
ಬೆಂಗಳೂರು(ನ.27): ವಿಧಾನ ಪರಿಷತ್ ಸದಸ್ಯರನ್ನಾಗಿ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್ ಅವರನ್ನು ಆಯ್ಕೆ ಮಾಡಿರುವ ಪ್ರಕ್ರಿಯೆ ಕಾನೂನು ಪ್ರಕಾರವಾಗಿದೆ ಎಂದು ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಹೈಕೋರ್ಟ್‌ಗೆ ವಿವರಿಸಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಂಡ ನಂತರ ವಿಧಾನಸಭೆ ಉಪ ಚುನಾವಣೆಯಲ್ಲಿ ಚುನಾಯಿತರಾಗದ ಈ ಮೂವರಿಗೆ ಸಚಿವ ಸ್ಥಾನ ನೀಡದಿರಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎ.ಎಸ್. ಹರೀಶ್ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳ ಪಟ್ಟಿಯಿಂದ ರಾಜ್ಯಪಾಲರನ್ನು ಕೈಬಿಡಲು ಅರ್ಜಿದಾರರಿಗೆ ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದ ಮಂಡಿಸಿ, ‘ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಎಚ್. ವಿಶ್ವನಾಥ್ ಅವರನ್ನು ಸಾಹಿತಿ ಎಂದು ಕೋಟಾದಡಿ ರಾಜ್ಯಪಾಲರು ಪರಿಷತ್‌ಗೆ ನಾಮ ನಿರ್ದೇಶನ ಮಾಡಿದ್ದಾರೆ. ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ಅಧಿಕಾರ ಇದೆ. ಹೀಗಾಗಿ, ಎಂಎಲ್‌ಸಿ ಸ್ಥಾನಕ್ಕೆ ಈ ಮೂವರ ಆಯ್ಕೆ ಕಾನೂನು ಪ್ರಕಾರವೇ ನಡೆದಿದೆ’ ಎಂದು ವಿವರಿಸಿದರಲ್ಲದೆ ಆಯ್ಕೆಗೆ ಸಂಬಂಧಿಸಿದ ಕಡತವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಎಂಟಿಬಿ, ಆರ್.ಶಂಕರ್,ಎಚ್.ವಿಶ್ವನಾಥ್‌ಗೆ ಎಂಎಲ್ಸಿ ಟಿಕೆಟ್..?
ಅಲ್ಲದೆ, ‘ಅರ್ಜಿಯಲ್ಲಿ ರಾಜ್ಯಪಾಲರನ್ನು ಪ್ರತಿವಾದಿಯಾಗಿ ಸೇರಿಸುವಂತಿಲ್ಲ. ಅರ್ಜಿಯಲ್ಲಿ ರಾಜ್ಯಪಾಲರನ್ನು ಪ್ರತಿವಾದಿಯ ಮಾಡಲಾಗಿದೆ. ಈ ಕ್ರಮ ಸರಿಯಲ್ಲ. ಜತೆಗೆ, ಅರ್ಜಿಯಲ್ಲಿ ಕೆಲವು ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದೆ’ ಎಂದು ಅಡ್ವೋಕೇಟ್ ಜನರಲ್ ಆಕ್ಷೇಪಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ರಾಜ್ಯಪಾಲರ ಹೆಸರು ಮತ್ತು ಆಕ್ಷೇಪಾರ್ಹ ಪದಗಳನ್ನು ಅರ್ಜಿಯಿಂದ ಕೈಬಿಡುವುದಾಗಿ ಸ್ಪಷ್ಟಪಡಿಸಿದರು. ಆ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪ್ರತಿವಾದಿಗಳ ಪಟ್ಟಿಯಿಂದ ರಾಜ್ಯಪಾಲರನ್ನು ಕೈಬಿಡಲು ಅರ್ಜಿದಾರರಿಗೆ ಸೂಚಿಸಿ ಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ