ಯೋಜನಾ ವೆಚ್ಚ 8,703 ಕೋಟಿ ರು. ಆಗಿರುವುದರಿಂದ ರಾಜ್ಯ ಸರ್ಕಾರದ ಪಾಲು 2,323.81 ಕೋಟಿ ರು.ಗಳಿಂದ 3,163 ಕೋಟಿ ರು.ಗೆ ಹೆಚ್ಚಳ ಆಗಿದೆ. ಇದರಿಂದ 839 ಕೋಟಿ ರು.ಹೊರೆ ಆಗಿದ್ದು, ಪಿಪಿಪಿ ಅಡಿ ಬರುವ ಕಂಪೆನಿಗೆ 2,127 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ₹8703 ಕೋಟಿಗೆ ಏರಿಕೆಯಾದ ಕೆ-ಶಿಪ್ ವೆಚ್ಚ; ಸಂಕಷ್ಟದಲ್ಲಿ 10 ಪ್ರಮುಖ ರಾಜ್ಯ ಹೆದ್ದಾರಿಗಳ ನಿರ್ಮಾಣ
ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಇಡಿ ದಾಳಿ ಬೆನ್ನಲ್ಲೇ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ ಅರೆಸ್ಟ್