ವರದಿ ಇನ್ನೂ ಸರ್ಕಾರದ ಕೈಸೇರಿಲ್ಲ, ಬಂದ ನಂತರ ಪರಿಶೀಲನೆ| ಒಬಿಸಿ ಆಯೋಗದ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅಧಿಕಾರ ಸ್ವೀಕಾರ| ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಜಯಪ್ರಕಾಶ್ ಹೆಗ್ಡೆ|
ಬೆಂಗಳೂರು(ನ.27): ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಗುರುವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿನ ಹಿಂದುಳಿದ ವರ್ಗಗಳ (ಒಬಿಸಿ) ಶಾಶ್ವತ ಆಯೋಗದ ಕಚೇರಿಯಲ್ಲಿ ಹೆಗ್ಡೆ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ವರದಿಯನ್ನು ಒಪ್ಪಿಕೊಳ್ಳುವುದು ಹಾಗೂ ವರದಿಯನ್ನು ಜಾರಿ ಮಾಡುವುದು ಸರ್ಕಾರಕ್ಕೆ ಬಿಟ್ಟವಿಷಯ ಎಂದರು. ‘ಕರ್ನಾಟಕ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವೈಖರಿ ಕುರಿತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ. ಸಮೀಕ್ಷಾ ವರದಿಯನ್ನು ಆಧರಿಸಿ ಕೆಲವು ಮಾಹಿತಿಯನ್ನು ಕೇಳಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಸಣ್ಣಪುಟ್ಟ ಜಾತಿಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುವುದು. ಈ ಹಿಂದೆ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿರುವವರು ಉತ್ತಮವಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಯೋಗದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ರಾಜಕೀಯೇತರ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದಾರೆ. ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಹೇಳಿದರು.
undefined
ಜಾತಿ ಗಣತಿ ವರದಿ ಬಿಡುಗಡೆಗೆ ಬ್ರೇಕ್ ? ಬೆದರಿತೆ ಕಾಂಗ್ರೆಸ್ ಸರ್ಕಾರ
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೆಲ ಸಮುದಾಯಗಳು ಇಲ್ಲ. ಹೀಗಾಗಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಅವುಗಳ ಚರ್ಚೆ ನಡೆಸಿ ಬಗೆಹರಿಸಲಾಗುವುದು. ಹಿಂದುಳಿದ ವರ್ಗಗಳ ಪಟ್ಟಿಗೆ ಕೆಲ ಸಮುದಾಯಗಳ ಸೇರ್ಪಡೆ ಬಗ್ಗೆ ಮನವಿ ಬಂದಿವೆ. ಈ ಸಂಬಂಧ ಅಧ್ಯಯನ ನಡೆಸಲಾಗುವುದು. ಅಲ್ಲದೇ, ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.