
ಬೆಂಗಳೂರು: ರಾಜ್ಯದ ಎಲ್ಲ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರು ಗೇಲ್‌ನಲ್ಲಿ (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ವಸಂತನಗರದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆ ಕುರಿತು ನಡೆದ ಐಒಸಿ, ಎಚ್‌ಪಿಸಿ, ಬಿಪಿಸಿ, ಗೇಲ್‌ನ ಅಧಿಕಾರಿಗಳು ಹಾಗೂ ಹೋಟೆಲ್ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರು, ವಿಶೇಷವಾಗಿ ವಾಣಿಜ್ಯ ಅನಿಲ ಸಿಲಿಂಡರ್ ಬಳಸುವ ಹೋಟೆಲ್ ಮಾಲೀಕರು ಗೇಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ನಿಯಂತ್ರಣ ಹಾಗೂ ಸಿಲಿಂಡರ್ ಪೂರೈಕೆಯಲ್ಲಿ ಪಾರದರ್ಶಕತೆ ಸಾಧಿಸಲು ನೆರವಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪೈಪ್‌ಲೈನ್ ಆಧಾರಿತ ಗ್ಯಾಸ್ ಪೂರೈಕೆ ವಿಸ್ತರಿಸಲು ಸಹಾಯಕವಾಗಲಿದೆ. ಹೀಗಾಗಿ ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಕುರಿತು ಈಗಾಗಲೇ ಕೇಂದ್ರ ಸರ್ಕಾರರದ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶೇ.20ರಷ್ಟು ಪೂರೈಸಲು ಒಪ್ಪಿಕೊಂಡಿದೆ. ಇದರ ಜೊತೆಗೆ, ಹೋಟೆಲ್ ಹಾಗೂ ಸಂಬಂಧಿತ ಉದ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕನಿಷ್ಠ ಶೇ.50 ವಾಣಿಜ್ಯ ಅನಿಲದ ಪೂರೈಕೆ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್‌ಪಿಜಿ ಸಮಸ್ಯೆ ಹಂತ ಹಂತವಾಗಿ ಪರಿಹಾರವಾಗುವ ನಿರೀಕ್ಷೆ ಇದೆ. ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯ ಸ್ಥಿತಿ ಹಾಗೂ ಸುಧಾರಣೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್. ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್, ಪ್ರಸೂನ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ